ನವದೆಹಲಿ, ಆಗಸ್ಟ್ 2, 2021 (www.justkannada.in): ಭಾರತ ಬರೋಬ್ಬರಿ 41 ವರ್ಷಗಳ ಬಳಿಕ ವಿಶ್ವದ ಮಹೋನ್ನತ ಒಲಂಪಿಕ್ಸ್ ಕ್ರೀಡೆಗಳಲ್ಲಿ ಸೆಮಿ-ಫೈನಲ್ಸ್ ಸುತ್ತಿಗೆ ಪ್ರವೇಶಿಸಿದೆ. ಅದಲ್ಲಿಯೂ ವಿಶೇಷವಾಗಿ ಭಾರತದ ಮಹಿಳಾ ಹಾಕಿ ತಂಡ ಈ ಸಾಧನೆಯನ್ನು ಮಾಡಿದೆ. ತಂಡದ ನಾಯಕಿ ರಾಣಿ ರಾಮ್ ಪಾಲ್ ಅವರು ತಂಡವನ್ನು ಈ ಹಂತದವರೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಣಿ ರಾಮ್ ಪಾಲ್ ಅವರ ನೇತೃತ್ವದಡಿ ಭಾರತದ ಮಹಿಳೆಯರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾತು.
ಈ ಪ್ರಕಾರವಾಗಿ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಡುವ ರಾಣಿ ರಾಮ್ ಪಾಲ್ ತಮ್ಮ ಕನಸ್ಸನ್ನು ಸಾಕಾರಗೊಳಿಸುವಲ್ಲಿ ಮತ್ತಷ್ಟು ಹತ್ತಿರವಾಗಿದ್ದಾರೆ. ಕಳೆದ ವಾರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಇಂದು ದೇಶದಲ್ಲಿ ಗುರುತಿಸಲ್ಪಡುತ್ತಿರುವ ರಾಣಿ ರಾಮ್ ಪಾಲ್ ಅವರು ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ತಮಗೆ ಅಪಾರ ಬೆಂಬಲವನ್ನು ನೀಡಿದಂತಹ ತಮ್ಮ ಕೋಚ್ ಹಾಗೂ ಕುಟುಂಬಸ್ಥರ ಋಣ ತೀರಿಸಲೇಬೇಕೆಂದು ತಿಳಿಸಿದ್ದರು.
ರಾಣಿ ರಾಮ್ ಪಾಲ್ ಅವರ ಜೀವನದ ಪಯಣ ಹೂವಿನ ನಡಿಗೆಯೇನಾಗಿಲ್ಲ. ಬಾಲ್ಯದಲ್ಲಿ ಹಾಕಿ ಸ್ಟಿಕ್ ಖರೀದಿಸಲೂ ಸಹ ಈ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಆದರೂ ಸಹ 2010ರಲ್ಲಿ ನಡೆದಂತಹ ವಿಶ್ವ ಕಪ್ ನಲ್ಲಿ ರಾಷ್ಟ್ರೀಯ ಮಹಿಳಾ ಹಾಕಿ ತಂಡದಲ್ಲಿ ಅತ್ಯಂತ ಕಿರಿಯ ಆಟಗಾರ್ತಿಯಾಗಿ (ಕೇವಲ 15 ವರ್ಷ) ಸೇರ್ಪಡೆಯಾಗುವವರೆಗೂ ಆಕೆಯ ಜೀವನಚರಿತ್ರೆ ಅತ್ಯಂತ ಪ್ರಭಾವ ಬೀರುವಂತಿದೆ.
“ನಮ್ಮದು ಅತ್ಯಂತ ಬಡ ಕುಟುಂಬ. ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲದ, ಯಾವಾಗಲೂ ಸೊಳ್ಳೆಗಳಿಂದ ಕೂಡಿದ್ದ ಮನೆಯಲ್ಲಿ ನಾವು ವಾಸಿಸುತ್ತಿದ್ದೆವು. ಪ್ರತಿ ದಿನ ಎರಡು ಹೊತ್ತು ಕೂಳಿಗೂ ತಾತ್ವಾರ. ಮಳೆ ಬಂದರೆ ಎಲ್ಲಾ ಕಡೆ ನೀರು ಸೋರುತಿತ್ತು. ಇವೆಲ್ಲವನ್ನು ನೋಡಿ ನಾನು ಬೇಸತ್ತಿದ್ದೆ,” ಎನ್ನುತ್ತಾರೆ ಈಗ 26-ವರ್ಷ-ವಯಸ್ಸಿನ ರಾಣಿ.
ರಾಣಿಯವರ ತಾಯಿ ಮನೆಯೊಂದರಲ್ಲಿ ಮನೆಕೆಲಸ ಮಾಡುತ್ತಿದ್ದರೆ, ಆಕೆಯ ತಂದೆ ರಿಕ್ಷಾ ಎಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರ ಮನೆಯ ಬಳಿ ಒಂದು ಹಾಕಿ ಅಕಾಡೆಮಿಯಿತ್ತಂತೆ. ರಾಣಿ ಬಾಲ್ಯದಲ್ಲಿ ಗಂಟೆಗಟ್ಟಲೇ ಅಲ್ಲಿ ಆಟಗಾರರು ಹಾಕಿ ಆಟ ಆಡುವುದನ್ನು ನೋಡುತ್ತಾ ಕಳೆಯುತ್ತಿದ್ದಂತೆ. ಆ ಮೂಲಕ ಆಕೆಯಲ್ಲಿಯೂ ಹಾಕಿ ಆಟಗಾರ್ತಿಯಾಗುವ ಬಯಕೆ ಮೂಡಿತು. ರಾಣಿಯ ಅಪ್ಪನ ಪ್ರತಿ ದಿನದ ಕೂಲಿ ಕೇವಲ ರೂ.೮೦. ಹಾಗಾಗಿ, ಅವರಿಗೆ ತಮ್ಮ ಮಗಳಿಗೆ ಹಾಕಿ ಸ್ಟಿಕ್ ಕೊಡಿಸುವುದೂ ಸಾಧ್ಯವಾಗಲಿಲ್ಲ! “ನಾನು ಪ್ರತಿ ದಿನ ಕೋಚ್ ಬಳಿ ಹೋಗಿ ನನಗೆ ಹಾಕಿ ಕಲಿಸುವಂತೆ ಕೇಳಿಕೊಳ್ಳುತ್ತಿದೆ. ಆದರೆ ನನ್ನ ಅಪೌಷ್ಠಿಕ ದೇಹವನ್ನು ನೋಡಿ ತಿರಸ್ಕರಿಸುತ್ತಿದ್ದರು,” ಎನ್ನುತ್ತಾರೆ ರಾಣಿ.
ಆದರೆ ಧೃತಿಗೆಡದೆ ಆಕೆ ಹೇಗೋ ಒಂದು ಮುರಿದ ಒಂದು ಹಾಕಿ ಸ್ಟಿಕ್ ಸಂಪಾದಿಸಿ ಸ್ವತಃ ಅಭ್ಯಸಿಸಲು ಆರಂಭಿಸಿದಳು. ಬಹಳ ಕೇಳಿಕೊಂಡ ನಂತರ ಕೋಚ್ ಈಕೆಗೆ ತರಬೇತಿ ನೀಡಲು ಒಪ್ಪಿದರು. ಆಗಲೂ ಸಹ ರಾಣಿಯ ಸಮಯ ಉತ್ತಮವರಿಲಿಲ್ಲ. ಅಕಾಡೆಮಿಯಲ್ಲಿ ಎಲ್ಲಾ ಮಕ್ಕಳೂ ಸಹ ಪ್ರತಿ ದಿನ 500 ಎಂಎಲ್ ನಷ್ಟು ಹಾಲು ತರಬೇಕಾಗಿತ್ತು. “ಆದರೆ ನನ್ನ ಕುಟುಂಬಕ್ಕೆ 200 ಎಂಎಲ್ ನಷ್ಟು ಹಾಲು ಮಾತ್ರ ಕೊಡಿಸುವಷ್ಟು ಶಕ್ತಿಯಿತ್ತು; ಯಾರಿಗೂ ಹೇಳದೆ ನಾನು ಹಾಲಿಗೆ ನೀರು ಸೇರಿಸಿ ಕುಡಿಯುತ್ತಿದೆ. ಏಕೆಂದರೆ ನನಗೆ ಹಾಕಿ ಅಂದರೆ ಅಷ್ಟೊಂದು ಪ್ರೀತಿ.”
“ಮೇಲಾಗಿ ಪ್ರತಿಯೊಬ್ಬರು ಬೆಳ್ಳಂಬೆಳಗ್ಗೆ ತರಬೇತಿ ಆರಂಭಿಸುತ್ತಿದ್ದರು. ನಮ್ಮ ಮನೆಯಲ್ಲಿ ಗಡಿಯಾರವೂ ಇರಲಿಲ್ಲ. ಹಾಗಾಗಿ ನನ್ನ ತಾಯಿ ಎಚ್ಚರವಾಗಿದ್ದು ನಾನು ತರಬೇತಿಗೆ ಹೋಗಲು ಸಮಯವಾಯಿತೇ ಎಂದು ಆಕಾಶವನ್ನು ನೋಡಿ, ನನ್ನನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದರು.”
ಅದೃಷ್ಟವಶಾತ್ ಆಕೆಯ ಕುಟುಂಬಸ್ಥರ ಜೊತೆಗೆ ಹಾಕಿ ಕೋಚ್ ಈಕೆಯ ನೆರವಿಗೆ ಬಂದರು. “ಅವರು ನನಗೆ ಹಾಕಿ ಸ್ಟಿಕ್ ಮತ್ತು ಹಾಕಿ ಕಿಟ್ ಹಾಗೂ ಪಾದರಕ್ಷೆಗಳನ್ನು ಕೊಡಿಸಿದರು. ಜೊತೆಗೆ ಅವರ ಕುಟುಂಬದೊಂದಿಗೆ ನನಗೆ ಇರಲು ಅವಕಾಶ ನೀಡಿ, ನನ್ನ ಆಹಾರದ ಅಗತ್ಯಗಳನ್ನೂ ನೋಡಿಕೊಂಡರು. ನಾನು ಒಂದು ದಿನವೂ ತಪ್ಪಿಸದೇ ತರಬೇತಿ ಪಡೆಯುತ್ತಿದ್ದೆ,” ಎನ್ನುವಾಗ ರಾಣಿಯ ಕಣ್ಗಳಲ್ಲಿ ಹೊಳಪು ಮಿಂಚುತ್ತದೆ.
ಮೊದಲ ಪಂದ್ಯದಲ್ಲಿ ಗೆದ್ದ ನಂತರ ರಾಣಿಗೆ ರೂ.500 ರಙೂ ವೇತನ ಲಭಿಸಿತಂತೆ. ಆ ಹಣವನ್ನು ಆಕೆ ತನ್ನ ತಂದೆಗೆ ನೀಡಿದರಂತೆ. “ನಮ್ಮಪ್ಪ ಆವರೆಗೂ ಅಷ್ಟೊಂದು ಹಣವನ್ನು ತಮ್ಮ ಕೈಗಳಲ್ಲಿ ನೋಡೇ ಇರಲಿಲ್ಲ. ಇಂದಲ್ಲ ನಾಳೆ ನಾನು ನಿಮ್ಮನ್ನು ನಮ್ಮ ಸ್ವಂತ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರಂತೆ. ಅದಕ್ಕಾಗಿ ಆಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾ ಬಂದಿದ್ದಾರೆ.
ಹಲವು ರಾಜ್ಯ ಮಟ್ಟದ ಚಾಂಪಿಯನ್ ಷಿಪ್ ಗಳ ನಂತರ ರಾಣಿಗೆ ಆಕೆ 15 ವರ್ಷವಿದ್ದಾಗ ರಾಷ್ಟ್ರಮಟ್ಟದ ತಂಡದಿಂದ ಕರೆ ಬಂದಿದೆ. “ನನ್ನ ಕುಟುಂಬದ ಬೆಂಬಲದೊಂದಿಗೆ ನನ್ನ ದೇಶಕ್ಕೆ ಕೀರ್ತಿ ತರಲು ಪಣತೊಟ್ಟಿದ್ದೇನೆ. ಕ್ರಮೇಣ ತಂಡದ ನಾಯಕಿಯಾಗಿ ನೇಮಕ ಮಾಡಲ್ಪಟ್ಟೆ,” ಎನ್ನುತ್ತಾರೆ ಹೆಮ್ಮೆಯಿಂದ ರಾಣಿ ರಾಮ್‌ಪಾಲ್.
ನಾಲ್ಕು ವರ್ಷಗಳ ಹಿಂದೆ ಆಕೆ ಒಂದು ಮನೆಯನ್ನು ಖರೀದಿಸಿ ತಮ್ಮ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಆಗ ಕುಟುಂಬದ ಎಲ್ಲರೂ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಅತ್ತರಂತೆ!
ಮುರಿದ ಹಾಕಿ ಸ್ಟಿಕ್ ನೊಂದಿಗೆ ಅಭ್ಯಾಸ ಮಾಡುವುದರಿಂದ ಆರಂಭವಾದ ಈಕೆಯ ಕತೆ ಟೋಕಿಯೋ ಒಲಂಪಿಕ್ಸ್ ವರೆಗೆ ಸಾಗಿ ಬಂದಿರುವ ದಾರಿ ದೇಶದ ಎಲ್ಲಾ ಯುವಜನರಿಗೂ ಪ್ರೇರಣೆಯಲ್ಲವೇ?.
Key words: Tokyo Olympics-Captain Rani Paul – key player – leading- India’s women’s- hockey team -semifinals.