ಬೆಂಗಳೂರು ಆಗಸ್ಟ್,23,2023(www.justkannada.in): ಕಾವೇರಿ, ಮಹದಾಯಿ, ಮೇಕೆದಾಟು ವಿಚಾರದಲ್ಲಿ ನಾಡಿಗೆ ನ್ಯಾಯ ಒದಗಿಸುವ ಸಲುವಾಗಿ ಪ್ರಧಾನಿಯವರ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷದ ನಾಯಕರುಗಳ ಮತ್ತು ಸಂಸದರ ಅಭಿಪ್ರಾಯಗಳನ್ನು ಕೇಳಿಸಿಕೊಂಡ ಬಳಿಕ ಮಾತನಾಡಿದರು.
ಕನ್ನಡ ನಾಡು-ನುಡಿ-ಜಲ-ಭೂಮಿ-ಸಂಸ್ಕೃತಿಯ ಹಿತ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ. 7 ಕೋಟಿ ಕನ್ನಡಿಗರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ವ ಪಕ್ಷಗಳೂ ಒಟ್ಟಾಗಿ ಶ್ರಮಿಸೋಣ. ಹೀಗಾಗಿ ಸರ್ವ ಪಕ್ಷ ನಿಯೋಗಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಮ್ಮ ರೈತರ ಹಿತವನ್ನು ಸಂಪೂರ್ಣ ಕಾಪಾಡಿದ್ದೇವೆ. ನಮ್ಮ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಸರ್ವ ಪಕ್ಷ ನಾಯಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾವೇರಿ ಪ್ರಾಧಿಕಾರ 22 ಸಭೆ, ನಿಯಂತ್ರಣ ಸಮಿತಿಯಲ್ಲಿ 84 ಸಭೆಗಳು ನಡೆದಿವೆ. ರಾಜ್ಯವನ್ನು ಪ್ರತಿನಿಧಿಸುವ ಅಧಿಕಾರಿ ಮತ್ತು ವಕೀಲರ ತಂಡ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಪ್ರಾಧಿಕಾರದ ಮುಂದೆ, ನಿಯಂತ್ರಣ ಸಮಿತಿ ಮುಂದೆ ಮಂಡಿಸಿದ್ದಾರೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದನ್ನು , ವಾಸ್ತವ ಸ್ಥಿತಿಯನ್ನು ಮಂಡಿಸಿದ್ದಾರೆ. ಇಲ್ಲಿಯವರೆಗೂ ನಾವು 24 ಟಿಎಂಸಿ ಮಾತ್ರ ಬಿಡುಗಡೆ ಮಾಡಿದ್ದೇವೆ. ನಿಗಧಿ ಮಾಡಿದ್ದಕ್ಕಿಂತ ಕಡಿಮೆ ನೀರು ಬಿಟ್ಟಿದ್ದೀವಿ. ಮೂರನೇ ಒಂದು ಭಾಗದಷ್ಟು ಮಾತ್ರ ನೀರು ಬಿಟ್ಟಿದ್ದೀವಿ ಅಷ್ಟೆ. ನಾವು ಸಮರ್ಥ ವಾದ ಮಂಡಿಸಿದ್ದರಿಂದಲೇ ತಮಿಳುನಾಡಿನ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಆದೇಶವಾಯಿತು. ಸಮರ್ಥ ವಾದ ಮಂಡಿಸದಿದ್ದರೆ ಆದೇಶದಲ್ಲಿನ ನೀರಿನ ಪ್ರಮಾಣ ಇನ್ನೂ ಹೆಚ್ಚಿರುತ್ತಿತ್ತು ಎಂದು ಸಿಎಂ ಸಿದ್ಧರಾಮಯ್ಯ ಸಭೆಯಲ್ಲಿ ಹೇಳಿದರು.
ನಾಡಿನ ರೈತರ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ರಾಜಕೀಯವೂ ಇಲ್ಲ. ರಾಜಿಯೂ ಇಲ್ಲ. ನಮ್ಮ ಕಾನೂನು ತಂಡಕ್ಕೆ, ತಜ್ಞರ ತಂಡಕ್ಕೆ ಅಗತ್ಯವಾದ ಸಕಲ ನೆರವು ನೀಡುತ್ತಿದ್ದೇವೆ. ಸಂಕಷ್ಟ ಹಂಚಿಕೆ ಸೂತ್ರದ ವಿಚಾರದಲ್ಲೂ ನಮ್ಮ ವಕೀಲ ತಂಡ ಸಮರ್ಥ ವಾದ ಮಂಡಿಸಿದೆ. ನಾವು 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದ ಮಂಡಿಸುವಾಗಲೇ ತಮಿಳುನಾಡಿನವರು walk out ಮಾಡಿದರು. ಬಳಿಕ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ. ಈಗ 10 ಸಾವಿರ ಕ್ಯೂಸೆಕ್ಸ್ ನೀರನ್ನೂ ಬಿಡಲು ಸಾಧ್ಯವಿಲ್ಲ ಎಂದು ಮತ್ತೆ ಸಮರ್ಥ ವಾದ ಮಂಡಿಸುತ್ತೇವೆ. ಮತ್ತೆ ಮಳೆ ಬರುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಸಂಕಷ್ಟ ಹಂಚಿಕೆ ಸೂತ್ರ ವೈಜ್ಞಾನಿಕವಾಗಿ ಆಗಲೇಬೇಕು. ಮೇಕೆದಾಟು ಆದರೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆ ಮಾಡಬಹುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯ್ಲಿ, ಸಚಿವ ಹೆಚ್.ಕೆ. ಪಾಟೀಲ್, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ವಕೀಲರಾದ ಮೋಹನ್ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Key words: Cauvery-Mahadayi- all-party -delegation –PM-CM Siddaramaiah