ಬೆಂಗಳೂರು,ಆಗಸ್ಟ್,18,2023(www.justkannada.in): ನಿಯಮಬಾಹಿರವಾಗಿ ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಂಡಿರುವ ಸಿಬ್ಬಂದಿಗಳನ್ನ ಸೇವೆಯಿಂದ ಬಿಡುಗಡೆಗೊಳಿಸುವಂತೆ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ನೌಕರರುಗಳನ್ನು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿಗಳು ಸ್ವೀಕೃತಗೊಳ್ಳುತ್ತಿವೆ. ಬಹುತೇಕ ವಿಶ್ವವಿದ್ಯಾಲಯಗಳು ತಮ್ಮ ಆಂತರಿಕ ಸಂಪನ್ಮೂಲಗಳ ಬಲದ ಮೇಲೆ ರಾಜ್ಯ ಸರ್ಕಾರ, ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಇಲ್ಲದೇ ಮಂಜೂರಾದ ಹುದ್ದೆಗಳಿಗೂ ಮೀರಿ ದುಪ್ಪಟ್ಟು ಸಂಖ್ಯೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ನಿಯಮಬಾಹಿರವಾಗಿ ನೇಮಿಸಿಕೊಳ್ಳಲಾಗಿದ್ದು, ಈ ರೀತಿ ನೇಮಿಸಿಕೊಂಡಿರುವ ತಾತ್ಕಾಲಿಕ ನೌಕರರನ್ನು ಕೂಡಲೇ ಬಿಡುಗಡಗೊಳಿಸುವಂತೆ ಹಿಂದ ಸರ್ಕಾರದಿಂದ ಸುತ್ತೋಲೆಗಳನ್ನು ಹೊರಡಿಸಲಾಗಿದ್ದರೂ ಅದರಂತೆ ವಿಶ್ವವಿದ್ಯಾಲಯಗಳು ಕ್ರಮವಹಿಸಿಲ್ಲ.
ಪ್ರಸ್ತುತ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಳಹಂತದ ಸಿಬ್ಬಂದಿಗಳು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ವಿವಿಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ಮಂಜೂರಾಗದ ಹುದ್ದೆಗಳಿಗೆ ನಿಯಮಾಬಾಹಿರವಾಗಿ ನೇಮಿಸಲಾಗಿದೆ. ದ್ವಿ.ದ.ಸ/ಬೆರಳಚ್ಚುಗಾರರು/ಡಿ.ಇ.ಓ/ವಾಹನಚಾಲಕರು ಗ್ರೂಪ್-ಡಿ ಮುಂತಾದ ತತ್ಸಮಾನ ಅನೇಕ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡುವುದು ಸರ್ಕಾರದ ನೀತಿಯಾಗಿದ್ದು, ನೇರನೇಮಕಾತಿಗೆ ಅವಕಾಶವಿರುವುದಿಲ್ಲ. ಹೀಗಾಗಿ ನೇರನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಹಾಗೆಯೇ ಸರ್ವೋಚ್ಚ ನ್ಯಾಯಾಲಯವು ಉಮಾದೇವಿ ಹಾಗೂ ಇತರರ ಪ್ರಕರಣದಲ್ಲಿ ದಿನಾಂಕ 10-04-2006ರಂದು ನೀಡಿರುವ ತೀರ್ಪಿನಲ್ಲಿ ಪ್ರಚುರಪಡಿಸಿರುವ ಕಾನೂನಿನನ್ವಯ ಗುತ್ತಿಗೆ/ಹೊರಗುತ್ತಿಗೆ/ತಾತ್ಕಾಲಿಕ ಸಿಬ್ಬಂದಿಗಳ ಸೇವಾ ಸಕ್ರಮಾತಿಗಾಗಲಿ ಅಥವಾ ನೇರನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗಲೀ ಅವಕಾಶವಿರುವುದಿಲ್ಲ. ಆದ್ದರಿಂದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಪೂರ್ವಾನುಮೋದನೆ ಇಲ್ಲದೇ ನಿಯಮಬಾಹಿರವಾಗಿ ಮಂಜೂರಾದ ಹುದ್ದೆಗಳಿಗೂ ಮೀರಿ ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಂಡ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ವಿಶ್ವವಿದ್ಯಾಲಯಗಳ ಸಿಬ್ಬಂದಿಗಳ ಸಂಖ್ಯೆಯನ್ನು ತರ್ಕಬದ್ಧಗೊಳಿಸಲು (Rationalize) ಕ್ರಮವಹಿಸಬೇಕು ಎಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದಾರೆ.
ಈ ವಿಚಾರವಾಗಿ ಪುನರಾವರ್ತಿತ ಸುತ್ತೋಲೆಗಳನ್ನು ಹೊರಡಿಸಲು ಅವಕಾಶ ನೀಡದಂತೆ ಮೇಲ್ಕಂಡ ಸೂಚನೆಗಳನ್ನು ಅನುಸರಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಸೂಚನೆಗಳ ಉಲ್ಲಂಘನೆ/ಲೋಪಗಳಿಗೆ ಹಾಗೂ ಅದರ ಪರಿಣಾಮಗಳಿಗೆ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿ/ನೌಕರರನ್ನು ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Key words: Discharge – service staff – Universities- Government