ಬೆಂಗಳೂರು: ಮೇ-12:ಮೀಸಲು ಬಡ್ತಿ ಗೊಂದಲಕ್ಕೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ತೆರೆ ಎಳೆದಿದೆ. ಈ ನಡುವೆ ರಾಜ್ಯದ ಆಡಳಿತ ಯಂತ್ರದಲ್ಲಿ ತೀರ್ಪಿನ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳು ಬಂದಿವೆ.
ಒಂದೆಡೆ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಸರ್ಕಾರಿ ನೌಕರರು ಈ ತೀರ್ಪಿನ ದೂರಗಾಮಿ ಪರಿಣಾಮ ಅವಲೋಕಿಸಿ ಆತಂಕ ಹೊರಹಾಕಿದ್ದಾರೆ. ಜತೆಗೆ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ನಮ್ಮ ನೆರವಿಗೆ ಬರಬೇಕು, ಸೂಕ್ತ ಕಾನೂನು ರೂಪಿಸಬೇಕೆಂಬ ವಾದ ಮುಂದಿಟ್ಟಿದ್ದಾರೆ.
ಮೀಸಲು ಬಡ್ತಿಗೆ ವಿರೋಧವಿಲ್ಲ, ಆದರೆ ಮೀಸಲು ಬಡ್ತಿ ಮಿತಿಮೀರಿದರೆ ಸಾಮಾನ್ಯ ವರ್ಗದವರು ಭವಿಷ್ಯದಲ್ಲಿ ಬಡ್ತಿ ಪಡೆಯುವುದೇ ಅಸಾಧ್ಯ. ಹೀಗಾಗಿ ರಾಜ್ಯ ಸರ್ಕಾರ ಗಂಭೀರತೆ ಪರಿಗಣಿಸಬೇಕೆಂಬ ಕೂಗು ಕೇಳಿಬಂದಿದೆ. ಎಲ್ಲ ವೃಂದಗಳಲ್ಲಿ ಶೇ.18 ಮಿತಿಯಲ್ಲಿ ಮೀಸಲು ಬಡ್ತಿ ನೀಡಲಿ, ಉಳಿದ ಶೇ.82ಅನ್ನು ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದವರಿಗೆ ಉಳಿಸುವಂಥ ಕಾನೂನನ್ನು ತರುವ ಅಗತ್ಯವಿದೆ. ಇಲ್ಲವಾದರೆ ನ್ಯಾಯಾಲಯದಲ್ಲಿ ಕಾಯಂ ಪ್ರಕರಣ ಒಂದಲ್ಲ ಒಂದು ರೀತಿ ಮುಂದುವರಿಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.
ಬಡ್ತಿ ಮೀಸಲಾತಿ ಕಾನೂನು ಜಾರಿಯಿಂದ ಸಾಮಾನ್ಯ ವರ್ಗದವರ ಜೇಷ್ಠತೆಗೆ ಅಡ್ಡಿ ಆಗುತ್ತದೆ. ಸಾಮಾನ್ಯ ವರ್ಗದವರು 56ನೇ ವಯಸ್ಸಿಗೆ 2 ಅಥವಾ 3ನೇ ಹಂತದ ಜೇಷ್ಠತೆ ಪಡೆದರೆ, ಬಡ್ತಿ ಮೀಸಲಾತಿ ಹೊಂದಿದವರು (ಎಸ್ಸಿ, ಎಸ್ಟಿ) 45ನೇ ವಯಸ್ಸಿಗೇ 3 ಅಥವಾ 4ನೇ ಹಂತದ ಪದೋನ್ನತಿ ಪಡೆಯುತ್ತಾರೆ. ಅಂದರೆ ಮೀಸಲು ಬಡ್ತಿ ಪಡೆದವರು 15-20 ವರ್ಷ ಉನ್ನತ ಹುದ್ದೆಯಲ್ಲೇ ಮುಂದುವರಿಯುತ್ತಾರೆ. ಹೀಗಾಗಿ ಜನರಲ್ ಕೆಟಗರಿಯವರಿಗೆ ಬಡ್ತಿಯೇ ಸಿಗುವುದಿಲ್ಲ. ಇದರಿಂದ ತಾರತಮ್ಯ ಉಂಟಾಗಿ ಸರ್ಕಾರಿ ಕಚೇರಿ ವಾತಾವರಣ ಕೆಡುತ್ತದೆ ಎಂದು ವಿವರಿಸಿದರು. ನ್ಯಾಯಾಲಯದ ತೀರ್ಪು ಆಶ್ಚರ್ಯ-ಆಘಾತ ತಂದಿದೆ. ನಮ್ಮ ಕಾನೂನು ಸಲಹೆಗಾರರು ಮೂರು ದಿನ ಕಾಲಾವಕಾಶ ಕೋರಿದ್ದು, ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಅಹಿಂಸಾ ಸಂಘಟನೆ ಪ್ರಮುಖರಾದ ಎಂ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲೇ ತಪ್ಪುಗಳಿವೆ. ದೋಷಪೂರಿತ ವರದಿ ಮೇಲೆ ತೀರ್ಪು ಬಂದಿದೆ. ಈ ಹೊಣೆಯನ್ನು ಸರ್ಕಾರವೇ ಹೊರಬೇಕೆಂದು ಅಧಿಕಾರಿಯೊಬ್ಬರು ಅಭಿಪ್ರಾಯ
ಪಟ್ಟಿದ್ದಾರೆ. ಒಟ್ಟು ಮಂಜೂರಾದ ಹುದ್ದೆಗಳ ಲೆಕ್ಕದಲ್ಲಿ ಹಾಲಿ ಎಸ್ಸಿ-ಎಸ್ಟಿ ನೌಕರರ ಸಂಖ್ಯೆ ಪರಿಗಣಿಸಿದೆ. ಆದರೆ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಒಟ್ಟು ಲೆಕ್ಕದಲ್ಲಿ ಹಾಲಿ ಎಸ್ಸಿ-ಎಸ್ಟಿ ನೌಕರರ ಸಂಖ್ಯೆ ಪರಿಗಣಿಸಬೇಕಿತ್ತು ಎಂದು ವಿವರಿಸಿದ್ದಾರೆ.
ಶೀಘ್ರವೇ ಹೊಸ ಜ್ಯೇಷ್ಠತಾ ಪಟ್ಟಿ
ಮೀಸಲು ಬಡ್ತಿ ಸಂರಕ್ಷಣೆಗಾಗಿ ಹೊಸ ಕಾನೂನು ಜಾರಿ ಅನುಷ್ಠಾನ ಮಾಡುವ ಮೊದಲು ಸರ್ಕಾರ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಬೇಕಾಗಿದ್ದು, ಶೀಘ್ರ ಆದೇಶ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ