ಮೈಸೂರು, ಆಗಸ್ಟ್ 05, 2023 (www.justkannada.in): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಾನು ಟಿಕೆಟ್ ಕೇಳೋಣ ಅಂದುಕೊಂಡಿದ್ದೀನಿ, ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣ. ಯತೀಂದ್ರ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಆಗಿದೆ, ಅದು ಒಳ್ಳೆಯದೆ. ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಡಿಕೆ ಶಿವಕುಮಾರ್ ನಾನು ಒಳ್ಳೆಯ ಸ್ನೇಹಿತರು. ಈಗ ಅವರು ರಾಜ್ಯದ ಡಿಸಿಎಂ ಆಗಿದ್ದಾರೆ. ಅವರನ್ನು ಭೇಟಿ ಮಾಡೋದು ತಪ್ಪಾ? ಎಂದು ಮೈಸೂರಿನಲ್ಲಿ ಎಂಎಲ್ ಸಿ ಎಚ್ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ- ಟಿಎಸ್ಪಿ ಹಣ ಬಳಕೆ ಕುರಿತು ಮಾತನಾಡಿದ ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಸರಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡರು. ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಸರ್ಕಾರಕ್ಕೆ ಅನುವಂಶೀಯವಾದ ಅಧಿಕಾರ ಇದೆ. ಅದನ್ನೇ ಬಿಜೆಪಿ, ಜೆಡಿಎಸ್ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಏನು ಮಾಡಿದ್ರು ? ನಾನೂ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಸ್ಥಾನ ಸಿಕ್ಕಿತ್ತು. ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು. ಎರಡು ಸಚಿವ ಸ್ಥಾನ ಖಾಲಿಯೇ ಇತ್ತು. ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಅಂತ ಕೇಳಿದ್ದೆ. ಖಾಲಿ ಬಿಟ್ಟರೆ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅಂಥವರು ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ. ಜೆಡಿಎಸ್,ಬಿಜೆಪಿ ಎರಡು ದಲಿತ ವಿರೋಧಿಗಳೇ ಎಂದರು.
ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ ವಿಚಾರ ಕುರಿತು ಮಾತನಾಡಿ, ನೊಂದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಹೋರಾಟ ಶ್ರೀ ವೀರೇಂದ್ರ ಹೆಗ್ಗಡೆ ವಿರುದ್ಧ ಅಲ್ಲ ಎಂದು ವಿಶ್ವನಾಥ್ ಹೇಳಿದರು.