ಅಮೃತ ಸಿಂಚನ – 45: ಭವಿಷ್ಯವನ್ನರಿತರೆ ಸ್ವಾರಸ್ಯವಿರದು

ಮೈಸೂರು,ಜೂನ್,14,2021(www.justkannada.in):

ನನ್ನ ಪರಿಚಯದ ಹೆಣ್ಣುಮಗಳೊಬ್ಬಳು ಒಮ್ಮೆ ನನ್ನಲ್ಲಿಗೆ ಬಂದು, “ತಿಲಕ್ ನಗರದಲ್ಲಿ ಒಂದು ಶನೈಶ್ಚರ ದೇವಸ್ಥಾನವಿದೆ. ಅಲ್ಲಿಗೆ ಪ್ರತಿ ಬುಧವಾರ ಮತ್ತು ಶನಿವಾರ ಒಬ್ಬ ವ್ಯಕ್ತಿ ಬರುತ್ತಾರಂತೆ. ಅವರು ಜನರ ತೊಂದರೆಗಳಿಗೆ ಪರಿಹಾರ ಸೂಚಿಸುವುದರ ಜೊತೆಗೆ, ನೀವು ಯಾತಕ್ಕೆ ಬಂದಿದ್ದೀರಿ, ನಿಮ್ಮ ತೊಂದರೆಗಳೇನು, ನಿಮಗೆ ಮುಂದೆ ಏನಾಗುತ್ತದೆ – ಎಂಬುದನ್ನು ಹೇಳ್ತಾರಂತೆ. ನಾನು ನನ್ನ ಮಗನನ್ನು ಕರೆದುಕೊಂಡು ಹೋಗಿ ಅವನ ವಿದ್ಯಾಭ್ಯಾಸ, ಜೀವನ – ಇತ್ಯಾದಿ ವಿವರಗಳನ್ನೆಲ್ಲಾ ಅವರಲ್ಲಿ ಕೇಳಿ ತಿಳಿದುಕೊಳ್ಳಬೇಕೆಂದಿದ್ದೇನೆ. ನೀವು ಏನು ಹೇಳ್ತೀರಿ?”- ಅಂತ ಪ್ರಶ್ನಿಸಿದಳು.jk

ಅದಕ್ಕೆ ನಾನು, “ನೋಡಮ್ಮಾ, ಆ ವ್ಯಕ್ತಿ ನಿನ್ನ ಮಗನ ಭವಿಷ್ಯವನ್ನು ಸರಿಯಾಗಿಯೇ ಹೇಳಬಹುದು. ಆ ಶಕ್ತಿ ಆತನಲ್ಲಿ ಇರಲೂಬಹುದು. ಅದನ್ನು ತಿಳಿಯುವುದರಿಂದ ನಿನಗಾಗುವ ಪ್ರಯೋಜನವೇನು? ಭವಿಷ್ಯತ್ತಿನಲ್ಲಿ ನಿನಗೆ ಒಳ್ಳೆಯದೇ ಆಗುತ್ತದೆ ಅಂತ ಹೇಳಿದರೆ ಸರಿ. ಅಕಸ್ಮಾತ್ ಅಪಘಾತ, ಕಾಯಿಲೆ, ಸಾವು-ನೋವು – ಇತ್ಯಾದಿಗಳನ್ನು ಹೇಳಿದರೆ ನೀನು ಮುಂದಿನ ಬದುಕನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯವಾಗುತ್ತದೆಯೇ? ಭವಿಷ್ಯದ ಸಂಗತಿಗಳನ್ನು ತಿಳಿದೂ ಸ್ಥಿತಪ್ರಜ್ಞನಂತೆ ಇರಲು ನೀನೇನು ಶ್ರೀಕೃಷ್ಣನೇ?” ಅಂತ ಪ್ರಶ್ನಿಸಿದೆ.

“ಹಾಗಾದರೆ ಭವಿಷ್ಯ ತಿಳಿದುಕೊಳ್ಳಬೇಡ ಅಂತೀರಾ?”

“ನೋಡಮ್ಮಾ, ನನ್ನ ಅಭಿಪ್ರಾಯದಲ್ಲಿ ಭವಿಷ್ಯವನ್ನು ತಿಳಿಯಲು ಪ್ರಯತ್ನಿಸಲೇ ಬಾರದು. ಅದರಿಂದ ಜೀವನದಲ್ಲಿ ಸ್ವಾರಸ್ಯ ಉಳಿಯುವುದಿಲ್ಲ. ಮುಂದೇನು ಮುಂದೇನು ಎಂಬ ಕುತೂಹಲ ಇರುವುದೇ ಜೀವನದಲ್ಲಿನ ಸ್ವಾರಸ್ಯ. ಸ್ವಾರಸ್ಯವೇ ಇಲ್ಲದ ಸಪ್ಪೆ ಜೀವನಕ್ಕಾಗಿ ಭವಿಷ್ಯ ವರಿಯಬೇಕೇ? ಭವಿಷ್ಯವನ್ನು ಮೊದಲೇ ತಿಳಿದು ಜೀವನ ನಡೆಸುವುದೆಂದರೆ, ಕಥೆಯನ್ನು ಮೊದಲೇ ತಿಳಿದು ಸಿನೆಮಾ ನೋಡಿದ ಹಾಗೆ ಸ್ವಾರಸ್ಯಇರುವುದಿಲ್ಲ.

ಮುಂದುವರಿದು ನಾನು ಹೇಳತೊಡಗಿದೆ:

“ಆಯ್ತಮ್ಮಾ, ಭವಿಷ್ಯವನ್ನು ನೀನು ತಿಳಿದುಕೊಂಡೆ ಅಂತಲೇ ಇಟ್ಟುಕೊಳ್ಳೋಣ. ಅದರಿಂದ ನೀನು ಏನು ಸಾಧಿಸಬಲ್ಲೆ? ಆಗಬಹುದಾದ ತೊಂದರೆಗಳನ್ನು ತಪ್ಪಿಸ ಬಲ್ಲೆಯಾ? ಜನ್ಮಾಂತರ ಕರ್ಮಫಲಗಳನ್ನು, ವಿಧಿಲಿಖಿತವನ್ನು ಬದಲಿಸುವ ಸಾಮರ್ಥ್ಯ ನಿನಗುಂಟೆ? ಖಂಡಿತ ಇಲ್ಲ ಅಲ್ಲವೇ?”

“ನೀವು ಹೇಳೋದು ನಿಜ. ನಾನು ಏನನ್ನೂ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ.”

“ಹೌದಲ್ಲವಾ? ಹಾಗಾಗಿ, ನೀನು ಸರಿಯಾದ ದಾರಿಯಲ್ಲೇ ಮುಂದು ವರಿ. ಎಲ್ಲವನ್ನೂ ತರ್ಕದ ಒರೆಗಲ್ಲಿಗೆ ಹಚ್ಚಿ ನಿರ್ಧರಿಸು.ಧನಾತ್ಮಕವಾಗಿಯೇ ಯಾವಾಗಲೂ ಚಿಂತಿಸು. ಮನಸ್ಸಿನ ನೆಮ್ಮದಿಗೆ ಧ್ಯಾನ, ಸ್ತೋತ್ರಪಠಣ, ತೀರ್ಥಯಾತ್ರೆಗಳನ್ನು ಮಾಡು. ಇಷ್ಟಿದ್ದರೆ ಮುಗಿಯಿತು, ಭವಿಷ್ಯವನ್ನು ಅದರ ಪಾಡಿಗೆ ಬಿಟ್ಟು ಬಿಡು. ಇಂದಿನ ವರ್ತಮಾನವು ನಿನ್ನೆಯ ಭವಿಷ್ಯ. ನಾಳಿನ ಭವಿಷ್ಯವು ನಾಡಿದ್ದು ವರ್ತಮಾನ ವಾಗುತ್ತದೆ, ಹೌದಲ್ಲವೇ? ಚಿಂತೆ ಬೇಡ.” – ಅಂತ ವಿವರಿಸಿದೆ. ಈ ನನ್ನ ಮಾತುಗಳು ಅವಳ ಮನಸ್ಸಿಗೆ ನಾಟಿದವು.

“ಹಾಗಾದರೆ ನಾನು ಶನೈಶ್ಚರ ದೇವಸ್ಥಾನಕ್ಕೆ ಹೋಗುವುದಿಲ್ಲ”- ಅಂತಂದಳು ಆ ಹೆಣ್ಣುಮಗಳು.

“ಶನೈಶ್ಚರ ದೇವಸ್ಥಾನಕ್ಕೆ ಹೋಗು. ಅರ್ಚನೆ ಮಾಡಿಸು. ಒಳಿತು ಮಾಡು ದೇವಾ ಅಂತ ಶನೈಶ್ಚರನಲ್ಲಿ ಬೇಡಿಕೋ. ಭವಿಷ್ಯವನ್ನು ತಿಳಿಯಲು ಮಾತ್ರ ಪ್ರಯತ್ನಿಸಬೇಡ. ಅದನ್ನು ಸಹನೀಯವಾಗಿಸು ತಂದೆ ಅಂತ ಬೇಡಿಕೋ. ಭವಿಷ್ಯವು ವರ್ತಮಾನವಾದಾಗ ಅದು ನಿನಗೆ ತಂತಾನೆ ತಿಳಿಯುತ್ತದೆ”- ಅಂತ ನಾನವಳಿಗೆ ಬುದ್ಧಿ ಮಾತುಗಳನ್ನು ಹೇಳಿದೆ.

– ಜಿ. ವಿ. ಗಣೇಶಯ್ಯ.