ನವದೆಹಲಿ:ಜೂ-12 ಬಾಹ್ಯಾಕಾಶ ಮೂಲಕ ನಡೆಸಬಹುದಾದ ಸಂಭವನೀಯ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಎಸ್ಯಾಟ್ ಪರೀಕ್ಷೆ, ಬಾಹ್ಯಾಕಾಶ ಸಮರಾಭ್ಯಾಸದ ಬೆನ್ನಲ್ಲೇ ಬಾಹ್ಯಾಕಾಶ ದಾಳಿಗೆ ಪ್ರತಿದಾಳಿ ನಡೆಸಲು ಶಕ್ತವಾದ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನೂತನ ಏಜೆನ್ಸಿಯ ಆರಂಭಕ್ಕೆ ಸಂಪುಟ ಸಮಿತಿ ಸಮ್ಮತಿ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲಿ ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಎಸ್ಆರ್ಎ) ಹೆಸರಿನ ಏಜೆನ್ಸಿಯನ್ನು ಆರಂಭಿಸಲು ಹಸಿರು ನಿಶಾನೆ ತೋರಲಾಗಿದೆ. ಇದರ ಮೂಲಕ ಬಾಹ್ಯಾಕಾಶ ಯುದ್ಧಕ್ಕೆ ಪೂರಕವಾದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಗುರಿಹೊಂದಲಾಗಿದೆ.
ಬಾಹ್ಯಾಕಾಶ ಯುದ್ಧಕ್ಕೆ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಲು ಸಂಸ್ಥೆಯ ಅಗತ್ಯವಿದೆ ಎನ್ನುವ ಅಭಿಪ್ರಾಯ ಈ ಹಿಂದೆಯೇ ವ್ಯಕ್ತವಾಗಿತ್ತು. ಜಂಟಿ ಕಾರ್ಯದರ್ಶಿ ಹಂತದ ವಿಜ್ಞಾನಿಗಳ ನಿಗಾದಲ್ಲಿ ಏಜೆನ್ಸಿ ರೂಪುರೇಷೆ ಸಿದ್ಧವಾಗಿತ್ತು. ಈಗ ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಡಿಎಸ್ಆರ್ಎಗೆ ವಿಜ್ಞಾನಿಗಳ ತಂಡ ಒದಗಿಸಲು ನಿರ್ಧರಿಸಲಾಗಿದ್ದು, ಇವರು ಸೇನಾ ಪಡೆಗಳ ಡಿಫೆನ್ಸ್ ಸ್ಟಾಫ್ ಆಫೀಸರ್ಗಳ ಜತೆಗೆ ಚರ್ಚೆ ನಡೆಸಿ ಪೂರಕ ಶಸ್ತ್ರಾಸ್ತ್ರಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನೆರವು ನೀಡಲಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರ
ಭಾರತದ ಸೇನಾಪಡೆಗಳ ಸುಧಾರಣಾ ಕ್ರಮವಾಗಿ ಡಿಫೆನ್ಸ್ ಸ್ಪೇಸ್ ಏಜೆನ್ಸಿ ಆರಂಭಿಸಿದೆ. ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಲಿದೆ. ಬಾಹ್ಯಾಕಾಶ, ಸೈಬರ್ ವಾರ್ಫೇರ್ ಮತ್ತು ವಿಶೇಷ ಕಾರ್ಯಾಚರಣಾ ವಿಭಾಗ ಅಭಿವೃದ್ಧಿಯ ಜವಾಬ್ದಾರಿಯನ್ನು ಡಿಎಸ್ಎಗೆ ಹೊರಿಸಲಾಗಿದೆ.
ಕೃಪೆ:ವಿಜಯವಾಣಿ