ರೈಲ್ವೆ ಸೇತುವೆ ಕೆಳಗೆ ಶೌಚ ನೀರಿನ ಪ್ರೋಕ್ಷಣೆ!

ಬೆಂಗಳೂರು:ಜೂ-22: ಮುಖ್ಯಮಂತ್ರಿಗಳ ನಿವಾಸದಿಂದ ಅನತಿ ದೂರದಲ್ಲೇ ಇರುವ ವಿಂಡ್ಸರ್‌ ಮ್ಯಾನರ್‌, ಶೇಷಾದ್ರಿಪುರಂ ರೈಲ್ವೆ ಸೇತುವೆ ಕೆಳಗೆ ಹಾದು ಹೋಗುವ ಮುನ್ನ ವಾಹನ ಸವಾರರೇ ಕೊಂಚ ನಿಲ್ಲಿ. ಏಕೆಂದರೆ ಸೋರುತಿಹುದು ರೈಲ್ವೆ ಸೇತುವೆಯ ಮಾಳಿಗೆ!

ಬೆಂಗಳೂರಿನ ವಿವಿಧೆಡೆ ಇರುವ ರೈಲ್ವೆ ಸೇತುವೆಗಳ ಮೇಲೆ ರೈಲು ಹೋಗುವಾಗ ಕೆಳಗಡೆ ಪ್ರಯಾಣಿಸುವ ವಾಹನಸವಾರರಿಗೆ ಇನ್ನಿಲ್ಲದ ಕಿರಿಕಿರಿ, ತೊಂದರೆ ಆಗುತ್ತಿದೆ. ಮೆಜೆಸ್ಟಿಕ್‌, ಮಲ್ಲೇಶ್ವರ, ಓಕಳೀಪುರ, ವಿಂಡ್ಸರ್‌ ಮ್ಯಾನರ್‌, ಯಶವಂತಪುರ, ಕೆ.ಆರ್‌.ಪುರ ಸೇರಿ ನಗರದ ಬಹುತೇಕ ರೈಲ್ವೆ ಕೆಳಸೇತುವೆಗಳಲ್ಲಿ ಈ ಸ್ಥಿತಿ ಇದೆ.

ರೈಲು ಹೋಗುವವರೆಗೆ ನಿಂತು, ಬಳಿಕ ಹೋಗೋಣ ಎಂದರೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಆತಂಕ. ಧೈರ್ಯ ಮಾಡಿ ಮುಂದೆ ಹೋದರೆ ಶೌಚದ ನೀರು, ತ್ಯಾಜ್ಯ ಮೈಮೇಲೆ ಪ್ರೋಕ್ಷಣೆಯಾಗುತ್ತದೆ. ಇಂತಹದ್ದೊಂದು ಉಭಯ ಸಂಕಟವನ್ನು ದಿನನಿತ್ಯ ಸಾವಿರಾರು ವಾಹನ ಸವಾರರು ಅನುಭವಿಸುತ್ತಿದ್ದಾರೆ.

ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ವಿಂಡ್ಸರ್‌ ಮ್ಯಾನರ್‌ ಸೇತುವೆ ಬಳಿಯಂತೂ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರೈಲ್ವೇ ಇಲಾಖೆ ಹಳಿಗಳ ಅಡಿಗೆ ಅಳವಡಿಸಿದ್ದ ಕಬ್ಬಿಣದ ಶೀಟುಗಳು ಕಿತ್ತುಹೋಗಿವೆ. ಹೊಸ ಶೀಟು ಅಳವಡಿಸಲು ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಸಮಸ್ಯೆ ಮುಂದುವರಿದಿದೆ.

ಒಂದೆಡೆ ನಿಧಾನವಾಗಿ ಚಲಿಸುವ ರೈಲು, ಮತ್ತೂಂದೆಡೆ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪುವ ಧಾವಂತದಲ್ಲಿ ಐದು ನಿಮಿಷ ಕಾಯುವ ಬದಲಿಗೆ ತೆರಳಿದ ವಾಹನಸವಾರರ ಬಟ್ಟೆಗಳ ಮೇಲೆ ಶೌಚಾಲಯದ ತ್ಯಾಜ್ಯ ಬಿದ್ದು, ಮನೆಗೆ ವಾಪಸ್‌ ಹೋದವರೂ ಇದ್ದಾರೆ.

ರೈಲುಗಳಿಂದ ಸುರಿಯುವ ಶೌಚಾಲಯ ತ್ಯಾಜ್ಯ ನೀರಿನಿಂದ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ವಿವರಿಸಿದ ಖಾಸಗಿ ಕಂಪನಿ ಉದ್ಯೋಗಿ ರಾಜೇಂದ್ರ, ಮೂರು ವರ್ಷಗಳಿಂದ ಈ ಮಾರ್ಗದಲ್ಲಿ ಬೈಕ್‌ನಲ್ಲಿ ಓಡಾಡುತ್ತಿದ್ದೇನೆ. ರೈಲ್ವೆ ಸೇತುವೆಯ ಕೆಳಗೆ ಸಾಗುವ ಗೋಳು ಮುಗಿಯದ ಕಥೆ. ಶೀಟ್ ಅಳವಡಿಸುವ ರೈಲ್ವೆ ಇಲಾಖೆ, ಅವು ಕಿತ್ತುಹೋದ ಬಳಿಕ ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಶ್ವತ ಪರಿಹಾರಕ್ಕೆ ಹಿಂದೇಟು:

ಚಲಿಸುತ್ತಿರುವ ರೈಲಿನಿಂದ ಶೌಚಾಲಯದ ನೀರು, ತ್ಯಾಜ್ಯ ಕೆಳಗಡೆ ಬೀಳದಂತೆ ತಡೆಯಲು ರೈಲ್ವೆ ಇಲಾಖೆ ಇಂದಿಗೂ ಹಳಿಗಳ ಕೆಳಗೆ ಶೀಟುಗಳನ್ನು ಅಳವಡಿಸುವ ಪದ್ಧತಿಯನ್ನೇ ಮುಂದುವರಿಸಿದೆ. ಆದರೆ, ಪ್ರತಿದಿನ ನೀರು ಬೀಳುವುದು ಹಾಗೂ ಮಳೆಯಿಂದ ನೆನೆಯುವುದರಿಂದ ಶೀಟುಗಳು ಬಹುಬೇಗ ತುಕ್ಕು ಹಿಡಿಯುತ್ತವೆ. ಮೂರರಿಂದ ನಾಲ್ಕು ತಿಂಗಳು ಬಾಳಿಕೆ ಬಂದರೆ ಹೆಚ್ಚೆಚ್ಚು. ಇವುಗಳು ಕಿತ್ತುಹೋದ ಬಳಿಕ ಪುನಃ ಶೀಟು ಅಳವಡಿಸಲು ಹಲವು ತಿಂಗಳುಗಳೇ ಕಳೆಯುತ್ತದೆ. ಅಲ್ಲಿವರೆಗೂ ಸಾರ್ವಜನಿಕರು ಸಹಿಸಕೊಳ್ಳುವ ಪರಿಸ್ಥಿತಿಯಿದೆ.

ಶಾಶ್ವತ ಪರಿಹಾರದ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ರೈಲ್ವೆ ಇಲಾಖೆ ಹಿರಿಯ ಅಧಿಕಾರಿ, ರೈಲುಗಳಲ್ಲಿ ಬಯೋಟಾಯ್ಲೆಟ್ ನಿರ್ಮಾಣ ಒಂದು ಪರಿಹಾರ ಮಾರ್ಗವಷ್ಟೇ. ಆದರೆ, ನೀರು ಬೀಳುತ್ತಲೇ ಇರುತ್ತದೆ. ಹೀಗಾಗಿ, ಸೇತುವೆಗಳ ಕೆಳಗೆ ಸಿಮೆಂಟ್ ಸ್ಲಾಬ್‌ ಅಳವಡಿಸಿದರೆ ಪರಿಹಾರ ಸಿಗಲಿದೆ. ಇದಕ್ಕೆ ಎಂಜಿಯರಿಂಗ್‌ ವಿಭಾಗದ ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ ಎಂದು ಹೇಳಿದರು.

ಟ್ರಾಫಿಕ್‌ನಿಂದ ಹೈರಾಣು:
ಇನ್ನು ಮೆಜೆಸ್ಟಿಕ್‌, ಕೆ.ಆರ್‌.ಪುರ, ಯಶವಂತಪುರ ಸೇರಿ ಇತರಡೆಯೂ ಪರಿಸ್ಥಿತಿ ಭಿನ್ನವಾಗಿಲ್ಲ. ರೈಲು ಹೋಗುವವರೆಗೆ ವಾಹನಸವಾರರು ಕಾಯುವುದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ರೈಲು ಸೇತುವೆ ದಾಟಿದ ಬಳಿಕ ಎಲ್ಲ ವಾಹನಗಳು ಒಮ್ಮೆಲೆ ಬರುವುದಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸಂಚಾರ ನಿರ್ವಹಣೆಯೂ ಕಷ್ಟವಾಗುತ್ತದೆ ಎಂದು ಸಂಚಾರ ಪೊಲೀಸ್‌ ಅಧಿಕಾರಿ ತಿಳಿಸಿದರು. ರೈಲ್ವೆ ಸೇತುವೆಗಳಲ್ಲಿ ರೈಲು ಸಾಗುವಾಗ ಶೌಚಾಲಯದ ನೀರು, ತ್ಯಾಜ್ಯ ಬೀಳುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬಿಬಿಎಂಪಿ ಮೇಯರ್‌ ಕೂಡ ಪತ್ರ ಬರೆದಿದ್ದರು. ಈಗಾಗಲೇ ಕೆಲವೆಡೆ ಕಬ್ಬಿಣದ ಶೀಟ್ ಅಳವಡಿಸಲಾಗಿದೆ. ಎಲ್ಲೆಲ್ಲಿ ಈ ಸಮಸ್ಯೆಯಿದೆ ಎಂದು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೃಪೆ;ಉದಯವಾಣಿ

ರೈಲ್ವೆ ಸೇತುವೆ ಕೆಳಗೆ ಶೌಚ ನೀರಿನ ಪ್ರೋಕ್ಷಣೆ!

toilet-water-beneath-under-the-railway-bridge