ಬೆಂಗಳೂರು,ನವೆಂಬರ್,20,2020(www.justkannada.in): ಭಾರತವನ್ನು 1 ಟ್ರಿಲಿಯನ್ ಡಾಲರ್ (ಒಂದು ಲಕ್ಷ ಕೋಟಿ ಡಾಲರ್) ಆರ್ಥಿಕತೆಯ ದೇಶವಾಗಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಡಿಜಿಟಲ್ ತಂತ್ರಜ್ಞಾನ ಮಹತ್ವದ ಕೊಡುಗೆ ನೀಡಲಿದೆ. “ಮೇಕ್ ಇನ್ ಇಂಡಿಯಾ” ಅಭಿಯಾನವು ಇದಕ್ಕೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳು ಜನರ ಜೀವನ ಶೈಲಿಯಲ್ಲಿ ಕ್ರಾಂತಿಕಾರ ಬದಲಾವಣೆಗಳನ್ನು ತರಲಿದೆ ಎಂಬ ಬಗ್ಗೆ ಬೆಂಗಳೂರು ಟೆಕ್ ಸಮ್ಮೇಳನ-2020 ಬೆಳಕು ಚೆಲ್ಲಿದೆ.
ವರ್ಚುಯಲ್ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ “ಸಿಲಿಕಾನ್ ಟು ಸಿಸ್ಟಮ್: ಪವರಿಂಗ್ 1 ಟ್ರಿಲಿಯನ್ ಡಿಜಿಟಲ್ ಎಕಾನಮಿ” ಎಂಬ ಗೋಷ್ಠಿಯಲ್ಲಿ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಕ್ಷೇತ್ರದ ಉದ್ಯಮಿಗಳು ಪಾಲ್ಗೊಂಡು ಸಿಲಿಕಾನ್ ಚಿಪ್ ಗಳ ಅಭಿವೃದ್ಧಿಯಲ್ಲಿ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳು ಭಾರತಕ್ಕೆ ವರದಾನವಾಗಿದ್ದು, ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಅಲ್ಲದೇ ರಾಷ್ಟ್ರೀಯ ಹಾಗೂ ಸಾಮಾಜಿಕ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ ಎಂದು ತಜ್ಞರು ವಿಚಾರ ಮಂಡಿಸಿದರು.
“ಕಾರ್ಯಕ್ಷಮತೆ ಹೆಚ್ಚಿಸುವ ಸಿಲಿಕಾನ್ ಚಿಪ್ ಗಳ ಅಭಿವೃದ್ಧಿಯಿಂದ ಸ್ಮಾರ್ಟ್ ಫೋನ್ ಹಾಗೂ ಸ್ಮಾರ್ಟ್ ಕಂಪ್ಯೂಟರ್ ಗಳನ್ನು ಅಭಿವೃದ್ಧಿಪಡಿಸಿ ಜನರ ಜೀವನ ಶೈಲಿಯನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಬಹುದಾಗಿದೆ. ಸಿಲಿಕಾನ್ ಚಿಪ್ ಬಳಸಿಕೊಂಡು ಅಭಿವೃದ್ಧಿಪಡಿಸಲಾಗುವ ಕೃತಕ ಬುದ್ಧಿಮತ್ತೆಯ ಅಪ್ಲಿಕೇಷನ್ ಆಧಾರಿತ ವಿದ್ಯುನ್ಮಾನ ಪರಿಕರಗಳು,ರೊಬೋಟ್ ಗಳು, ರಿಯಲ್ ಟೈಮ್ ಟ್ರ್ಯಾಕರ್ ಸಿಸ್ಟಮ್ ಗಳಿಂದ “ಸ್ಮಾರ್ಟ್ ಸಮಾಜ”ವನ್ನು ನಿರ್ಮಿಸಲು ಸಾಧ್ಯವಿದೆ. ಈ ಕ್ಷೇತ್ರವು ಇದೇ ವೇಗದಲ್ಲಿ ಮುನ್ನಡೆದರೆ ಮುಂದಿನ ಒಂದು ದಶಕದಲ್ಲಿ ವಿಶ್ವದ ಆರ್ಥಿಕತೆ 17 ಟ್ರಿಲಿಯನ್ ಡಾಲರ್ ತಲುಪಲಿದೆ. ಇದರಲ್ಲಿ ಭಾರತವೇ ಮುಂಚೂಣಿಯಲ್ಲಿರಲಿದೆ,” ಎಂದು ಐಒಟಿ ಗ್ರೂಪ್ ಹಾಗೂ ಇಂಟೆಲ್ ಇಂಡಿಯಾದ ಉಪಾಧ್ಯಕ್ಷ ಸಂಬಿತ್ ಸಾಹು ಹೇಳಿದರು.
ಮಾನವ ಮಿದುಳನ್ನೇ ಹೋಲುವ ಚಿಪ್…
“ಸಿಲಿಕಾನ್ ಚಿಪ್ಗಳ ಅಭಿವೃದ್ಧಿಯಲ್ಲಿ ಇಂಟೆಲ್, ಎನ್ವಿಉಡಿಯಾ, ಸೆರಿಬ್ರಾಸ್, ಕ್ವಾಲ್ಕಾಮ್ ಹೀಗೆ ಅನೇಕ ಕಂಪನಿಗಳು ಮುಂದಿವೆ. ಕೋಟ್ಯಂತರ ನ್ಯೂರಾನ್ ಗಳನ್ನು ಹೊಂದಿರುವ ಮಾನವನ ಮೆದುಳಿಗೆ ಸಮನಾದ ರೀತಿಯಲ್ಲಿ ಇಂಟೆಲ್ ಕಂಪನಿಯು ನ್ಯೂರೋ ಮಾರ್ಫಿನ್ ಚಿಪ್ಗೋಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದಿನ್ನೂ ಸಂಶೋಧನೆ ಹಂತದಲ್ಲಿದೆ. ಈ ಚಿಪ್ ಗಳಲ್ಲಿ ಮಾಹಿತಿ ರವಾನೆಯ ವೇಗ ಸಾಮಾನ್ಯ ಸಿಪಿಯುಗಿಂತಲೂ 1 ಸಾವಿರ ಪಟ್ಟು ವೇಗವಾಗಿರುತ್ತದೆ. ಇದು ಕಾರ್ಯರೂಪಕ್ಕೆ ಬಂದ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರವು ಊಹೆಗೂ ನಿಲುಕದಂತೆ ಬೆಳೆಯಲಿದೆ. ಅದರಲ್ಲೂ ಭಾರತದಲ್ಲಿ ರಸ್ತೆ ಸುರಕ್ಷತೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ. ಅನುವಾದ ಕ್ಷೇತ್ರಕ್ಕೂ ಪರಿಣಾಮಕಾರಿಯಾಗಲಿದ್ದು, ಪ್ರಾದೇಶಿಕ ಭಾಷೆಗಳ ಡಿಜಿಟಲ್ ಬೆಳವಣಿಗೆಗೆ ಸಹಾಯವಾಗಲಿದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಹುಟ್ಟಿಕೊಳ್ಳಲಿವೆ,” ಎಂದರು.
ಸರಕಾರದ ಬೆಂಬಲ ಅಗತ್ಯ:
“ಡ್ರೀಮ್ ಬಿಗ್, ಕ್ರಿಯೇಟ್ ಬಿಗ್’’’ ಎಂಬುದು ಮುಖ್ಯ. ಸ್ಮಾರ್ಟ್ಫೋರನ್ ತಂತ್ರಜ್ಞಾನದಲ್ಲಿ ವಿಶ್ವದ ದೈತ್ಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದರೂ ವಿನ್ಯಾಸ ಹಾಗೂ ಜೋಡಣೆಯಲ್ಲಿ ಚೀನಾವೇ ನಂಬರ್ ಒನ್ ಆಗಿದೆ. ಇದಕ್ಕೆ ಅಲ್ಲಿನ ಸರಕಾರದ ನೀತಿಗಳು ಕಾರಣವಾಗಿವೆ. ವಾಸ್ತವದಲ್ಲಿ ಮೊಬೈಲ್ ಹಾಗೂ ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿಶ್ವದ ತಜ್ಞರ ಪೈಕಿ ಶೇಕಡ 50ರಷ್ಟು ಭಾರತೀಯರೇ ಆಗಿದ್ದು, ಉಳಿದವರು ಮಾತ್ರ ಬೇರೆಯವರು. ಭಾರತೀಯರು ಇಷ್ಟು ಪ್ರತಿಭಾವಂತರಿದ್ದರೂ ಅದರ ಫಲ ದೇಶದ ಬೆಳವಣಿಗೆಗೆ ಸಿಕ್ಕಿಲ್ಲ. ದೇಶೀಯ ಕಂಪನಿಗಳಿಗೆ ಸರಕಾರ ಬೆಂಬಲವಾಗಿ ನಿಲ್ಲಬೇಕು. ಈ ವಿಚಾರದಲ್ಲಿ “ಮೇಕ್ ಇನ್ ಇಂಡಿಯಾ” ಯೋಜನೆ ಪೂರಕವಾಗಿದೆ ಎಂದು ಲಾವಾ ಇಂಟರ್ನ್ಯಾಕಷನಲ್ನಲ ಅಧ್ಯಕ್ಷ ಹರಿ ಓಂ ರಾಯ್ ಹೇಳಿದರು.
“ಸೆಮಿ ಕಂಡಕ್ಟರ್ ಗಳಿಂದ ಎಲೆಕ್ಟ್ರಾನಿಕ್ ಕ್ಷೇತ್ರವೂ ಹೊಸ ದಿಕ್ಕಿನತ್ತ ಸಾಗಿದೆ. ಆದರೆ ಇನ್ನೂ ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಪರಿಕರಗಳ ವಿಚಾರದಲ್ಲಿ ನಮ್ಮ ಸೇನೆಯು ಚೀನಾ ಹಾಗೂ ರಷ್ಯಾ ಅವಲಂಬಿತ ತಂತ್ರಜ್ಞಾನವನ್ನೇ ಹೆಚ್ಚಾಗಿ ನಂಬಿಕೊಂಡಿದ್ದು, ರಾಷ್ಟ್ರೀಯ ಸುರಕ್ಷತೆಯಿಂದ ಇದು ಒಳ್ಳೆಯದಲ್ಲ. ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸದೇ ಹೋದಲ್ಲಿ ಮುಂದಿನ 5 ವರ್ಷದಲ್ಲಿ 200 ಬಿಲಿಯನ್ ಡಾಲರ್ ಮೌಲ್ಯದ ಪರಿಕರಗಳನ್ನು ರಫ್ತು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸರಕಾರ ಸೆಮಿಕಂಡಕ್ಟರ್ ಮತ್ತು ದೂರಸಂಪರ್ಕ ಪರಿಕರಗಳ ತಯಾರಿಕಾ ಕಂಪನಿಗಳಿಗೆ ಉತ್ತೇಜನ ನೀಡಬೇಕು ಎಂದು ಸಹಸ್ರಾ ಎಲೆಕ್ಟ್ರಾನಿಕ್ಸ್ನ್ ವ್ಯವಸ್ಥಾಪಕ ನಿರ್ದೇಶಕ ಅಮೃತ್ ಮನ್ವಾನಿ ಹೇಳಿದರು.
Key words: Digital technology -‘sector -complementary – country’s- $ 1 trillion- economy.