ನಾನು ಕೊಟ್ಟ ಜಾತಿಗಣತಿ ವರದಿ ನೈಜ ಮತ್ತು ವೈಜ್ಞಾನಿಕವಾಗಿದೆ- ಕಾಂತರಾಜು

ಬೆಂಗಳೂರು,ನವೆಂಬರ್ 23,2023(www.justkannada.in): ಜಾತಿಜನಗಣತಿ ವರದಿ ಬಗ್ಗೆ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾಂತರಾಜು ಅವರು,  ಜಾತಿಗಣತಿ ವರದಿ ನೋಡದೇ ವರದಿ ಅವೈಜ್ಞಾನಿಕ ಎನ್ನುವುದು ಸರಿಯಲ್ಲ. ನಾನು ಕೊಟ್ಟ ಜಾತಿಗಣತಿ ವರದಿ ನೈಜವಾಗಿದೆ, ವೈಜ್ಞಾನಿಕವಾಗಿಯೇ ಇದೆ.  40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ‌55 ಪ್ರಶ್ನೆ ಕೇಳಿದ್ದೇವೆ. ಕೂಲಂಕಷವಾಗಿ ಅಂಕಿ ಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದ್ದು, ರಾಜ್ಯ ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದು ಹೇಳಿದರು.

ಒಕ್ಕಲಿಗರು, ಲಿಂಗಾಯತ ಸಮುದಾಯ ವರದಿಗೆ ವಿರೋಧ ಮಾಡುತ್ತಿವೆ. ವರದಿ ನೋಡಿ ಮೇಲೆ ತಪ್ಪು ಇದ್ದರೆ ನಾನು ಒಪ್ಪಿಕೊಳ್ಳುತ್ತೇನೆ, ಜಾತಿಗಣತಿ ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಎನ್ನುವುದು ಸರಿಯಲ್ಲ. ವರದಿಯ ಒಂದು ವಾಲ್ಯೂಮ್​ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೇ ಎಂದು ಕಾಂತರಾಜು ತಿಳಿಸಿದರು.

ಜಾತಿಗಣತಿ ವರದಿ ಬಗ್ಗೆ ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ನಿರಾಕರಿಸುವಂತೆ ಹೇಳಬಹುದು. ಆದರೆ ಮೊದಲು ವರದಿ ನೋಡಲಿ ಅಮೇಲೆ ಯಾರು ಏನು ಬೇಕಾದರು ಹೇಳಲಿ. ವರದಿ ನೋಡದೇ ಸರಿ ಇಲ್ಲ ಎನ್ನುವುದು ಸರಿಯಲ್ಲ ಎಂದು ಕಾಂತರಾಜು ತಿಳಿಸಿದರು.

Key words:  census- report -genuine – scientific- Kantaraju.