ಮೈಸೂರಿನಲ್ಲಿ ‘ದೇಸಿ ಅಕ್ಕಿ ಮೇಳ ’: ಅಭಿವೃದ್ದಿಪಡಿಸಿದ ಭತ್ತದ ತಳಿಗೆ ತಂದೆ ತಾಯಿ ಹೆಸರಿಟ್ಟ ರೈತ.

ಮೈಸೂರು,ಮೇ,18,2024 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ದೇಸಿ ಅಕ್ಕಿ ಮೇಳ ನಡೆಯುತ್ತಿದ್ದು, ಮೇಳದಲ್ಲಿ ಹಲವು ಬಗೆಯ ಅಕ್ಕಿ, ಭತ್ತ, ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಸಮೃದ್ದ ಸಹಜ ಸಾವಯವ ಕೃಷಿ ಬಳಗ ಮತ್ತು ಭತ್ತ ಉಳಿಸಿ ಅಭಿಯಾನದ ಸಂಯುಕ್ತಾಶ್ರಯದಲ್ಲಿ ನಗರದ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಅಕ್ಕಿ ಮೇಳ ಆಯೋಜನೆ ಮಾಡಲಾಗಿದೆ.

ಮೇಳದಲ್ಲಿ 150 ಕ್ಕೂ ಹೆಚ್ಚು ತಳಿಯ ಭತ್ತ, 30 ಕ್ಕೂ ಹೆಚ್ಚು ಬಗೆಯ ಅಕ್ಕಿ, ಸಿರಿ ಧಾನ್ಯ, ಸಿರಿ ಧಾನ್ಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ.  ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯ ಬೀಜ ಸಂರಕ್ಷಕರು ಮತ್ತು ಸಾವಯವ ಕೃಷಿ ನಿರತ ರೈತರು ಮತ್ತು ಪ್ರಗತಿಪರ ರೈತರು ಭಾಗಿಯಾಗಿದ್ದಾರೆ.

ಈ ಮಧ್ಯೆ  ಮಂಡ್ಯದ ಶಿವಳ್ಳಿ ರೈತ ಬೋರೇಗೌಡ ಅವರು ಸ್ವತಃ ಎರಡು ತಳಿಗಳ ಅಭಿವೃದ್ಧಿ ಪಡಿಸಿದ್ದು  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಾವು  ಅಭಿವೃದ್ಧಿ ಪಡಿಸಿರುವ ಭತ್ತದ ತಳಿಗಳಿಗೆ ತನ್ನ ತಂದೆ ತಾಯಿ ಮತ್ತು ಮಡದಿ  ಹೆಸರನ್ನೇ ಇಟ್ಟಿದ್ದಾರೆ. ಸಣ್ಣ ಸಿದ್ದ ಮತ್ತು ಹೇಮಾಶ್ರೀ ಎಂದು ಭತ್ತದ ತಳಿಗೆ ಬೋರೇಗೌಡ ಹೆಸರಿಟ್ಟಿದ್ದಾರೆ.

ಹಸಿರು ಕ್ರಾಂತಿ ಬಳಿಕ ದೇಸಿಯ ತಳಿಗಳು ಕಣ್ಮರೆಯಾಗಿವೆ.  ಅವುಗಳ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇಸೀಯ ಮೂಲ ತಳಿಗಳು ಪೋಷಕಾಂಶಗಳ ಕಣಜವೇ ಆಗಿವೆ.  ಹಸಿರು ಕಾಂತ್ರಿಯ ವೇಳೆ ಹೈ ಬ್ರೀಡ್ ತಳಿಗಳು ಬಂದು ಅವುಗಳಲ್ಲಿ ಕಡಿಮೆ ಪೋಷಕಾಂಶವಿದೆ. ಇಂತಹ ಆಹಾರ ಸೇವನೆಯಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಜನರು ಮುಂದಿನ ಪೀಳಿಗೆಗೆ ನಮ್ಮ ದೇಸಿ ತಳಿಗಳ ಉಳಿಸಿ ಬೆಳೆಸಬೇಕಿದೆ ಎಂದು ಸಹಜ ಸಮೃದ್ಧ ಸಾವಯವ ಕೃಷಿ ಬಳಗದ ಕೃಷ್ಣ ಪ್ರಸಾದ್ ತಿಳಿಸಿದರು.

Key words: Desi Akki Mela – Mysore-Farmer