ಮೈಸೂರು,ಸೆ,21,2019(www.justkannada.in): 370 ನೇ ವಿಧಿಯ ರದ್ದತಿ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, 370ನೇ ವಿಧಿಯ ರದ್ದತಿ ಕುರಿತು ಜನಜಾಗೃತಿ ಮೂಡಿಸಲು ನಾಳೆ ,22.9.2019ರಂದು ಬೆಂಗಳೂರಿಗೆ ರಾಷ್ಟ್ರೀಯ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಸಚಿವ ಅವರು 370ನೇ ಆರ್ಟಿಕಲ್, 35ಎ ರದ್ದತಿಯನ್ನು ಸಂವಿಧಾನ ಚೌಕಟ್ಟಿನಲ್ಲಿ ಮಾಡಿದ್ದು, ಒಂದು ದೇಶ-ಒಂದು ಸಂವಿಧಾನ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
150ನೇ ಗಾಂಧಿ ಜಯಂತಿ ವರ್ಷಾಚರಣೆಯ ಅರ್ಥಪೂರ್ಣ ಆಚರಣೆ ಮಾಡಬೇಕು. ಆ ದಿನದಂದ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು ಎಂದು ತಿಳಿಸಲು ಇಂದು ರಾಷ್ಟ್ರೀಯ ಅಧ್ಯಕ್ಷರು ಅಮಿತ್ ಶಾ, ಕಾರ್ಯಾಧ್ಯಕ್ಷರು ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಅದೇ ವಿಚಾರವನ್ನು ಇಂದು ಸಂಜೆ ರಾಜ್ಯದ ಎಲ್ಲಾ ಸಂಸದರು ಹಾಗೂ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಯಲಿದೆ ಎಂದು ರವಿಕುಮಾರ್ ಅವರು ತಿಳಿಸಿದರು.
ಬಿಜೆಪಿಯು ಸಂಘಟನಾ ಪರವಾದ ಹಿನ್ನೆಲೆಯಲ್ಲಿ ಈ ತಿಂಗಳ 30ರ ಒಳಗಡೆ 58 ಸಾವಿರ ಬೂತ್ ಗಳಲ್ಲಿ ಬೂತ್ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಚುನಾವಣೆ ಆದ ಮೇಲೆ ಬೂತ್ ಸಮಿತಿ ರಚನೆ ಬಿಜೆಪಿ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕೆಂದು ತಿಳಿಸಿದೆ. ಡಿಸೆಂಬರ್ ತಿಂಗಳ ಒಳಗಡೆ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ಆಂತರಿಕ ಚುನಾವಣೆಯು ನಡೆಯಲಿದೆ. ಡಿಸೆಂಬರ್ 15ರ ಒಳಗಡೆ ಬಿಜೆಪಿ ಸಂಘಟನಾ ಪರ್ವ ಮುಕ್ತಾಯಗೊಳ್ಳಲಿದೆ ಎಂದು ಎಂಎಲ್ ಸಿ ರವಿಕುಮಾರ್ ತಿಳಿಸಿದರು.
ಉಪಚುನಾವಣೆಗೆ ಸಂಬಂಧಿಸಿದಂತೆ ತಯಾರಿ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ, ಪಕ್ಷದಲ್ಲಿ ನಮ್ಮ ಮುಖಂಡರು ಸಭೆ ಕರೆದು ಉಪಚುನಾವಣೆ ತಯಾರಿ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರವಿ ಕುಮಾರ್ ತಿಳಿಸಿದರು.
ರಾಜ್ಯದಲ್ಲಿ ನೆರೆ ಬಂದಿರುವುದರ ಕುರಿತು ರಾಜ್ಯ ಸರ್ಕಾರ ಸೂಕ್ತವಾದ ರೀತಿಯಲ್ಲಿ ಕ್ರಮಕೈಗೊಂಡು ನೆರೆ ಸಂತ್ರಸ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ ಎಂದು ಹೇಳಿದರು.
Key words: Tomorrow- program – repeal – Article 370-bjp- MLC-N. Ravikumar