ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ದೇಶದ ಮೊದಲನೇ ಪ್ರಜೆಯ ವೇತನ, ಭತ್ಯೆಗಳು, ನಿವೃತ್ತಿ ಲಾಭಗಳು ಇತ್ಯಾದಿಗಳನ್ನು ತಿಳಿಯಿರಿ.

ನವದೆಹಲಿ, ಜುಲೈ 23, 2022(www.justkannada.in): ದ್ರೌಪದಿ ಮುರ್ಮು ಅವರು ತನ್ನ ಎದುರಾಳಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಅತಿ ಹೆಚ್ಚಿನ ಮತಗಳಿಂದ ಸೋಲಿಸುವ ಮೂಲಕ ಗುರುವಾದಂದು ಭಾರತದ 15ನೇ ರಾಷ್ಟ್ರಪತಿಯಾಗಿ ಚುನಾಯಿತರಾದರು.

ಇವರು ದೇಶದ ಮೊಟ್ಟ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಿರುವ ಜೊತೆಗೆ, ದೇಶದ ಚರಿತ್ರೆಯಲ್ಲೇ ಅತಿ ಕಿರಿಯ ವಯಸ್ಸಿನ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದ್ರೌಪದಿ ಮುರ್ಮು ಅವರು ಜುಲೈ 25ರಂದು ಪ್ರತಿಜ್ಞೆಯನ್ನು ಸ್ವೀಕರಿಸಿ ರಾಷ್ಟ್ರಪತಿ ಭವನದ ಹೊಸ ನಿವಾಸಿಯಾಗಲಿದ್ದಾರೆ. ನಿರ್ಗಮಿಸುತ್ತಿರುವ ರಾಷ್ಟ್ರಪತಿ ರಮನಾಥ್ ಕೋವಿಂದ ಅವರ ಅಧಿಕಾರಾವಧಿ ಜುಲೈ 24ಕ್ಕೆ ಅಂತ್ಯವಾಗಲಿದೆ. ವರದಿಗಳ ಪ್ರಕಾರ ಇವರು ನಿವೃತ್ತಿಯ ನಂತರ 12 ಜನಪತ್‌ ನಲ್ಲಿರುವ ನಿವೃತ್ತಿ ಬಂಗಲೆಗೆ ಸ್ಥಳಾಂತರಗೊಳ್ಳಲಿದ್ದಾರೆ.

ಭಾರತದ ರಾಷ್ಟ್ರಪತಿಗಳಿಗೆ ದೊರೆಯುವ ವೇತನ, ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಭತ್ಯೆಗಳು ಸೇರಿದಂತೆ ೧೦ ಮುಖ್ಯ ಅಂಶಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ

೧. ಭಾರತದ ರಾಷ್ಟ್ರಪತಿಗಳ ಮಾಸಿಕ ವೇತನ ರೂ.೫ ಲಕ್ಷ. 2016ರಲ್ಲಿ ರೂ.೧.೫ ಲಕ್ಷದಿಂದ ಶೇ.೨೦೦ ಪಟ್ಟು ಹೆಚ್ಚಿಸಲಾಯಿತು.

೨. ರಾಷ್ಟ್ರಪತಿಗಳು ನಿವೃತ್ತರಾದ ನಂತರ ಅವರಿಗೆ ಮಾಸಿಕ ರೂ.೧.೫ ಲಕ್ಷ ಪಿಂಚಣಿ ದೊರೆಯುತ್ತದೆ. ರಾಷ್ಟ್ರಪತಿಯ ಗಂಡ/ಹೆಂಡತಿಗೆ ಮಾಸಿಕ ರೂ.೩೦,೦೦೦ ಸಚಿವಾಲಯದ ನೆರವು ಲಭಿಸುತ್ತದೆ.

೩. ರಾಷ್ಟ್ರಪತಿಗೆ ಉಚಿತ ವಸತಿ ಹಾಗೂ ವೈದ್ಯಕೀಯ ಚಿಕಿತ್ಸೆ ಹಾಗೂ ಕಚೇರಿ ವೆಚ್ಚಗಳಿಗಾಗಿ ವಾರ್ಷಿಕ ರೂ.೧ ಲಕ್ಷ ನೀಡಲಾಗುತ್ತದೆ.

೪. ರಾಷ್ಟ್ರಪತಿ ಭವನ ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದೆ. ಒಟ್ಟು ೨ ಲಕ್ಷ ಚದರಡಿ ಕಟ್ಟಡ ನಿರ್ಮಾಣ ಪ್ರದೇಶವನ್ನು ಹೊಂದಿರುವ ಈ ಕಟ್ಟಡದಲ್ಲಿ ೩೪೦ ಕೊಠಡಿಗಳಿವೆ.

೫. ರಾಷ್ಟ್ರಪತಿಗಳಿಗೆ ಎರಡು ಅಧಿಕೃತ ರೀಟ್ರೀಟ್‌ ಗಳಿದ್ದು, ಅವರು ರಜೆ ಮೇಲೆ ತೆರಳಬಹುದು. ಒಂದು ಶಿಮ್ಲಾದ ಮಶೋಬ್ರ ಮತ್ತೊಂದು ಹೈದ್ರಾಬಾದ್‌ ನ ಬೋಲರಂ.

೬. ರಾಷ್ಟ್ರಪತಿಗೆ ವಿಶ್ವದಾದ್ಯಂತ ಯಾವುದೇ ಸ್ಥಳದಲ್ಲಾದರೂ ಉಚಿತ ರೈಲು ಹಾಗೂ ವಿಮಾನ ಪ್ರಯಾಣದ ಅವಕಾಶವಿರುತ್ತದೆ.

೭. ರಾಷ್ಟ್ರಪತಿಗಳಿಗಾಗಿ ವಿಶೇಷವಾಗಿ ನಿರ್ಮಿಸಿರುವ ಕಪ್ಪು ವರ್ಣದ ಮರ್ಸಿಡಿಸ್ ಬೆನ್ಝ್  ಎಸ್೬೦೦ (ಡಬ್ಲ್ಯು೨೨) ಪುಲ್‌ ಮ್ಯಾನ್ ಗಾರ್ಡ್ ವಾಹನ ಒದಗಿಸಲಾಗಿದೆ. ಸಂಪೂರ್ಣ ಶಸ್ತ್ರಸಜ್ಜಿತವಾಗಿರುವ ಒಂದು ಲಿಮೊಸಿನ್ ಅನ್ನು ಸಹ ರಾಷ್ಟ್ರಪತಿಗಳ ಅಧಿಕೃತ ಭೇಟಿಗಳ ಸಂದರ್ಭಗಳಿಗಾಗಿ ಮೀಸಲಿರಸಲಾಗಿರುತ್ತದೆ.

೮. ಭದ್ರತಾ ಕಾರಣಗಳಿಂದಾಗಿ ಭಾರತದ ರಾಷ್ಟ್ರಪತಿಗಳು ಬಳಸುವ ಕಾರುಗಳ ವಿವರಗಳನ್ನು ಎಲ್ಲಿಯೂ, ಎಂದಿಗೂ ಬಹಿರಂಗಗೊಳಿಸುವುದಿಲ್ಲ. ಮೇಲಾಗಿ, ಈ ಕಾರುಗಳಿಗೆ ಪರವಾನಗಿ ಫಲಕವಿರುವುದಿಲ್ಲ. ಬದಲಿಗೆ ರಾಷ್ಟ್ರದ ಚಿಹ್ನೆಯನ್ನು ಪ್ರದರ್ಶಿಸಲಾಗಿರುತ್ತದೆ.

೯. ರಾಷ್ಟ್ರಪತಿಯ ಅಂಗರಕ್ಷಕ ಭಾರತದ ರಾಷ್ಟ್ರಪತಿಗಳ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿರುತ್ತಾರೆ.

೧೦. ಪಿಂಚಣಿಯ ಹೊರತಾಗಿ, ಭಾರತದ ರಾಷ್ಟ್ರಪತಿಗಳಿಗೆ ಲಭ್ಯವಾಗುವ ಇತರೆ ನಿವೃತ್ತಿ ನಂತರದ ಲಾಭಗಳಲ್ಲಿ, ಸುಸಜ್ಜಿತ ಬಾಡಿಗೆ-ಮುಕ್ತ ಬಂಗಲೆ, ಎರಡು ಉಚಿತ ಲ್ಯಾಂಡ್‌ ಲೈನ್ ದೂರವಾಣಿ ಸಂಪರ್ಕಗಳು, ಹಾಗೂ ಒಂದು ಮೊಬೈಲ್ ಫೋನ್, ಐವರು ವೈಯಕ್ತಿಕ ಸಿಬ್ಬಂದಿಗಳು, ಸಿಬ್ಬಂದಿಗಳ ವೆಚ್ಚ ಭರಿಸಲು ವಾರ್ಷಿಕ ರೂ.೬೦,೦೦೦, ಹಾಗೂ ರೈಲು ಅಥವಾ ವಿಮಾನದಲ್ಲಿ ಓರ್ವ ಸಂಗಾತಿಯೊಂದಿಗೆ ಉಚಿತ ಪ್ರಯಾಣ ಒದಗಿಸಲಾಗುತ್ತದೆ.

ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

Key words: Draupadi Murmu – elected – 15th President-India-Salary- Allowances