ಬೆಂಗಳೂರು, ಫೆಬ್ರವರಿ 12, 2022 (www.justkannada.in): ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಇಂದು, ನಾಳೆ ನಡೆಯಲಿದೆ.
ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್ ಸೇರಿ ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ ರು. ಹಣ ಖರ್ಚು ಮಾಡಿ ಬಲಿಷ್ಠ ತಂಡ ಕಟ್ಟಲು ಎದುರು ನೋಡುತ್ತಿವೆ.
ಕನಿಷ್ಠ 10 ಆಟಗಾರರು 10 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆ ಇದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರು. ತಲುಪಿದರೂ ಅಚ್ಚರಿಯಿಲ್ಲ.
ಶನಿವಾರ 161 ಆಟಗಾರರ ಹರಾಜು ನಡೆಯಲಿದ್ದು, ಭಾನುವಾರ ಉಳಿದ ಆಟಗಾರರ ಹರಾಜು ನಡೆಯಲಿದೆ. ಒಂದು ತಂಡ ಗರಿಷ್ಠ 90 ಕೋಟಿ ರು. ಖರ್ಚು ಮಾಡಬಹುದಾಗಿದ್ದು, ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ತಂಡಗಳು ಒಂದಷ್ಟುಹಣ ವೆಚ್ಚ ಮಾಡಿವೆ.
ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳಲಿದ್ದು, ಇದರಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ.