ಬೆಂಗಳೂರು:ಮೇ-17:(www.justkannada.in) ಖಾಲಿ ನಿವೇಶನಗಳಲ್ಲಿನ ಕಸ, ಕಟ್ಟಡದ ಭಗ್ನಾವಶೇಷಗಳು, ಗಿಡ-ಗಂಟಿಗಳನ್ನು ತೆರವುಗೊಳಿಸಲು ನಿವೇಶನಗಳ ಮಾಲೀಕರಿಗೆ ಬಿಬಿಎಂಪಿ 15 ದಿನಗಳ ಗಡುವು ನೀಡಿದೆ. ಒಂದು ವೇಳೆ ಗಡುವಿನೊಳಗೆ ನಿವೇಶನಗಳ ಮಾಲೀಕರು ತೆರವುಗೊಳಿಸದಿದ್ದಲ್ಲಿ 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.
ಬೆಂಗಳೂರಿನಲ್ಲಿ 2,98,017 ಖಾಲಿ ನಿವೇಶನಗಳಿವೆ. ಇದನ್ನು ಖರೀದಿ ಮಾಡಿರುವ ಮಾಲೀಕರು, ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಇದರಿಂದ ಅವು ಕಸದ ಗುಂಡಿಗಳಾಗಿ ಮಾರ್ಪಟ್ಟಿದ್ದು ಸೊಳ್ಳೆ, ಹಾವು, ಇಲಿ, ಹೆಗ್ಗಣಗಳ ಕಾಟ ಜಾಸ್ತಿಯಾಗಿದೆ. ಅಲ್ಲದೇ ತ್ಯಾಜ್ಯದ ದುರ್ನಾತದಿಂದ ಅಕ್ಕಪಕ್ಕದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಈ ಹಿನ್ನಲೆಯಲ್ಲಿ ಹಸಿರು ನ್ಯಾಯಾಧಿಕರಣ ಪೀಠದ ನಿರ್ದೇಶನದಂತೆ ರಚಿತವಾಗಿರುವ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಖಾಲಿ ನಿವೇಶನಗಳಲ್ಲಿನ ಕಸ, ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳದ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಬಿಬಿಎಂಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸುತ್ತೋಲೆ ಹೊರಡಿಸಿದ್ದು, ತ್ಯಾಜ್ಯ ತೆರವಿಗೆ 15 ದಿನಗಳ ಗಡುವು ನೀಡಿದ್ದಾರೆ.
15 ದಿನಗಳಲ್ಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ನಿರ್ಲಕ್ಷಿಸಿದರೆ 25 ಸಾವಿರ ದಂಡ ವಿಧಿಸಲಾಗುತ್ತದೆ ಆ ಬಳಿಕವೂ ನಿರ್ಲಕ್ಷ್ಯ ಮಾಡಿದಲ್ಲಿ 50 ಸಾವಿರ ರೂ. ನಿಂದ 1 ಲಕ್ಷ ರೂ.ವರೆಗೆ ದಂಡ ಹಾಕಲಾಗುತ್ತದೆ. ಜತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ ಮಾಲೀಕರು ತಮ್ಮ ನಿವೇಶನಗಳಿಗೆ ಕಾಂಪೌಂಡ್ ಅಥವಾ ತಂತಿ ಬೇಲಿ ನಿರ್ಮಿಸಬೇಕು. ನಿವೇಶನಗಳ ಬಳಿ ಸಾರ್ವಜನಿಕರು ಕಸ ಸುರಿಯದಂತೆ ಫಲಕಗಳನ್ನು ಹಾಕಿಸಬೇಕು ಎಂದು ಸೂಚನೆ ನೀಡಲಾಗಿದೆ.