ಮೈಸೂರು,ಆಗಸ್ಟ್,7,2024 (www.justkannada.in): ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಾರೆ. ಹಾಗಾದ್ರೆ ರೀಡೂ ಪಿತಾಮಹ ಯಾರು? ರೀಡೂ ಹೆಸರಿನಲ್ಲಿ 884 ಎಕರೆ ಡಿ ನೋಟಿಫೈಕೇಷನ್ ಮಾಡಲಾಯಿತು. ಇದು ಅಕ್ರಮ ಅಲ್ವಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಗುಡುಗಿದರು.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ ರವಿ, ನಾವು ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಗಳ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದೇವೆ. ಇದೊಂದು ಜನಾಂದೋಲನ ಆಗಿ ಮಾರ್ಪಟ್ಟಿದೆ. ಇದನ್ನು ಕಂಡು ಕಾಂಗ್ರೆಸ್ ಭಯಭೀತಿಗೊಂಡಿದೆ. ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಾರೆ. ಮುಡಾದಲ್ಲಿ ನಡೆದಿರೋದು, ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಕಪ್ಪು ಚುಕ್ಕೆ ಅಲ್ವ ? ಪ್ರತಿ ಹುದ್ದೆಗೆ ರೇಟ್ ಕಾರ್ಡ್ ನಿಗದಿ ಮಾಡಿ ವರ್ಗಾವಣೆ ಮಾಡುತ್ತಿರೋದು ಕಪ್ಪು ಚುಕ್ಕೆ ಅಲ್ವ ? ಇದೆಲ್ಲವು ತಮ್ಮ ಆಡಳಿತದ ಕಳಂಕ ಅಲ್ವ ? ಬೆಂಗಳೂರಿನಲ್ಲಿ ಪ್ರತಿ ಅಡಿಗೂ 100 ರೂ. ಲಂಚ ಕೊಡಬೇಕು. ಸಾರ್ವಜನಿಕ ಬದುಕು ಸ್ವಚ್ಛವಾಗಿದ್ದರೆ ಮಾತ್ರ ಕಳಂಕರಹಿತ ಆಡಳಿತ ಅನ್ನಬಹುದು. ನಿಮ್ಮ ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ಮುಡಾ ವಿಚಾರದಲ್ಲಿ ನೀವು ಅಮಾಯಕ ಅಲ್ಲ. ಕೆಸರೆ ಸರ್ವೇ ನಂಬರ್ 464ರ ಜಾಗ 1997ರಲ್ಲಿ ನೋಟಿಫಿಕೇಷನ್ ಆಗಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು ? ನೋಟಿಫಿಕೇಷನ್ ಆಗಿರುವ ಜಾಗ ಡಿನೋಟಿಫೈ ಆಗಲ್ಲ. ಡಿನೋಟಿಫಿಕೇಷನ್ ಮಾಡಿದ ಪ್ರಭಾವಿ ಯಾರು ? ನನ್ನ ಪ್ರಕಾರ ನೀವೇ ಆ ಪ್ರಭಾವಿ ವ್ಯಕ್ತಿ. ಆಗ ನೀವು ಉಪಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ರಿ. ನೀವು ಪ್ಲ್ಯಾನ್ ಮಾಡಿಯೇ ಅಭಿವೃದ್ಧಿ ಆಗಿರುವ ಜಾಗ ಡಿನೋಟಿಫಿಕೇಷನ್ ಮಾಡಿಸಿದ್ದೀರಿ ಎಂದು ಸಿ.ಟಿ ರವಿ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧವೇ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಇದರ ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡಬೇಕು. ಮುಡಾ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ಹಾಗೂ ಸಿಬಿಐ ನಿಂದ ತನಿಖೆಯಾಗಬೇಕು. ನೀವು ಬಚಾವ್ ಆಗಲು ಯಡಿಯೂರಪ್ಪ ಅವರತ್ತ ಬೊಟ್ಟು ಮಾಡಬೇಡಿ. ಯಡಿಯೂರಪ್ಪ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ, ಹೆಚ್. ಡಿ ಕುಮಾರಸ್ವಾಮಿ ತಪ್ಪು ಮಾಡಿದ್ದರು ಶಿಕ್ಷೆ ಆಗಲಿ ಎಂದು ಸಿಟಿ ರವಿ ಹೇಳಿದರು.
Key words: 884 Acre, Redoo, Illegal, CT Ravi, CM Siddaramaiah