ಬೆಂಗಳೂರು,ಸೆಪ್ಟಂಬರ್,27,2020(www.justkannada.in): ಕೆಲವು ಸಂಘಟನೆಗಳು ನಾಳೆ (ಸೋಮವಾರ) ಬಂದ್ ಗೆ ಕರೆ ಕೊಟ್ಟಿರುವುದರಿಂದ ರಾಜ್ಯಾದ್ಯಂತ ಸಾರಿಗೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರೆಯಲಿದೆ. ಜನತೆಗೆ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ್ ಸವದಿ, ಬಂದ್ ಹಿನ್ನೆಲೆಯಲ್ಲಿ ಬಸ್ಸುಗಳಿಗೆ ಮತ್ತು ಇತರ ಸರ್ಕಾರಿ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಹೆಚ್ಚಿನ ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕೆಂದು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೋರಲಾಗಿದೆ. ಅಷ್ಟೇ ಅಲ್ಲ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟು ಮಾಡಲು ಯಾರೇ ಯತ್ನಿಸಿದರೂ ಕೂಡ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ರಾಜ್ಯ ಸರ್ಕಾರವು ರೈತರ ಹಿತಾಸಕ್ತಿಗೆ ಪೂರಕವಾಗಿಯೇ ಎ.ಪಿ.ಎಂ.ಸಿ.ಕಾಯ್ದೆ, ಭೂ ಸುಧಾರಣಾ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಪ್ರತಿಭಟನಾನಿರತರ ಮನವೊಲಿಸಲು ಸನ್ಮಾನ್ಯ ಮುಖ್ಯಮಂತ್ರಿಗಳು ಸಭೆಯನ್ನು ನಡೆಸಿದ್ದರು. ನಿನ್ನೆ ವಿಧಾನ ಮಂಡಲದ ಕಲಾಪದಲ್ಲಿಯೂ ಈ ಮಸೂದೆಗಳಿಂದ ರೈತರಿಗೆ ಉಂಟಾಗಲಿರುವ ಲಾಭಗಳ ಬಗ್ಗೆಯೂ ನಮ್ಮ ಸರ್ಕಾರ ಸ್ಪಷ್ಟನೆ ನೀಡಿತ್ತು. ಆದರೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಬಂದ್ ನಡೆಸಲು ನಿರ್ಧರಿಸಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಬೇಸರ ವ್ಯಕ್ತಪಡಿಸಿದರು.
ಕೊರೋನಾ ಆತಂಕದಲ್ಲಿ ರಾಜ್ಯದ ಜನ ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರತಿಭಟನೆ, ಬಂದ್ ಗಳನ್ನು ನಡೆಸುವುದು ಸರಿಯಲ್ಲ. ಬಂದ್ ನಡೆಸುವ ನಿರ್ಧಾರ ಸಾರ್ವಜನಿಕರ ಹಿತದೃಷ್ಠಿಯಿಂದ ಕೈಬಿಟ್ಟು ಸಹಕರಿಸಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.
Key words: Tomorrow -Karnataka Bandh-DCM Laxman Saudi –ksrtc-bus