ಮೈಸೂರು,ಜುಲೈ,28,2023(www.justkannada.in): ಮೈಸೂರಿನಲ್ಲಿ ನಾಳೆ ನಟ ಪ್ರಕಾಶ್ ರಾಜ್ ನಿರ್ಮಿತ ನಿರ್ದಿಗಂತ ಸಂಸ್ಥೆಯಿಂದ “ಗಾಯಗಳು” ನಾಟಕ ಪ್ರದರ್ಶನವನ್ನ ಆಯೋಜಿಸಲಾಗಿದೆ.
ಶ್ರೀರಂಗಪಟ್ಟಣದ ಬಳಿ ಇರುವ ನಟ ಪ್ರಕಾಶ್ ರಾಜ್ ಅವರ ಫಾರಂ ಹೌಸ್ ಬಳಿ ನಟನಾ ಪ್ರಯೋಗ ಶಾಲೆ ನಿರ್ಮಾಣವಾಗಿದೆ. ಬೇರೆ ಬೇರೆ ನಟನಾ ಶಾಲೆಗಳಲ್ಲಿ ಕಲಿತು ಬಂದ ಪ್ರತಿಭೆಗಳಿಗೆ ಮತ್ತಷ್ಟು ಅಭ್ಯಾಸ ಮಾಡಲು ನಟನಾ ಪ್ರಯೋಗ ಶಾಲೆ ಮೂಲಕ ನಟ ಪ್ರಕಾಶ್ ರಾಜ್ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಪ್ರಕಾಶ್ ರಾಜ್ ಅರ್ಪಿಸುವ ಶ್ರೀಪಾದ ಭಡ್ ನಿರ್ದೇಶನ ಮತ್ತು ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ‘ಗಾಯಗಳು’ ಎಂಬ ನಾಟಕ ನಾಳೆ ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಟ ಪ್ರಕಾಶ್ ರೈ, ನಾಳೆ ಮೈಸೂರಿನ ನಟನ ರಂಗಮಂದಿರದಲ್ಲಿ ನಾಟಕ ಆಯೋಜನೆ ಮಾಡಲಾಗಿದೆ.ನಾಟಕದಲ್ಲಿ ಸುಮಾರು 14ಕ್ಕೂ ಹೆಚ್ಚು ಪಾತ್ರಧಾರಿಗಳು ಇರುತ್ತಾರೆ ಎಂದರು.
ಜಾಗತಿಕ ಯುದ್ದ, ಕೋಮುಗಲಭೆ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಕಥಾ ಹಂದರ ಹೊಂದಿದ್ದು, ದೇಶದಲ್ಲಿ ಉಂಟಾಗಿರುವ ಕೋಮುಗಲಭೆ ಕುರಿತಾಗಿ ಬಿಂಬಿತವಾಗಿರುವ ನಾಟಕ ಇದಾಗಿದೆ. ಗಾಯಗಳು ಎಂದರೆ ಯುದ್ಧ, ಗಲಾಟೆ, ಕೋಮುಗಲಭೆ ಸೇರಿದಂತೆ ಹಲವು ಹಿಂಸಾಚಾರದ ನೋವಿನ ಸಂಗತಿಗಳ ಬಗ್ಗೆ ಪ್ರದರ್ಶನ. ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಕಲಹಗಳ ಬಗ್ಗೆ ಜನರೇ ಅರಿತಿದ್ದಾರೆ. ಕಲೆ ಒಂದು ನಮ್ಮ ಭಾಷೆ, ಈ ಭಾಷೆಯ ಮೂಲಕ ನಾವು ವ್ಯಕ್ತಪಡಿಸುತ್ತಿದ್ದೇವೆ. ರಾಜ್ಯದ ನಾನಾ ಕಡೆಗಳಲ್ಲಿ ಕಲಾವಿದರನ್ನ ಪ್ರೋತ್ಸಾಹಿಸಲು ನಿರ್ದಿಗಂತ ಸಂಸ್ಥೆ ಮುಂದಾಗಿದೆ. ಮಣಿಪುರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಲಾಗುವುದು. ಹತ್ಯೆಯಿಂದ ನೋವಾಗಿರುವ ಹೆಣ್ಣು ಮಗಳು ನಮ್ಮ ಮನೆಯವಳು ಎಂದುಕೊಳ್ಳಬೇಕು. ನಮ್ಮ ಬೆರಳಿಗೆ ಪೆಟ್ಟಾದರೆ ಮಾತ್ರ ಅದು ನಮಗೆ ಗಾಯ. ಅದೇ ಏಕಲವ್ಯನ ಬೆರಳಿಗಾದರೆ ಅದು ಸಮಾಜಕ್ಕಾದ ಗಾಯ. ಪ್ರಸ್ತುತ ವಿದ್ಯಾಮಾನದ ವಸ್ತುಸ್ಥಿತಿಯನ್ನು ರಂಗಭೂಮಿಯ ಭಾಷೆಯ ಮೂಲಕ ತಿಳಿಸಲು ಹೊರಟಿದ್ದೇವೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ನಾಳೆ ಮೈಸೂರಿನ ನಟನ ಹಾಗೂ ಆಗಸ್ಟ್ 1ರಂದು ಕಲಾಮಂದಿರದ ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನವಿದೆ. ನಂತರ ರಾಜ್ಯದ ಸುಮಾರು 60 ಕಡೆಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ನಂತರ ನಾಟಕಕ್ಕೆ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಅದನ್ನ ನೋಡಿಕೊಂಡು ಇನ್ನಷ್ಟು ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಿರ್ದಿಗಂತ ಕಲಾವಿದ ಪ್ರಕಾಶ್ ರಾಜ್ ಅವರ ಚಿಂತನೆಯ ಕೂಸಾದ ನಿರ್ದಿಗಂತವು ಸಮಕಾಲನ ರಂಗಭೂಮಿಯ ಬಿಕ್ಕಟ್ಟುಗಳ ಬೇರಿಗೇ ಲಗ್ಗೆಯಿಡುವ ಗುರುಯಿರಿಸಿಕೊಂಡಿದೆ. ರಂಗಭೂಮಿಯ ನಮ್ಮ ಆರಂಭದ ಅನುಭವಗಳನ್ನು ಚಲಚನಚಿತ್ರ ವೃತ್ತಿಬದುಕಿನಲ್ಲಿ ಕಂಡ ಅಭೂತಪೂರ್ವ ಯಶಸ್ಸು ಮತ್ತು ಅಪಾರ ಜನಪ್ರಿಯತೆಯನ್ನು ದೇಶದಿ ಸಂಭವಿಸುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಗಳ ಜೊತೆ ಅವರು ನಿರಂತರ ತೊಡಗಿಸಿಕೊಂಡು ನಡೆಸುತ್ತಿರುವ ಸಂಘರ್ಷಗಳನ್ನು ಆಧರಿಸಿ ಪ್ರಕಾಶ್ ಅವರು ಸಮಸ್ಯೆಯ ಮೂಲವನ್ನು ಶೋಧಿಸಿದ್ದಾರೆ. ಆ ಸಮಸ್ಯೆಗಳಿಂದರೆ ದೃಷ್ಟಿಕೋನ, ಗ್ರಹಿಕೆ, ಆಯೋಜನೆ ಮತ್ತೆ ಕಲ್ಪನೆಗಳರುವ ಅಭಾವ. ಸಂಪನ್ಮೂಲ ಕೊರತೆಯನ್ನಂತೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಬಿಕ್ಕಟ್ಟಿಗೆ ಭೌತಿಕವಾದ ಆಯಾಮವೂ ಇದೇ. ಅಸ್ತಿತ್ವದಲ್ಲಿರುವ ವ್ಯವಸ್ಥೆಯಿಂದ ಬೋಧಿಸಿದ ಅಥವಾ ಬೋಧಿಸದೇ ಹೋದ ಸಂಗತಿಗಳಿಂದ ಕಲಿತ ಅಥವಾ ಕಲಿಯದೇ ಹೋದ-ಹೊರಬಂದ ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಆಚರಣೆಗೆ ತರಲು ಅವರಿಗೆ ಅವಕಾಶಗಳಿಲ್ಲ. ಇದ್ದರೂ ಅತ್ಯಂತ ಕಡಿಮೆ. ನಟಿಸಬೇಕು ಎಂಬ ಅದಮ್ಯ ಉತ್ಸಾಹದ ಈ ಪ್ರತಿಭೆಗಳು ಸೌಲಭ್ಯವಂಚಿತವಾದ, ಅತ್ಯಂತ ನೀರಸವಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಅಡೆತಡೆಗಳು ಮತ್ತು ಅನಿಶ್ಚಿತ ಭವಿಷ್ಯದ ನಡುವೆಯೂ ಕಲಾಮಾಧ್ಯಮದ ಬಗೆಗಿರುವ ತಮ್ಮ ಹಸಿವನ್ನು ಹೇಗೋ ಉಳಿಸಿಕೊಂಡಂತೆ ಈ ಪ್ರತಿಭೆಗಳು ಬರುತ್ತಿವೆ. ನಿರ್ದಿಗಂತ ಎಂಬುದು ರಂಗಭೂಮಿಯ ಎಲ್ಲ ಸೃಜನಶೀಲ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಕಾಶ್ ಅವರು ಕೈಗೊಂಡಿರುವ ಒಂದು ಕ್ರಿಯಾತ್ಮಕ ಪ್ರಯೋಗ, ಅದನ್ನು ಅವರು ‘ಕಾವು ಪೆಟ್ಟಿಗೆ’ (incubator) ಎಂದು ಕರೆಯುತ್ತಾರೆ, ರಂಗಭೂಮಿಯ ಕಿಟಕಿಯಿಂದಲೇ ಲೋಕವನ್ನು ಅರ್ಥಮಾಡಿಕೊಳ್ಳುತ್ತಾ ಬಂದಿರುವ ಪ್ರಕಾಶ್ ರಾಜ್ ಅವರು ಸಹಜವಾಗಿಯೇ ತಮ್ಮ ಪ್ರಯೋಗಕ್ಕೆ ರಂಗಭೂಮಿಯನ್ನೇ ಆರಿಸಿಕೊಂಡಿದ್ದಾರೆ.
Key words: Tomorrow Gaayagalu- actor -Prakash Raj -produced – Nirdiganta Institute.