ಮೈಸೂರು,ಮೇ,29,2024 (www.justkannada.in): ಮೂಳೆ ಶಸ್ತ್ರಚಿಕಿತ್ಸೆ ಮಾಡಲು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆ.ಆರ್ ಆಸ್ಪತ್ರೆ ಮೂಳೆ ಶಸ್ತ್ರ ಚಿಕಿತ್ಸಕ ಹಾಗೂ ಮೈಸೂರು ವೈದ್ಯಕೀಯ ವಿದ್ಯಾಲಯದ ಅಸ್ಥಿ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪುಟ್ಟಸ್ವಾಮಿಗೆ ಜೈಲು ಶಿಕ್ಷೆ ಹಾಗೂ ದಂಡವನ್ನ ವಿಧಿಸಿ ಮೈಸೂರಿನ 3ನೇ ಅಪರ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಧೀಶರ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರಿನ ಕೂಡಿಗೆಹಳ್ಳಿ ನಿವಾಸಿ ಎಸ್.ಆರ್ ದೇವರಾಜು ಎಂಬುವವರು ಡಾ. ಪುಟ್ಟಸ್ವಾಮಿ ವಿರುದ್ದ 12-04-2017 ರಂದು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟದ್ದ ಬಗ್ಗೆ ದೂರು ನೀಡಿದ್ದರು. ಎಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ದೂರು ದಾಖಲಿಸಿಕೊಂಡು ವರದಿ ಸಲ್ಲಿಸಿದ್ದರು.
ದೂರುದಾರ ದೇವರಾಜು ಸಂಬಂಧಿ ಶಿವಕುಮಾರ್ ಅಪಘಾತಕ್ಕೀಡಾಗಿ ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಶಿವಕುಮಾರ್ ಅವರ ಮೂಳೆ ಜಜ್ಜಿ ಹೋಗಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಲು 40 ಸಾವಿರ ರೂಗಳನ್ನ ನೀಡಬೇಕೆಂದು ಕೆ.ಆರ್ ಆಸ್ಪತ್ರೆ ಶಸ್ತ್ರ ಚಿಕಿತ್ಸಕರಾದ ಡಾ.ಪುಟ್ಟಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ 12-4-2017ರಲ್ಲಿ 26 ಸಾವಿರ ರೂ ಲಂಚವನ್ನ ಸ್ವೀಕರಿಸುವಾಗ ತಮ್ಮ ಸ್ವಂತ ಕ್ಲಿನಿಕ್ ನಲ್ಲಿ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
3-8-2019 ರಂದು ಎಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶೇಖರ್ ಅವರು 21 ಸಾಕ್ಷಿಗಳ ಸಾಕ್ಷಿ ಪಟ್ಟಿ ಹಾಗೂ ದಾಖಲೆಗಳನ್ನ ಮೈಸೂರಿನ 3ನೇ ಅಪರ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದೀಗ ಸದರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಭಾಗ್ಯ ಅವರು ಆರೋಪಿ ಪುಟ್ಟಸ್ವಾಮಿ ತಪ್ಪಿತಸ್ಥರು ಎಂದು ಪರಿಗಣಿಸಿ ಕಲಂ7 ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡ , ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಜೆ ಮತ್ತು ಕಲಂ 13(1)(ಡಿ) ರೆ/ವಿ13(2) ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ-1988ರಲ್ಲಿ 4 ವರ್ಷ ಸಜೆ ಹಾಗೂ 50 ಸಾವಿರ ದಂಡ ಹಾಗೂ ದಂಡವನ್ನ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆಯನ್ನ ವಿಧಿಸಿ ತೀರ್ಪು ನೀಡಿದ್ದಾರೆ.
Key words: Allegation, bribe, Orthopedic surgeon, sentenced, jail