ಸಿಬಿಎಸ್ ಸಿ ದಕ್ಷಿಣ ವಲಯ ಈಜು ಸ್ಪರ್ಧೆ: ಮೈಸೂರಿನ ಜಿಎಸ್ಎಗೆ 10 ಪದಕ

ಮೈಸೂರು,ಸೆಪ್ಟಂಬರ್,16,2024 (www.justkannada.in): ಸಿಬಿಎಸ್ ಸಿ ದಕ್ಷಿಣ ವಲಯ-II ಈಜು ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮೈಸೂರಿನ ಜಿಎಸ್ ಎ ತಂಡದ ರುತ್ವಾ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಾವಣೆಗೆರೆಯ ಶಿವಶಂಕರಪ್ಪ ಶಾಲೆಯಲ್ಲಿ ನಡೆದ ಸಿಬಿಎಸ್ ಸಿ ದಕ್ಷಿಣವಲಯ-11 ಚಾಂಪಿಯನ್ ಶಿಪ್ 2024- 25ರಲ್ಲಿ ಮೈಸೂರಿನ ಜೆ.ಪಿ.ನಗರದ ಸ್ಪೋರ್ಟ್ಸ್ ಗ್ಲೋಬಲ್ ಅಸೋಸಿಯೇಷನ್ ನ ರುತ್ವಾ, ಜೀವಾಂಶ್ ಮತ್ತು ಸಾನ್ವಿ ಮೂವರು ಸ್ಪರ್ಧಿಸಿ 10 ಪದಕಗಳನ್ನು ಗಳಿಸಿದ್ದಾರೆ. ಇವರು ಒಡಿಸ್ಸಾ‌ ರಾಜ್ಯದ ಭುವನೇಶ್ವರದಲ್ಲಿ ನಡೆಯಲಿರುವ‌ ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಮೈಸೂರಿನ ಹೆಗ್ಗಳಿಕೆಯಾಗಿದೆ.

ಬೆಸ್ಟ್ ಸ್ವಿಮ್ಮರ್ : ಸೇಂಟ್ ಥಾಮಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ರುತ್ವಾ 50ಮೀ. ಹಾಗೂ 100 ಮೀ. ಫ್ರೀ ಸ್ಟೈಲ್ ನಲ್ಲಿ 2 ಚಿನ್ನದ ಪದಕ, 50 ಮೀ. ಬಟರ್ ಫ್ಲೈ ನಲ್ಲಿ 1 ಚಿನ್ನದ ಪದಕ ಪಡೆದು “ಬೆಸ್ಟ್ ಸ್ವಿಮ್ಮರ್” ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಿಎವಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜೀವಾಂಶ್ 200ಮೀ., ಹಾಗೂ 100 ಮೀ., ಬಟರ್ ಫ್ಲೈನಲ್ಲಿ 2 ಚಿನ್ನ,  50 ಮೀ. ಬಟರ್ ಫ್ಲೈನಲ್ಲಿ ಹಾಗೂ 200 ಮೀ. ಮಿಡ್ಲೆಯಲ್ಲಿ 2 ಬೆಳ್ಳಿ ಪದಕ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಡಿಎವಿ ಶಾಲೆಯ 5 ನೇ ತರಗತಿಯ ಸಾನ್ವಿ. ಆರ್.  200ಮೀ. ಮೆಡ್ಲೆಯಲ್ಲಿ 1 ಬೆಳ್ಳಿ ಹಾಗೂ  100ಮೀ. ಬಟರ್ ಫ್ಲೈ ಹಾಗೂ 50ಮೀ. ಫ್ರೀ  ಸ್ಟೈಲ್ ನಲ್ಲಿ 2 ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈಜು ಪಟುಗಳು ಜೆ.ಪಿ.ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ್ ಈಜು ಕೊಳದ ಜಿಎಸ್ ಎ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಇವರ ಗೆಲುವಿಗೆ ಉತ್ತಮ ತರಬೇತಿ ನೀಡಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ಹೊರತರುತ್ತಿರುವಲ್ಲಿ ಕಾರ್ಯೋನ್ಮುಖರಾಗಿರುವ ತರಬೇತುದಾರ ಪವನ್ ಕುಮಾರ್ ಅವರ ಪಾತ್ರ ಪ್ರಮುಖವಾದದ್ದು ಎಂದು ಪೋಷಕರು ಪ್ರಶಂಸಿಸಿದ್ದಾರೆ.

ನಮ್ಮ ಸಂಸ್ಥೆಯ ಕೀರ್ತಿ ಮೆರೆದಿರುವ‌ ಈ ಸ್ಪರ್ಧಿಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೆದ್ದು ಬರಲಿ ಎಂದು ಜಿಎಸ್ ಎ ಮುಖ್ಯಸ್ಥರು ಹಾಗೂ ತಂಡ ಹಾರೈಸಿದೆ.

Key words: CBSC South Zone, Swimming Competition, 10 medals, GSA