ಮೈಸೂರು,ಡಿಸೆಂಬರ್,7,2020(www.justkannada.in): ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಾವಿರಾರು ರೈತರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ. ರೈತರ ಹೋರಾಟ ಬೆಂಬಲಿಸಿ ನಾಳೆ ರೈತ-ಕೃಷಿ ಕಾರ್ಮಿಕರ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ ನೀಡಲಾಗಿದೆ.
ನಾಳಿನ ಭಾರತ್ ಬಂದ್ ಗೆ ಮೈಸೂರಿನ ವಿವಿಧ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ವಿವಿಧ ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು, ಕಾರ್ಮಿಕ ಸಂಘಟನೆಗಳು ರೈತರ ಹೋರಾಟ ಬೆಂಬಲಿಸಿ ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ. ಈ ಸಂಬಂಧ ಮೈಸೂರಿನ ಟೌನ್ ಹಾಲ್ ಆವರಣದಲ್ಲಿರುವ ಬಿ. ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಮುಖಂಡರು ಸಭೆ ನಡೆಸಿ ಚರ್ಚಿಸಿದರು.
ಸಭೆಯಲ್ಲಿ ಪ್ರಗತಿಪರ ಚಿಂತಕರಾದ ಪ. ಮಲ್ಲೇಶ್, ಎನ್.ಎಸ್. ಗೋಪಿನಾಥ್, ಹೆಚ್.ಆರ್ ಶೇಷಾದ್ರಿ, ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಉಗ್ರ ನರಸಿಂಹೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇನ್ನಿತರ ನಾಯಕರು ಭಾಗಿಯಾಗಿದ್ದರು.
ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ರೈತರ ಬದುಕಿಗೆ ಮಾರಕವಾಗಿರುವ ಮೂರು ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಮುಖಂಡರು ಆಗ್ರಹಿಸಿದರು. ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ಮೈಸೂರಿನ ಜನರು ಬೆಂಬಲ ನೀಡಬೇಕು. ರೈತರ ಒಳಿತಿಗಾಗಿ ಕರೆ ನೀಡಿರುವ ನಾಳಿನ ಬಂದ್ ಯಶಸ್ವಿಯಾಗಲು ಜನ ಸಾಮಾನ್ಯರು ಸಹಕರಿಸಬೇಕೆಂದು ಮುಖಂಡರು ಮನವಿ ಮಾಡಿದರು.
ಒಕ್ಕಲಿಗ ಸಂಘದಿಂದ ಬೆಂಬಲ.
ನಾಳಿನ ಭಾರತ್ ಬಂದ್ ಗೆ ಒಕ್ಕಲಿಗ ಸಂಘದಿಂದ ಬೆಂಬಲ ನೀಡಲಾಗುತ್ತದೆ ಎಂದು ಮೈಸೂರು-ಚಾಮರಾಜನಗರ ಒಕ್ಕಲಿಗ ಸಂಘದ ಅಧ್ಯಕ್ಷ ಜಿ.ಮಂಜು ಹೇಳಿದ್ದಾರೆ. ದೇಶಾದ್ಯಂತ ಅನ್ನದಾತರು ಹೋರಾಟ ಮಾಡುತ್ತಿದ್ದಾರೆ. ಅನ್ನದಾತರಿಗೆ ಬೆಂಬಲವಾಗಿ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆ ಅನ್ನದಾತರ ಹೋರಾಟಕ್ಕೆ ಮೈಸೂರು ಚಾಮರಾಜನಗರ ಒಕ್ಕಲಿಗ ಸಂಘ ಸಾಥ್ ನೀಡಲಿದೆ. ರೈತರ ಜೊತೆ ಪ್ರತಿಭಟನೆ ನಡೆಸಿ ಹೋರಾಟಕ್ಕೆ ಬೆಂಬಕ ನೀಡುತ್ತೇವೆ ಎಂದಿದ್ದಾರೆ.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನೈತಿಕ ಬೆಂಬಲ…
ನಾಳೆ ಭಾರತ್ ಬಂದ್ ಗೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ನೈತಿಕ ಬೆಂಬಲ ನೀಡಿದೆ. ಟ್ರಾವೆಲ್ ಅಸೋಸಿಯೇಷನ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಲಾಕ್ಡೌನ್ ನಿಂದಾಗಿ ಟ್ರಾವೆಲ್ಸ್ ಉದ್ಯಮ ನೆಲಕಚ್ಚಿದೆ. ಮೊನ್ನೆಯಷ್ಟೇ ಕರ್ನಾಟಕ ಬಂದ್ ಆಗಿದ್ದರಿಂದ ಸಾಕಷ್ಟು ನಷ್ಟ ಆಗಿದೆ. ಲಾಕ್ಡೌನ್ ಬಳಿಕ ಟ್ರಾವೆಲ್ಸ್ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಇದೀಗ ಮತ್ತೆ ಬಂದ್ ಮಾಡಿದ್ರೆ ನಮ್ಮ ಉದ್ಯಮಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಬಂದ್ ಗೆ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿ ಎಂದಿನಂತೆ ಕಾರ್ಯನಿರ್ವಹಿಸುತ್ತೇವೆ ಎಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಹೇಳಿದ್ದಾರೆ.
Key words: Tomorrow – Bharat Bandh- Declaration -support – various organizations – Mysore