ಮೈಸೂರು,ಅಕ್ಟೋಬರ್,24,2021(www.justkannada.in): ಅ.25ರ ಸೋಮವಾರದಿಂದ 1 ರಿಂದ 5ನೇ ತರಗತಿಗಳು ಆರಂಭವಾಗುತ್ತಿದೆ. ಕಳೆದೊಂದುವರೆ ವರ್ಷದ ಬಳಿಕ ಶಾಲೆಗೆ ಆಗಮಿಸುತ್ತಿರುವ ಮಕ್ಕಳಿಗೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಭಾಶಯ ಕೋರುವುದರ ಜೊತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.
ಕೋವಿಡ್ ಪ್ರಮಾಣ ತಗ್ಗಿದರೂ ಮೈಮರೆಯುವಂತಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಶಾಲಾ ಕೊಠಡಿಗಳು, ಪೀಠೋಪಕರಣಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿರಬೇಕು. ಕೊಠಡಿಯಲ್ಲಿ ದೈಹಿಕ ಅಂತರ ಕಾಪಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಗೈಡ್ ಲೈನ್ಸ್ ಪಾಲನೆ ಮಾಡಬೇಕು. ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಶಾಲೆಗೆ ಆಗಮಿಸುವ ಮಕ್ಕಳಿಂದ ಪೋಷಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಶಾಲಾ ಸಿಬ್ಬಂದಿಗೆ ಸಚಿವ ಎಸ್.ಟಿ ಸೋಮಶೇಖರ್ ನಿರ್ದೇಶನ ನೀಡಿದ್ದಾರೆ.
ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಅನುಮತಿ ಪತ್ರವನ್ನು ಕಡ್ಡಾಯವಾಗಿ ಕಳುಹಿಸಿ ಕೊಡಬೇಕು. ಶಾಲೆಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ನೆಗಡಿ, ಕೆಮ್ಮು ಲಕ್ಷಣಗಳಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಬೇಡ, ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ.
ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿರುವುದರಿಂದ ಜಿಲ್ಲಾಧಿಕಾರಿ, ತಹಸೀಲ್ದಾರ್, ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಕ್ಕಳ ಯೋಗಕ್ಷೇಮ ವಿಚಾರಿಸಬೇಕು, ಶಾಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು. ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ಕ್ರಮವಹಿಸಬೇಕು. ಒಂದೂವರೆ ವರ್ಷದ ಬಳಿಕ ಮಕ್ಕಳು ಶಾಲೆಗೆ ಆಗಮಿಸುತ್ತಿರುವುದರಿಂದ ಅವರಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದ್ದಾರೆ.
Key words: Tomorrow – beginning – school-Minister- ST Somashekhar -instructed