ಬೆಂಗಳೂರು, ಮೇ 05, 2020 (www.justkannada.in): ರಾಜ್ಯದ ಪ್ರತಿ ನಾಗರೀಕನ “ಹೆಲ್ತ್ ರಿಜಿಸ್ಟರ್’ (ಆರೋಗ್ಯ ದತ್ತಾಂಶ) ಸಿದ್ಧಪಡಿಸುವ ಮಹತ್ವಾಕಾಂಕ್ಷೆ ಯೋಜನೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಕರೋನಾ ಸೋಂಕಿತನ ಸಂಪರ್ಕದ ಹಿನ್ನಲೆಯಲ್ಲಿ ಸ್ವಯಂ ದಿಗ್ಭಂದನದಲ್ಲಿರುವ ಸಚಿವರು ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸೋಮವಾರ ತಮ್ಮ ನಿವಾಸದಲ್ಲಿ ನಡೆಸಿದ ವಿಡಿಯೋ ಸಂವಾದದ ವೇಳೆ ಈ ವಿಷಯ ತಿಳಿಸಿದರು.
ಕೋವಿಡ್ – 19 ನಮಗೆ ಸಾಕಷ್ಟು ಅನುಭವ ನೀಡಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡುವ ದೃಷ್ಟಿಯಿಂದ ಪ್ರತಿ ಮನೆ ಮತ್ತು ಎಲ್ಲ ಕುಟುಂಬ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರೋಗ್ಯ, ಕಂದಾಯ, ಶಿಕ್ಷಣ, ಮತ್ತು ಸ್ಥಳೀಯ ಸಂಸ್ಥೆ ಸಿಬ್ಬಂದಿಗಳ ಜತೆ ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಪ್ರತಿ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು ಎಂದರು.
ಸಮೀಕ್ಷೆಯಲ್ಲಿ ಸಂಗ್ರಹಿಸಬೇಕಿರುವ ಮಾಹಿತಿ, ಸಮೀಕ್ಷೆ ಸ್ವರೂಪ ಮತ್ತು ಕಾರ್ಯ ವಿಧಾನಗಳ ಕರಡು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಕರಡು ಸಿದ್ಧವಾದ ಬಳಿಕ ತಜ್ಞರ ಜತೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು. ಮುಂದುವರಿದ ರಾಷ್ಟ್ರಗಳಲ್ಲಿ ಇದೇ ವಿಧಾನ ಅಳವಡಿಸಿಕೊಂಡು ಆರೋಗ್ಯ ಸೇವೆ ನೀಡಲಾಗುತ್ತಿದೆ. ಯೋಜನೆಗಳನ್ನು ಸಿದ್ಧಪಡಿಸುವ ಮತ್ತು ಅನುಷ್ಠಾನಗೊಳಿಸಲು ಇದು ನೆರವಾಗಲಿದೆ. ಪಿಎಚ್ಸಿ ವ್ಯಾಪ್ತಿಯಲ್ಲಿ ಈ ಸಮೀಕ್ಷಾ ಕಾರ್ಯವು ನಿಯಮಿತವಾಗಿ ನಡೆಯುತ್ತಿರುತ್ತದೆ. ಇದರಿಂದ ಪ್ರತಿ ನಾಗರೀಕನ ನಿಖರ ದತ್ತಾಂಶ ಲಭ್ಯವಿರುತ್ತದೆ ಎಂದು ವಿವರಿಸಿದರು.
ಲಾಕ್ಡೌನ್ ಸಡಿಲಿಕೆ ನಂತರ ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮುಂದೆಯೂ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಕ್ರಮಗಳನ್ನು ಮುಂದುವರಿಸಲಿದೆ. ಜನರೂ ಕೂಡ ಹೊಣೆಗಾರಿಕೆಗಳನ್ನು ಅರಿತು ಸಾಮಾಜಿಕ ಅಂತರ, ಸ್ವಚ್ಛತೆ, ಮಕ್ಕಳು ಮತ್ತು ಹಿರಿಯ ನಾಗರೀಕರನ್ನು ಇನ್ನೂ ಕೆಲ ತಿಂಗಳುಗಳ ಕಾಲ ಮನೆಯಲ್ಲೇ ಇರುವಂತೆ ಎಚ್ಚರವಹಿಸಬೇಕು. ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಮುಂದಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟದ ಮೇಲೆ ನಿಷೇಧ ಹೇರಿದ್ದರೂ ಕೆಲ ಮಾರಾಟಗಾರರು ಕದ್ದು ಮುಚ್ಚಿ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ. ನಂತರ ತಮ್ಮ ಅಂಗಡಿಯಲ್ಲಿ ಕಳವು ಆಗಿದೆ ಎಂದು ಸುಳ್ಳು ದೂರು ನೀಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಸುಳ್ಳು ದೂರು ನೀಡಿರುವ, ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವ ಮಳಿಗೆಗಳ ಲೈಸೆನ್ಸ್ ಅನ್ನು ಕಾಯಂ ಆಗಿ ರದ್ದುಪಡಿಸಲು ಅಬಕಾರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು,
ನೆರೆ ರಾಜ್ಯಗಳೊಂದಿಗೆ ಗಡಿ ಹಂಚಿಕೊಳ್ಳುವ ಗ್ರಾಮಗಳಲ್ಲಿ ಗ್ರಾಮದ ಯುವಕರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಗಳು ಒಳ ಬರುವ ಮತ್ತು ಹೊರ ಹೋಗುವವರ ಮೇಲೆ ನಿಗಾ ಇರಿಸಿ ಅನುಮಾನ ಬಂದವರನ್ನು ತಕ್ಷಣ ದಿಗ್ಭಂಧನಕ್ಕೆ ಒಳಪಡಿಸಿ ಮೇಲಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ. ಹಾಗೆಯೇ ಗಡಿಯಲ್ಲಿನ ಪ್ರಮುಖ ಹೆದ್ದಾರಿಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ. ಆಗಮಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಂವಾದ ನಡೆಸಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕುಡಿಯುವ ನೀರು, ಜಾನುವಾರಗಳ ಮೇವು ಸಂಗ್ರಹದ ಮಾಹಿತಿ ಪಡೆದರು. ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಬಿತ್ತನೆ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ದಾಸ್ತಾನಿನ ಮಾಹಿತಿ ಪಡೆದರು. ಲಾಕ್ಡೌನ್ ಸಡಿಲಿಕೆ ಬಳಿಕ ಜಿಲ್ಲಾ ಕೇಂದ್ರ ಮತ್ತು ಪಟ್ಟಣಗಳ ಮೇಲಿರುವ ಒತ್ತಡ ನಿವಾರಣೆಗೆ ಸಂತೆಗಳನ್ನು ನಡೆಸಲು ತಹಸೀಲ್ದಾರ್ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತೆಗಳಲ್ಲೂ ಮಾರ್ಗಸೂಚಿ ಅನ್ವಯ ಸಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಮಾಸ್ಕ್ ಬಳಕೆ ಕಡ್ಡಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.