ಬೆಂಗಳೂರು, ನವೆಂಬರ್ 8, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರದಲ್ಲಿ ರಿಯಲ್-ಎಸ್ಟೇಟ್ ವಹಿವಾಟುಗಳಲ್ಲಿ ಸಂಭವಿಸುತ್ತಿರುವ ದೊಡ್ಡ ಪ್ರಮಾಣದ ಮೋಸವನ್ನು ತಡೆಗಟ್ಟಲು 11 ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ‘ಡಿಜಿಟಲ್ ಖಾತೆಗಳ ಪ್ರಮಾಣೀಕರಣವನ್ನು’ (Digital Khata Certification) ಸಿದ್ಧಪಡಿಸುತ್ತಿದೆ.
ಅತೀ ಹೆಚ್ಚಿನ ರಿಯಲ್-ಎಸ್ಟೇಟ್ ಚಟುವಟಿಕೆಗಳನ್ನು ಆಧರಿಸಿ ಈ ವಾರ್ಡುಗಳನ್ನು ಆಯ್ಕೆ ಮಾಡಲಾಗಿದೆ. ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ಡಾ. ಎಸ್. ಬಸವರಾಜು ಅವರು ತಿಳಿಸಿದಂತೆ ಈ ಕಾರ್ಯಕ್ರಮ, ನವೆಂಬರ್ ೨೦೨೦ರಲ್ಲಿ ಪೂರ್ವ ಪ್ರದೇಶದಲ್ಲಿ ಬರುವ ಮೂರು ವಾರ್ಡುಗಳಲ್ಲಿ ನಡೆಸಿದಂತಹ ಯಶಸ್ವಿ ಪರಿಶೀಲನೆಯ ವಿಸ್ತರಣೆಯಾಗಿದೆ. ಆಗ ಈ ಮೂರು ವಾರ್ಡುಗಳಲ್ಲಿ 600ಕ್ಕೂ ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ಸಂಸ್ಕರಿಸಲಾಗಿತ್ತು. “ಈ ಪರೀಕ್ಷೆಯಿಂದ ಲಭಿಸಿದಂತಹ ಫಲಿತಾಂಶಗಳನ್ನು ಆಧರಿಸಿ, ನಾವು ಈ ಪ್ರಕ್ರಿಯೆಯನ್ನು ಮತ್ತಷ್ಟು ಉತ್ತಮಪಡಿಸಿ, ಕಂದಾಯ ಇಲಾಖೆ ನಿರ್ವಹಿಸುತ್ತಿರುವ ಕಾವೇರಿ ಸಾಫ್ಟ್ವೇರ್ ಒಳಗೊಂಡಂತೆ, ಇತರೆ ಸಿಸ್ಟಂಗಳಲ್ಲಿ ಏಕೀಕರಣಗೊಳಿಸಿದ್ದೇವೆ,” ಎಂದರು.
“೧೧ ವಾರ್ಡುಗಳ ಕಾರ್ಯದಕ್ಷತೆಯನ್ನು ಆಧರಿಸಿ ಬಿಬಿಎಂಪಿ ಈ ಯೋಜನೆಯನ್ನು, ಪಶ್ಚಿಮ ಹಾಗೂ ದಕ್ಷಿಣ ಪ್ರದೇಶಗಳ ಜೊತೆಗೆ, ಇಡೀ ಪೂರ್ವ ಪ್ರದೇಶಕ್ಕೆ ವಿಸ್ತರಿಸಲಿದೆ. ಒಮ್ಮೆ ಈ ಪ್ರಕ್ರಿಯೆಯನ್ನು ಪರಿಶೀಲಿಸಿದ ನಂತರ ನಾವು ಮೊದಲಿಗೆ ಇತರೆ ಪ್ರಮುಖ ಪ್ರದೇಶಗಳ ಕಡೆ ಗಮನ ನೀಡಿ, ನಂತರ ನಮ್ಮ ಆಸ್ತಿ ದತ್ತಾಂಶದ ಸಂಪರ್ಕಜಾಲವನ್ನು ಒಟ್ಟುಗೂಡಿಸಲಿದ್ದೇವೆ. ನಂತರದಲ್ಲಿ ಹೊರವಲಯದ ವಾರ್ಡುಗಳ ಕಡೆ ಗಮನ ನೀಡಲಾಗುವುದು,” ಎಂದು ವಿವರಿಸಿದರು.
ಆಸ್ತಿ ವಂಚನೆಗಳ ತಡೆಗಟ್ಟುವಿಕೆ
ಈ ಹೊಸ ವ್ಯವಸ್ಥೆಯಿಂದಾಗಿ ಬೆಂಗಳೂರು ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಬೃಹತ್ ಪ್ರಮಾಣದ ಆಸ್ತಿ ವಂಚನೆಗಳನ್ನು ತಡೆಗಟ್ಟಬಹುದು ಎನ್ನುವುದು ಅಧಿಕಾರಿಗಳ ನಂಬಿಕೆಯಾಗಿದೆ. “ಈ ಹೊಸ ವ್ಯವಸ್ಥೆ, ಒಂದೇ ನಿವೇಶನ ಅಥವಾ ಕಟ್ಟಡವನ್ನು ಹಲವರಿಗೆ ಹಾಗೂ ಬ್ಯಾಂಕುಗಳಿಗೆ ಮಾರಾಟ ಮಾಡುವವರಿಂದ ಖರೀದಿದಾರರನ್ನು ಕಾಪಾಡುತ್ತದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿಯ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, “ಈ ಹೊಸ ವ್ಯವಸ್ಥೆಯಡಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಾರಾಟವಾಗುವ ಹಾಗೂ ನೋಂದಣಿಯಾಗುವಂತಹ ಆಸ್ತಿಗಳ ವಿವರಗಳನ್ನು ನೇರವಾಗಿ ‘ಕಾವೇರಿ’ಯಿಂದ ‘ಇ-ಆಸ್ತಿ’ಗೆ ವರ್ಗಾಯಿಸುತ್ತದೆ. “ಇ-ಆಡಳಿತ ಇಲಾಖೆ ಹಾಗೂ ನ್ಯಾಷನಲ್ ಇನ್ ಫರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ನಮ್ಮ ಅಗತ್ಯತೆಗಳ ಪ್ರಕಾರ ‘ಆಸ್ತಿ’ ಸಾಫ್ಟ್ವೇರ್ ಅನ್ನು ಕಸ್ಟಮೈಸ್ ಮಾಡಿದೆ,” ಎಂದು ವಿವರಿಸಿದರು.
ಈ ಹೊಸ ವ್ಯವಸ್ಥೆಯನ್ನು ‘ಕಾವೇರಿ’ಯೊಂದಿಗೆ ಸರಿಹೊಂದಿಸಲಾಗಿದೆ. ಸಂಬಂಧಪಟ್ಟ ಮಾರಾಟ ವಿವರಗಳನ್ನು ಕಾವೇರಿ ಡೇಟಾಬೇಸ್ನಿಂದ ಪಡೆದುಕೊಳ್ಳಬಹುದು ಹಾಗೂ ಮಾಲೀಕರ ವಿವರಗಳು ಸ್ವಯಂಚಾಲಿತವಾಗಿ ಟ್ಯಾಗ್ ಆಗುತ್ತವೆ. ಡೀಫಾಲ್ಟ್ ಆಗಿ ಹೊಸ ಮಾಲೀಕರ ಹೆಸರಿನಲ್ಲಿ ಹೊಸ ಖಾತೆ ಸೃಷ್ಟಿಯಾಗುತ್ತದೆ. ಜೊತೆಗೆ ಬಿಬಿಎಂಪಿ ವಂಚನೆಗಳನ್ನು ತಪ್ಪಿಸಲು ಆಸ್ತಿ ವಿವರಗಳನ್ನು ಅಪ್ಡೇಟ್ ಮಾಡುವ ಅಭಿಯಾನವನ್ನು ಕೈಗೊಂಡಿದೆ.
“ನಾವು 16 ಮಾನದಂಡಗಳನ್ನೊಳಗೊಂಡ ದಾಖಲೆಪತ್ರಗಳು ಹಾಗೂ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಮುಂದುವರೆದು ೪೦ ಅಂಶಗಳನ್ನು ಒಳಗೊಂಡಿರುವಂತಹ ವಿವರಗಳನ್ನು ಸಂಗ್ರಹಿಸಿ, ಅದನ್ನು ಆಸ್ತಿಯೊಂದಿಗೆ ಟ್ಯಾಗ್ ಮಾಡುತ್ತೇವೆ. ಈ ಹೊಸ ಅಂಶಗಳಲ್ಲಿ ಮಾಲೀಕರ ವೈಯಕ್ತಿಕ ಭಾವಚಿತ್ರ, ಹಿನ್ನೆಲೆಯಲ್ಲಿ ಲ್ಯಾಂಡ್ಮಾರ್ಕ್ ಗುರುತುಗಳೊಂದಿಗೆ ಆಸ್ತಿಯ ಭಾವಚಿತ್ರಗಳು, ಇತ್ತೀಚಿನ ತೆರಿಗೆ ರಸೀದಿಗಳ ವಿವರಗಳೂ ಇರುತ್ತವೆ,” ಎಂದು ಡಾ. ಬಸವರಾಜು ಅವರು ವಿವರಿಸಿದ್ದಾರೆ.
“ಈ ರೀತಿಯ ವಿವರಗಳಿರುವಂತಹ ತೆರಿಗೆ ನೆಟ್ವರ್ಕ್ನಲ್ಲಿ ದಾಖಲಾಗಿರುವ ಆಸ್ತಿಗಳನ್ನು ವಂಚಿಸಲಾಗುವುದಿಲ್ಲ. ಎಲ್ಲಾ ವಿವರಗಳೂಂದಿಗೂ ಸಂಪರ್ಕ ಹೊಂದಿರುವ ಆಸ್ತಿ ನೋಂದಣಿಯನ್ನು ಯಾರೂ ಸಹ ಮೋಸ ಮಾಡಲಾಗುವುದಿಲ್ಲ. ಒಂದೇ ಒಂದು ಅಂಶ ಸರಿಹೊಂದದೇ ಇದ್ದರೂ ಸಹ ವಹಿವಾಟು ವಿಫಲವಾಗುತ್ತದೆ. ವಹಿವಾಟು ವಂಚನೆಗೆ ಒಳಗಾಗುವ ಸಂಭವ ಕಂಡು ಬಂದರೆ ಅಧಿಕಾರಿಗಳಿಗೆ ಸೂಚನೆಯೂ ದೊರೆಯುತ್ತದೆ,” ಎಂದರು.
ಒಮ್ಮೆ ಈ ಹೊಸ ವ್ಯವಸ್ಥೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದ ನಂತರ, ಬೆಂಗಳೂರು ಪೂರ್ವ ಪ್ರದೇಶದ ನಾಗರಿಕರು, ಅದರಲ್ಲಿಯೂ ವಿಶೇಷವಾಗಿ ಅಪಾರ್ಟ್ಮೆಂಟ್ ನಿವಾಸಿಗಳು ಖಾತೆಗೆ ಸಂಬಂಧಿಸಿದಂತೆ ಏಜೆಂಟರನ್ನು ಸಂಪರ್ಕಿಸಬೇಕಾಗುವುದಿಲ್ಲ. “ಫ್ಲ್ಯಾಟ್ ಮಾಲೀಕರು ಒಮ್ಮೆ ಅವರ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಪತ್ರಗಳು ಹಾಗೂ ಆಧಾರ್ ಕಾರ್ಡ್ ಅನ್ನು ಒದಗಿಸಿದರೆ ಅವರ ಹೆಸರಿನಲ್ಲಿ ಆನ್ಲೈನ್ನಲ್ಲೇ ಖಾತೆ ಪಡೆದುಕೊಳ್ಳಬಹುದು. ಅದನ್ನು ಪರಿಶೀಲನೆಯ ನಂತರ ಒಂದು ತಿಂಗಳ ಒಳಗಾಗಿ ಅವರಿಗೆ ತಲುಪಿಸಲಾಗುವುದು.
ಕಂದಾಯ ಇಲಾಖೆಯ ಅಧಿಕಾರಿಗಳು ಇನ್ನೂ ಆಸ್ತಿಯ ವಿವರಗಳನ್ನು ಅಪ್ಡೇಟ್ ಮಾಡುತ್ತಿದ್ದು, ಹೊಸ ಮಾನದಂಡಗಳ ಪ್ರಕಾರ ಮಾಹಿತಿಯನ್ನು ಸಂಗ್ರಹಿಸಲು ನಾಗರಿಕರ ಸಹಕಾರವನ್ನು ಕೋರಿದ್ದಾರೆ. ಒಮ್ಮೆ ಈ ಹೊಸ ವ್ಯವಸ್ಥೆ ಸ್ಥಿರಗೊಂಡರೆ ಬಿಬಿಎಂಪಿ ನಾಗರಿಕ ಮಾದರಿಯೊಂದನ್ನು ವಿನ್ಯಾಸಪಡಿಸುತ್ತದೆ.
“ಆಸ್ತಿ ಮಾಲೀಕರೇ ಅವರವರ ಆಸ್ತಿಗಳಿಗೆ ಸಂಬಂಧಪಟ್ಟ ವಿವರಗಳನ್ನು ಆನ್ಲೈನ್ ನಲ್ಲೇ ಅಪ್ಡೇಟ್ ಮಾಡುವುದು ಸಾಧ್ಯವಾಗುವ ಕಾರಣದಿಂದಾಗಿ ಈ ನಾಗರಿಕ ಮಾದರಿ ಈ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ. ಕಂದಾಯ ಅಧಿಕಾರಿಗಳು ಈ ವಿವರಗಳನ್ನು ಪರಿಶೀಲಿಸಿ, ಆಸ್ತಿಯನ್ನು ಟ್ಯಾಗ್ ಮಾಡುತ್ತದೆ,” ಎಂದು ಈ ಪ್ರಾಯೋಗಿಕ ಯೋಜನೆಯಲ್ಲಿ ಒಳಗೊಂಡಿರುವ ಅಧಿಕಾರಿಯೊಬ್ಬರು ವಿವರಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: cheated – house – building – BBMP- can -help you.