ಭಕ್ತರ ಮೂಲಭೂತ ಸೌಕರ್ಯಕ್ಕಾಗಿ ಪ್ರಾಧಿಕಾರ ರಚನೆ: ಮುಂದಿನ 5 ವರ್ಷದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್- ಸಿಎಂ ಸಿದ್ದರಾಮಯ್ಯ

ಮೈಸೂರು,ಸೆಪ್ಟಂಬರ್,3,2024 (www.justkannada.in): ಭಕ್ತರ ಮೂಲ ಸೌಕರ್ಯದ ಉದ್ದೇಶದಿಂದ ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಮುಂದಿನ 5 ವರ್ಷದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನನ್ನ ಅಧ್ಯಕ್ಷತೆಯಲ್ಲಿ ನಡೆದಿದೆ. ಸಚಿವರು, ಸ್ಥಳೀಯ ಶಾಸಕರು, ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಚಾಮುಂಡೇಶ್ವರಿ ಪ್ರಾಧಿಕಾರವನ್ನ ಸರ್ಕಾರ ಮಾಡಿದೆ. ಹಿಂದೆ ಅಡಿಷನಲ್ ಡೆಪ್ಯೂಟಿ ಕಮಿಷನರ್ ಇದ್ದರು. ಅವರು ಭಕ್ತಾದಿಗಳ ಮೂಲಭೂತ ಸೌಕರ್ಯ ನೋಡಿಕೊಳ್ಳುತ್ತಿದ್ದರು. ನಾವು ಮಹದೇಶ್ವರ ಬೆಟ್ಟಕ್ಕೆ ಅಭಿವೃದ್ಧಿ ಪ್ರಾಧಿಕಾರ ಮಾಡಿದವು. ಸವದತ್ತಿ ಯಲ್ಲಮ್ಮ ಪ್ರಾಧಿಕಾರ ಮಾಡಿದವು. ಪ್ರಾಧಿಕಾರ ಮಾಡಿರುವ ಉದ್ದೇಶ ಇಲ್ಲಿ ವಿಶ್ವ ವಿಖ್ಯಾತ ದಸರಾ ನಡೆಯುತ್ತದೆ. ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ಆಗಿವೆ. ಇನ್ನು ಕೆಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಚಾಮುಂಡಿ ಬೆಟ್ಟಕ್ಕೆ 24 ದೇವಸ್ಥಾನಗಳು ಸೇರಿವೆ. ಆ ದೇವಸ್ಥಾನಗಳ ಅಭಿವೃದ್ಧಿ ಮತ್ತು ಚಾಮುಂಡಿ ಬೆಟ್ಟ ಅಭಿವೃದ್ಧಿ ಆಗಬೇಕು. ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಉದ್ದೇಶದಿಂದ ಪ್ರಾಧಿಕಾರ ರಚನೆಯಾಗಿದೆ. ಹಿಂದೆ ಕೈಗೆತ್ತಿಕೊಂದಿರುವ ಅಭಿವೃದ್ಧಿ ಕಾರ್ಯಗಳನ್ನ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಸ ವಿಲೇವಾರಿ, ಸ್ವಚ್ಛತೆ ಬಹಳ ಮುಖ್ಯ. ಸ್ವಚ್ಛತೆ ಕೆಲಸ ಮುಗಿಸಲು ಸೂಚನೆ ನೀಡಿದ್ದೇನೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ಗುಟ್ಕಾ, ಪಾನ್ ಸಂಪೂರ್ಣ ನಿಷೇಧ: ಅಪರಾಧಗಳ ತಡೆಗೆ ಟಾಸ್ಕ್ ಫೋರ್ಸ್.

ಅಪರಾಧಗಳು ಚಾಮುಂಡಿ ಬೆಟ್ಟದಲ್ಲಿ ಆಗಬಾರದೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಸೂಚಿಸಿದ್ದೇನೆ. ಚಾಮುಂಡಿ ಬೆಟ್ಟದ ಎಲ್ಲಾ ಕಡೆ ಲೈಟಿಂಗ್ಸ್ ವ್ಯವಸ್ಥೆ ಇರಬೇಕು. ಅಪರಾಧಗಳ ತಡೆಗೆ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಗುಟ್ಕಾ, ಪಾನ್ ಸಂಪೂರ್ಣ ನಿಷೇಧ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಬೆಟ್ಟ ಮಾಡಲು ಸೂಚನೆ ನೀಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ದೇವಾಲಯದ ಒಳಗೆ ಫೋಟೋಗ್ರಫಿ, ಮೊಬೈಲ್ ಬಳಕೆ ನಿಷೇಧ

ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಜಾರಿ ಮಾಡುತ್ತಾರೆ. ಈ ಯೋಜನೆಗೆ ಹೆಚ್ಚುವರಿ ಹಣ ಅವಶ್ಯಕತೆ ಇದೆ. ಹೆಚ್ಚುವರಿ ಹಣವನ್ನ ಚಾಮುಂಡೇಶ್ವರಿ ಪ್ರಾಧಿಕಾರ ಭರಿಸುತ್ತದೆ. ಪ್ರಸನ್ನ ಕೃಷ್ಣ ದೇವಾಲಯ, ಭುವನೇಶ್ವರಿ ಅಮ್ಮನ ದೇವಾಲಯ, ಕೋಟೆ ಆಂಜನೇಯ ಸ್ವಾಮಿ, ವರಾಹ ಸ್ವಾಮಿ ದೇವಾಲಯ ಐದು ದೇವಾಲಯಗಳ ಅಭಿವೃದ್ಧಿ ಮಾಡಲಾಗುತ್ತದೆ. ಚಾಮುಂಡೇಶ್ವರಿ ದೇವಾಲಯದ ಒಳಗೆ ಫೋಟೋಗ್ರಫಿ, ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಚಾಮುಂಡೇಶ್ವರಿ ದೇವಾಲಯದ ನೌಕರರಿಗೆ ವೈದ್ಯಕೀಯ ಸೌಲಭ್ಯ. ನೌಕರರ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತದೆ.  ಚಾಮುಂಡಿ ಬೆಟ್ಟ ಹೆಚ್ಚು ಆಕರ್ಷಣೆಯಾಗಬೇಕು. ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.  ಪ್ರಾಧಿಕಾರಕ್ಕೆ 169 ಕೋಟಿ ಆದಾಯ ಪ್ರತಿ ವರ್ಷ ಇದೆ. ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಲೇ ಇದೆ. ದೇವಿಕೆರೆ, ನಂದಿ ಬೆಟ್ಟದ ಅಭಿವೃದ್ಧಿಗೂ ಮುಂದಾಗುತ್ತೇವೆ. ಮುಂದಿನ ಐದು ವರ್ಷದಲ್ಲಿ ಮಾಡಬಹುದಾದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ಯಾವುದೇ ವಸ್ತ್ರ ಸಂಹಿತೆ ಇಲ್ಲ

ದೇವಿ ಕೆರೆ, ನಂದಿ ಪ್ರದೇಶ ಅಭಿವೃದ್ಧಿ. ಮುಂದಿನ 5 ವರ್ಷದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಕೆಗೆ ಸೂಚನೆ ನೀಡಿದ್ದೇನೆ.  ರೋಪ್ ವೇ ಯೋಜನೆ ಹಳೆಯ ಚಿಂತನೆ. ಪರಿಸರವಾದಿಗಳ ವಿರೋಧದಿಂದ ಹಾಗೇಯೆ ನಿಂತು ಹೋಗಿದೆ. ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿ ಯಾವುದೇ ವಸ್ತ್ರ ಸಂಹಿತೆ ಇಲ್ಲ. ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ.  ದೇವಾಲಯದ ಆಸ್ತಿ ಸರ್ವೆ ಮಾಡಿ, ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Chamundeshwari  Authority, Devotees, Infrastructure, CM Siddaramaiah