ಅಡಕತ್ತರಿಯಲ್ಲಿ ಸಾಲ ಮನ್ನಾ ಫ‌ಲಾನುಭವಿಗಳು

ಬೆಂಗಳೂರು:ಆ-23: ಸರಕಾರದ ಸಾಲ ಮನ್ನಾ ಯೋಜನೆ ಫ‌ಲಾನುಭವಿಗಳು ಈಗ ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಏಕೆಂದರೆ, ಸಾಲ ಮನ್ನಾ ಫ‌ಲಾನುಭವಿಗಳೇ ಇಂದು ನೆರೆ ಸಂತ್ರಸ್ತರಾಗಿದ್ದಾರೆ. ಸರಕಾರ ಅದರಲ್ಲಿ ಕೆಲವರ ಸಾಲವನ್ನು ಅರ್ಧಂಬರ್ಧ ಮನ್ನಾ ಮಾಡಿದೆ. ಇನ್ನು ಹಲವರಿಗೆ ಮನ್ನಾ ಮಾಡುವ ಭರವಸೆ ನೀಡಿದೆ. ಇದರಿಂದ ಸಂಪೂರ್ಣ ‘ಋಣಮುಕ್ತ’ರಾಗುವವರೆಗೂ ಹೊಸ ಸಾಲ ಸಿಗುವುದಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಪ್ರವಾಹದಿಂದ ಹದಗೆಟ್ಟ ಜಮೀನು ರಿಪೇರಿ, ಬೀಜ- ಗೊಬ್ಬರ ಖರೀದಿ, ಮನೆ ದುರಸ್ತಿ ಮತ್ತಿತರ ಕಾರ್ಯಗಳಿಗಾಗಿ ಸಾಲದ ತುರ್ತು ಅಗತ್ಯವಿದೆ. ಪರಿಣಾಮ ಇಕ್ಕಟ್ಟಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ.

ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳು ಸೇರಿ ಹೆಚ್ಚು ಕಡಿಮೆ ಇನ್ನೂ ಆರರಿಂದ ಏಳು ಲಕ್ಷ ರೈತರ ಸುಮಾರು 4ರಿಂದ 5 ಸಾವಿರ ಕೋಟಿ ರೂ. ಸಾಲ ಮನ್ನಾ ಬಾಕಿ ಇದೆ. ಇದರಲ್ಲಿ ನೆರೆ ಹಾವಳಿ ಉಂಟಾದ ಉತ್ತರ ಕರ್ನಾಟಕದ ಬಹುತೇಕ ರೈತರಿದ್ದಾರೆ. ಅವರೆಲ್ಲರ ಜಮೀನುಗಳು ಜಲಾ ವೃತಗೊಂಡಿದ್ದವು. ಈಗ ನಿಧಾನವಾಗಿ ನೆರೆ ತಗ್ಗಿದ್ದು, ದುರಸ್ತಿ ಮತ್ತು ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕುಸಿದ ಮನೆಗಳನ್ನು ಮತ್ತೆ ನಿರ್ಮಿಸಬೇಕಿದೆ. ಇದೆಲ್ಲದಕ್ಕೂ ಸರಕಾರದ ಪುಡಿಗಾಸು ಸಾಲದು. ಆದ್ದರಿಂದ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ಈಗಾಗಲೇ ಸುಸ್ತಿದಾರರಾಗಿರುವವರಿಗೆ ಹೊಸ ಸಾಲ ಸಿಗುತ್ತಿಲ್ಲ. ಇದರಿಂದ ಸಂತ್ರಸ್ತರಿಗೆ ದಿಕ್ಕು ತೋಚದಂತಾಗಿದೆ.

ಈ ಮಧ್ಯೆ ನೆರೆ ಹಾವಳಿಯಿಂದ ನೂರಾರು ಮನೆ ಗಳು ನೆಲಕಚ್ಚಿವೆ. ಅದರೊಂದಿಗೆ ದಾಖಲಾತಿ ಗಳೂ ಕೊಚ್ಚಿಹೋಗಿವೆ. ಸಾಲ ಮನ್ನಾಕ್ಕೆ ಈಗ ಮತ್ತೆ ದಾಖಲೆಗಳನ್ನು ಹೊಂದಿಸಬೇಕಾಗಿದೆ ಎಂದು ಸಂತ್ರಸ್ತರು ಅಲವತ್ತುಕೊಳ್ಳುತ್ತಾರೆ.

2009ರ ಎ. 1ರಿಂದ 2017ರ ಡಿಸೆಂಬರ್‌ 1ರ ವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 6,139 ಕೋಟಿ ರೂ.ಗಳಷ್ಟು ಸಾಲ ಮರುಪಾವತಿ ಪ್ರಗತಿ ಯಲ್ಲಿದೆ. ಉಳಿದ 2 ಲಕ್ಷ ಸಾಲಗಾರರ 2 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಭೂಮಿ ಉಸ್ತುವಾರಿ ಕೇಂದ್ರದ ನಿರ್ದೇಶಕ ಹಾಗೂ ಸಾಲ ಮನ್ನಾ ಯೋಜನೆಯ ಉಸ್ತುವಾರಿ ಅಧಿಕಾರಿ ಮನೀಶ್‌ ಮೌದ್ಗಿಲ್ ತಿಳಿಸಿದ್ದಾರೆ.

ಸಹಕಾರಿ ಸಂಘಗಳಲ್ಲಿ ಈವರೆಗೆ ಅಂದಾಜು 11 ಲಕ್ಷ ರೈತರ 4,650 ಕೋಟಿ ರೂ. ಮಾತ್ರ ಸಾಲ ಮನ್ನಾ ಆಗಿದೆ ಎಂದು ಸಹಕಾರ ಸಂಘಗಳ ನಿಬಂಧಕರ ಕೇಂದ್ರ ಕಚೇರಿ ಮೂಲಗಳು ತಿಳಿಸಿವೆ.

ದಾಖಲಾತಿ ಸಮಸ್ಯೆ ಏನು?
ನಿಯಮದ ಪ್ರಕಾರ ಸೊಸೈಟಿ ಅಥವಾ ಬ್ಯಾಂಕ್‌ ಇವೆರಡರಲ್ಲಿ ಒಂದು ಕಡೆ ಸಾಲ ತೆಗೆದುಕೊಂಡರೆ, ಮತ್ತೂಂದೆಡೆ ಸಾಲ ಸಿಗುವುದಿಲ್ಲ. ಆದಾಗ್ಯೂ ಸೊಸೈಟಿಯಲ್ಲಿ ಕಡಿಮೆ ಸಾಲ ಸಿಗುವುದರಿಂದ ಬ್ಯಾಂಕ್‌ಗಳಲ್ಲೂ ಬೆಳೆ ಸಾಲ ಪಡೆದಿದ್ದಾರೆ. ಈಗ ಎರಡೂ ಕಡೆಯೂ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಗ ಸೊಸೈಟಿ ಸಾಲವನ್ನು ಮಾತ್ರ ಸರಕಾರ ಪರಿಗಣಿಸುತ್ತದೆ. ಹಾಗಾಗಿ ಕೆಲವರು ದಾಖಲೆಗಳನ್ನು ಸಲ್ಲಿಸಲು ಮುಂದೆ ಬರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈಗ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಸೊಸೈಟಿಯಲ್ಲಿ ಸಾಲ ಪಡೆದವರು ಬ್ಯಾಂಕ್‌ಗಳಿಗೆ ಬೆಳೆ ಸಾಲಕ್ಕೆ ಅರ್ಜಿ ಹಾಕುವಾಗ ಗೊತ್ತಾಗುತ್ತದೆ. ಹಾಗಾಗಿ ಅಧಿಕಾರಿಗಳು ಸಾಲ ನಿರಾಕರಿಸುತ್ತಿದ್ದಾರೆ. ಈ ಮಧ್ಯೆ ಸರಕಾರದ ಋಣಮುಕ್ತ ಪತ್ರವನ್ನು ಎದುರು ನೋಡುತ್ತಿದ್ದೇವೆ ಎಂದು ಫ‌ಲಾನುಭವಿಗಳು ತಿಳಿಸಿದರು.

ಸರಕಾರದ ಆದೇಶದನ್ವಯ ಎಲ್ಲ ದಾಖಲೆಗಳನ್ನು ಸಲ್ಲಿಸಿದ ಬಹುತೇಕ ಶೇ. 95ರಷ್ಟು ಫ‌ಲಾನುಭವಿಗಳ ಸಾಲ ಮನ್ನಾ ಆಗಿದೆ. ಬಾಕಿ ಉಳಿದವರ ಸಾಲವೂ ಶೀಘ್ರ ಮನ್ನಾ ಆಗಲಿದೆ. ಸೌಲಭ್ಯದಿಂದ ಇನ್ನೂ ಹೊರಗುಳಿದವರು ಆದಷ್ಟು ಬೇಗ ದಾಖಲೆಗಳನ್ನು ಸಲ್ಲಿಸಬೇಕು.
– ಮನೀಶ್‌ ಮೌದ್ಗಿಲ್, ಸಾಲ ಮನ್ನಾ ಯೋಜನೆಯ ಉಸ್ತುವಾರಿ ಅಧಿಕಾರಿ
ಕೃಪೆ:ಉದಯವಾಣಿ

ಅಡಕತ್ತರಿಯಲ್ಲಿ ಸಾಲ ಮನ್ನಾ ಫ‌ಲಾನುಭವಿಗಳು
beneficiaries-of-loan-waiver