ಮೈಸೂರು,ಡಿಸೆಂಬರ್,27,2023(www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಏಕವಚನದಲ್ಲಿ ಪದ ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ನಗರ ಪಾಲಿಕೆ ಸದಸ್ಯ ಅಯೂಬ್ ಖಾನ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಆಯೂಬ್ ಖಾನ್, ಪ್ರತಾಪ್ ಸಿಂಹ ಎಲ್ಲಿ, ಸಿಎಂ ಸಿದ್ದರಾಮಯ್ಯ ಎಲ್ಲಿ. ಸಿದ್ದರಾಮಯ್ಯ ಆಕಾಶ, ಆಕಾಶಕ್ಕೆ ಉಗುಳಿದರೆ ಯಾರ ಮೇಲೆ ಬೀಳುತ್ತೆ ಹೇಳಿ. ಈ ಹಿಂದೆ ಪ್ರತಾಪ್ ಸಿಂಹ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಸಿದ್ದರಾಮಯ್ಯನವರ ಕೊಡುಗೆ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ಪತ್ರಿಕೆಗಳಲ್ಲಿ ತಾವು ನೀಡಿದ್ದ ಹೇಳಿಕೆಯನ್ನ ಅವರಿಗೆ ತೋರಿಸುತ್ತೇವೆ. ಸುಖಾ ಸುಮ್ಮನೆ ಏನೇನೋ ಮಾತನಾಡುವುದಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಹಾರಾಣಿ ಕಾಲೇಜು, ಜಯದೇವ ಆಸ್ಪತ್ರೆ, ಕಮಿಷನರ್ ಕಚೇರಿ, ಡಿಸಿ ಕಚೇರಿ ಸೇರಿದಂತೆ ಮೈಸೂರಿನ ಅಭಿವೃದ್ಧಿಗೆ ನೂರಾರು ಕೋಟಿ ರೂ. ಕೊಟ್ಟು ಅಭಿವೃದ್ಧಿ ಮಾಡಿದ್ದಾರೆ. ಪ್ರತಾಪ್ ಸಿಂಹ ಮೈಸೂರು ಮಹಾರಾಜರನ್ನ ಬಿಟ್ಟರೆ ನಾನೇ ಮೈಸೂರನ್ನ ಅಭಿವೃದ್ಧಿ ಮಾಡುತ್ತಿದ್ದೇನೆ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ಹೈವೇ ಮಾಡಿಸಿದ್ದು ಸಿದ್ದರಾಮಯ್ಯ ಹೆಚ್.ಸಿ ಮಹದೇವಪ್ಪ. ಮೈಸೂರಿನ ಜನ ದಡ್ಡರಲ್ಲ ಇದನ್ನೆಲ್ಲಾ ನೋಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ಪ್ರತಾಪ್ ಸಿಂಹಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅಯೂಬ್ ಖಾನ್ ಹೇಳಿದರು.
ಹಿಜಾಬ್ ಆದೇಶ ವಾಪಾಸ್ ಪಡೆಯುತ್ತೇವೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆಯೂಬ್ ಖಾನ್, ಸಿದ್ದರಾಮಯ್ಯ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ.ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಊಟ ಮಾಡುವುದು ಅವರವರ ಹಕ್ಕು. ತಮಗಿಷ್ಟ ಬಂದ ಬಟ್ಟೆ ಧರಿಸೋದು ಅವರ ಹಕ್ಕು. ಇಂತಹದನ್ನೇ ಮಾತನಾಡಿಸಬೇಕು. ಹೀಗೆಯೇ ಇರಬೇಕು ಎನ್ನುವುದು ಬಿಜೆಪಿಯವರು ಮಾಡಿರೋದು ಎಂದು ವಾಗ್ದಾಳಿ ನಡೆಸಿದರು.
ಅಲ್ಪ ಸಂಖ್ಯಾತರಿಗೆ ಅನುದಾನ ಬಿಡುಗಡೆ ವಿಚಾರ ಕುರಿತು ಮಾತನಾಡಿದ ಆಯೂಬ್ ಖಾನ್, ನಾವೇನು ಭಿಕ್ಷೆ ಕೇಳುತ್ತಿಲ್ಲ. ಅಲ್ಪ ಸಂಖ್ಯಾತರಿಗೆ ಮೀಸಲಿಡುವ ಅನುದಾನ ಕೇಳುತ್ತಿದ್ದೇವೆ. ಅಲ್ಪ ಸಂಖ್ಯಾತರು ಅಂದ ತಕ್ಷಣ ಕೇವಲ ಮುಸ್ಲಿಂ ಸಮುದಾಯ ಬರಲ್ಲ. ಜೈನರು, ಕ್ರಿಶ್ಚಿಯನ್ನರು ಎಲ್ಲರು ಬರುತ್ತಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅಲ್ಪ ಸಂಖ್ಯಾತರಿಗೆ ಅನುದಾನ ಕೊಟ್ಟಿರಲಿಲ್ಲ. ಈಗಿನ ಸರ್ಕಾರ ಅನುದಾನ ಕೊಡುತ್ತೇವೆ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ. ಪ್ರತಿಯೊಂದು ಸಮುದಾಯಕ್ಕೂ ಹೇಗೆ ಅನುದಾನ ಕೊಡುತ್ತಾರೆ ಅದೇ ರೀತಿ ನಮಗೂ ಕೊಟ್ಟಿದ್ದಾರೆ. ಅಲ್ಪ ಸಂಖ್ಯಾತರಲ್ಲಿ ಅನೇಕ ಬಡ ವಿದ್ಯಾರ್ಥಿಗಳಿದ್ದಾರೆ. ಉನ್ನತ ಶಿಕ್ಷಣವಾದ ಇಂಜಿನಿಯರ್, ಮೆಡಿಕಲ್ ಓದಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಸಮುದಾಯವನ್ನ ಮೇಲಕ್ಕೆತ್ತಲು ಅನುದಾನ ಬಹು ಮುಖ್ಯ. ನಮ್ಮ ಅನುದಾನ ನಾವು ಕೇಳುವುದರಲ್ಲಿ, ಸರ್ಕಾರ ಕೊಡುವುದರಲ್ಲಿ ತಪ್ಪೇನಿಲ್ಲ ಎಂದು ಅಯೂಬ್ ಖಾನ್ ತಿಳಿಸಿದರು.
Key words: CM Siddaramaiah-developed -Mysore -Ayub Khan – Pratap Simha