ಮೈಸೂರು,ಜ,6,2020(www.justkannada.in): ಇಂದು ವೈಕುಂಠ ಏಕಾದಶಿ ಸಂಭ್ರಮ ಹಿನ್ನೆಲೆ ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿ ದಿನವಾದ ಇಂದು ಸ್ವರ್ಗದ ಬಾಗಿಲು ತೆರೆಯಲಿದೆ ಎಂಬ ಪ್ರತೀತಿ ಇದೆ. ಈ ದಿನ ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿ ಯಾಗಲಿದೆ ಎಂಬ ನಂಬಿಕೆ ಜನಸಮುದಾಯದಲ್ಲಿರುವುದರಿಂದ ಎಲ್ಲಾ ದೇವಾಲಯಗಳಲ್ಲಿ ಭಕ್ತರ ದಂಡೇ ಇಂದು ನೆರೆದಿದೆ.
ಈ ನಡುವೆ ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ಬೆಳಿಗ್ಗೆ 6.30ಕ್ಕೆ ದ್ವಾರಪೂಜಾ ಮೂಲಕ ವೈಕುಂಠ ಏಕದಶಿ ಸಂಭ್ರಮ ಆರಂಭವಾಯಿತು. ಈ ವೇಳೆ ಭಕ್ತರು ಸುಪ್ರಭಾತ ಪ್ರಾರ್ಥನೆ ಸಲ್ಲಿಸಿ ದೇವರ ದರ್ಶನ ಪಡೆದರು. ಇನ್ನು ಪದ್ಮಪುರಾಣದ ಪ್ರಕಾರ ವೈಕುಂಠ ಏಕಾದಶಿ ದಿನದಂದು ವೈಕುಂಠದ್ವಾರದ ಕೆಳಗೆ ನಡೆದು ಹೋದರೇ ಭಕ್ತಿ ನಂಬಿಕೆ ಹೆಚ್ಚಾಗಲಿದೆ ಎಂಬುದು ನಂಬಿಕೆ.
12 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು. ಈ ವೇಳೆ ಭಕ್ತರಿಗೆ ಪ್ರಸಾದವನ್ನ ವಿತರಿಸಲಾಯಿತು. ದೇವಸ್ಥಾನದಲ್ಲಿ ಲಕ್ಷಾರ್ಚನೆ, ಸಂಗೀತೋತ್ಸವ, ಸ್ತೋತ್ರ ಪಠನಗಳು ಇಡೀ ದಿನ ನಡೆಯಲಿವೆ.
Key words: Today -Vaikuntha Ekadashi –celebration-ISKCON temple – Mysore.