ಬೆಂಗಳೂರು,ಏಪ್ರಿಲ್,16,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರ ಜೋರಾಗಿದ್ದು, ಈಗಾಗಲೇ 8 ನಗರಗಳಲ್ಲಿ ಕೊರೋನಾ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಳ್ಳಿಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ, ಪ್ರಾದೇಶಿಕ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯು ಅತಿ ಹೆಚ್ಚಾಗಿ ಹರಡುತ್ತಿರುವುದು ಕಂಡು ಬಂದಿದ್ದರಿಂದ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಳ್ಳಿಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು.
ಇದೀಗ ಕೋವಿಡ್-19ರ ಸಾಂಕ್ರಾಮಿಕ ರೋಗವು ರಾಜ್ಯಾಧ್ಯಂತ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಈ ಈ ಸಾಂಕ್ರಾಮಿಕ ರೋಗವು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ 2021ರ ಏಪ್ರಿಲ್ ಮಾಹಿಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಳ್ಳಿಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಗಿತಗೊಳಿಸುವಂತೆ ಸೂಚಿಸಿ ಆದೇಶಿಸಿದ್ದಾರೆ.
Key words: Covid- increase –DC-gramavastavya- program- Cancel