ಮೈಸೂರು,ಆ,29,2020(www.justkannada.in): ಕಲಬುರಗಿ, ಬೆಳಗಾವಿ, ಬೆಂಗಳೂರು ಹಾಗೂ ಮೈಸೂರಿನ ನಾಲ್ಕು ವಿಭಾಗಗಳಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸಹಕಾರ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕಳೆದ ವರ್ಷ 13,500 ಕೋಟಿ ರೂ., ಈ ಸಾಲಿನಲ್ಲಿ 14,500 ಕೋಟಿ ರೂ. ಹಾಗೂ ಮುಂದಿನ ವರ್ಷ 20 ಸಾವಿರ ಕೋಟಿ ರೂಪಾಯಿ ಸಾಲ ನೀಡುವಂತೆ ಮುಖ್ಯಮಂತ್ರಿಗಳ ಜೊತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಹೊಸಬರನ್ನು ಗುರುತಿಸಿ ಸಾಲ ನೀಡಬೇಕೆಂಬ ಗುರಿ ನೀಡಲಾಗಿದೆ. ಅಲ್ಲದೆ, 21 ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ಸ್ ವತಿಯಿಂದ 14500 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹಾಕಲಾಗಿದೆ. ಈ ಬಗ್ಗೆ ಆಗಸ್ಟ್ 31 ರ ಗುರಿ ನೀಡಲಾಗಿದೆ. 5529 ಕೋಟಿ ರೂ. ಸಾಲವನ್ನು 119 ಸಕ್ಕರೆ ಕಾರ್ಖಾನೆಗಳು ಪಡೆದಿವೆ. ಆದರೆ, ವಸೂಲಾತಿ ಏನೂ ಆಗಿಲ್ಲ. ಅದೇ ರೈತರಿಗೆ ಸಾಲದ ಹಣ ಕೊಟ್ಟರೆ ಅವರಿಂದ ಶೇಕಡಾ 100ರಷ್ಟು ಹಣ ಮರುಪಾವತಿಯಾಗುತ್ತದೆ. ಹೀಗಾಗಿ ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳಿಗಾಗಿ ಸಾಲ ಕೊಟ್ಟರೆ ಸಾಲ ಮರುಪಾವತಿಯಾಗುವುದಲ್ಲದೆ ಬ್ಯಾಂಕುಗಳು ಅಭಿವೃದ್ಧಿಯಾಗಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ರಾಜ್ಯದ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ತಲಾ 3000 ಸಿಗಬೇಕು ಎಂಬ ನಿಟ್ಟಿನಲ್ಲಿ ನಾನೂ ಸಹ ವಿಚಾರಣೆ ನಡೆಸುತ್ತಿದ್ದೇನೆ. ಈಗಾಗಲೇ 42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ ಬಹುತೇಕರಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ. ಕೆಲವೇ ಕೆಲವು ಆಶಾ ಕಾರ್ಯಕರ್ತೆಯರಿಗೆ ಲಭಿಸಿಲ್ಲ ಎಂಬ ಮಾಹಿತಿ ಕೇಳಿ ಬರುತ್ತಿದೆ. ಹೀಗಾಗಿ ಯಾರಿಗೆ ತಲುಪಿಲ್ಲವೋ ಅವರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಸಚಿವ ಎಸ್..ಟಿ. ಸೋಮಶೇಖರ್ ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದು, ಅದಕ್ಕೆ ಯಾವುದೇ ದಕ್ಕೆಯಾಗದಂತೆ ಕಾರ್ಯನಿರ್ವಹಿಸಿದ್ದೇವೆ. ಇನ್ನು ಸ್ತ್ರೀ ಶಕ್ತಿ ಗುಂಪುಗಳಂತೆ ಆಶಾ ಕಾರ್ಯಕರ್ತೆಯರಿಗೂ ಸಾಲ ಯೋಜನೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಸಹಕಾರಿ ಸಂಘದ ಮೂಲಕ ಸಾಲ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ.ಶಂಕರ್ ಅವರು ಮೈಸೂರಿನಲ್ಲಿಯೇ ಇರಬೇಕೆಂಬುದು ನನ್ನನ್ನೂ ಸೇರಿದಂತೆ ಎಲ್ಲರ ಬಯಕೆಯಾಗಿತ್ತು. ಕೋವಿಡ್ ಸೇರಿದಂತೆ ಹಲವು ಸಂಕಷ್ಟಗಳ ಪರಿಸ್ಥಿತಿಯಲ್ಲಿ ಅವರ ಸೇವೆ ಶ್ಲಾಘನೀಯ. ಆದರೆ, ಹೆಚ್ಚಿನ ತರಬೇತಿಗಾಗಿ ಮಸ್ಸೂರಿಗೆ ತಾವು ಹೋಗಬೇಕಿದ್ದು, ಮುಂದಿನ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ತಮ್ಮನ್ನು ವರ್ಗಾವಣೆ ಮಾಡಿ ಎಂದು ಅವರೇ ಮುಖ್ಯಮಂತ್ರಿಗಳ ಬಳಿ ಕಳೆದ 15 ದಿನಗಳ ಹಿಂದೆಯೇ ಕೇಳಿಕೊಂಡಿದ್ದರು. ಮುಖ್ಯಮಂತ್ರಿಗಳು ಸಹ ನನ್ನ ಬಳಿ ಈ ಬಗ್ಗೆ ಚರ್ಚಿಸಿದಾಗ ಜಿಲ್ಲಾಧಿಕಾರಿಗಳಾದ ಅಭಿರಾಂ ಅವರು ನನ್ನ ಬಳಿಯೂ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದೆ. ಹೀಗಾಗಿ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಅಲ್ಲದೆ, ಈಗ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಆಗಮಿಸಿರುವ ಶರತ್ ಅವರೂ ಸಹ ದಕ್ಷ ಅಧಿಕಾರಿಯಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರಿಗೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ. ಹರೀಶ್ ಗೌಡ ಮಾತನಾಡಿ, ಕೊರೋನಾದಂತಹ ಸಂಕಷ್ಟಗಳ ಕಾಲದಲ್ಲಿ ಮನೆ ಮನೆಗೆ ಹೋಗಿ ಕಾರ್ಯನಿರ್ವಹಣೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಕೊಡಬೇಕೆಂಬ ಮುಖ್ಯಮಂತ್ರಿಗಳ ನಿರ್ಧಾರವನ್ನು ಅನುಷ್ಠಾನಕ್ಕೆ ತರುವಲ್ಲಿ ಸಚಿವರಾದ ಸೋಮಶೇಖರ್ ಅವರ ಕೊಡುಗೆ ಪ್ರಮುಖವಾಗಿದೆ. ಪ್ರತಿ ಹಣವೂ ಎಲ್ಲೂ ದುರುಪಯೋಗವಾಗದೆ ತಲುಪಿದೆ ಎಂದರೆ ಸಚಿವರೇ ಇದಕ್ಕೆ ಕಾರಣ ಎಂದು ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸಿಗಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಕಡೆ ಸಂಚರಿಸಿ ತಪಸ್ಸಿನ ರೀತಿಯಲ್ಲಿ ಸಚಿವರಾದ ಸೋಮಶೇಖರ್ ಅವರು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದರು.
ಘೋಷಣೆಯಾಗಿರುವ ಯಾವುದಾದರೊಂದು ಕಾರ್ಯಕ್ರಮ ನಿಗದಿತ ಸಮಯದಲ್ಲಿ ಅನುಷ್ಠಾನವಾಗಿರುವ ಕಾರ್ಯಕ್ರಮ ಎಂದರೆ ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಯೋಜನೆಯಾಗಿದೆ. ಇನ್ನು ಲಕ್ಷ್ಮಣತೀರ್ಥಕ್ಕೆ ಕಲುಷಿತ ನೀರು ಸೇರುತ್ತಿರುವುದನ್ನು ತಡೆಯುವುದಕ್ಕೋಸ್ಕರ ಇದಕ್ಕೆ ಸಂಬಂಧಪಟ್ಟಂತೆ ಇರುವ ಯೋಜನೆಗಳ ಬಗ್ಗೆ ಸೋಮಶೇಖರ್ ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೆ, ಮೈಸೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ಮಂಜುನಾಥ್ ಮಾತನಾಡಿ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುತ್ತದೆ ಎಂಬುದಕ್ಕೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರೇ ಸಾಕ್ಷಿ. ಅವರು ಜನರ ದುಡ್ಡನ್ನು ಜನರಿಗೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಶರತ್ ಸೇರಿದಂತೆ ಇತರರು ಇದ್ದರು.
Key words: Debt Fair – four-division- farmers-Minister -S T Somashekhar