ಬೆಂಗಳೂರು, ನ.28, 2019 : (www.justkannada.in news ): ಸರಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ತರಲು ಆರಂಭಿಸಿರುವ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕಾಣಿಸಿಕೊಂಡಿರುವ `ತಾಂತ್ರಿಕ ಸಮಸ್ಯೆ’ ( deny of service- DOS ) ಬಗೆಹರಿಯದ ಕಾರಣ ಟೆಂಡರ್ಗಳು ನಿಗದಿತ ಅವಯಲ್ಲಿ ಅಂತಿಮಗೊಳ್ಳುತ್ತಿಲ್ಲ,ಕಾಮಗಾರಿಗಳೂ ಸಹ ಆರಂಭವಾಗುತ್ತಿಲ್ಲ.
ಇದರಿಂದಾಗಿ ಇಎಂಡಿ ಮೊತ್ತವೂ ಸಹ ವಾಪಸ್ ಆಗದೇ ಗುತ್ತಿಗೆದಾರರೂ ಕಂಗಾಲಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ಗಳು ಸಕಾಲದಲ್ಲಿ ಆಖೈರುಗೊಳ್ಳುತ್ತಿಲ್ಲ. ರಾಜ್ಯ ಸರಕಾರವೂ ಸಹ ಉಪಚುನಾವಣೆಯಲ್ಲಿ ಮುಳುಗಿರುವುದರಿಂದ ಅತ್ತ ತಲೆಕೆಡೆಸಿಕೊಳ್ಳುತ್ತಿಲ್ಲ.
ದಿನವೂ ಸಂಗ್ರಹಣಾ ವೇದಿಕೆಯ ಪೋರ್ಟಲ್ ನಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆದಾರರು ಹೇಳುವಂತೆ ನಾಲ್ಕು ತಿಂಗಳಿಂದ ಪೋರ್ಟಲ್ ನಲ್ಲಿ ಟೆಕ್ನಿಕಲ್ ಸಮಸ್ಯೆ ಇದ್ದರೂ ಸಹ ಸರಕಾರ ಅದನ್ನು ಸರಿಪಡಿಸಲು ಏನೂ ಕ್ರಮ ಕೈಗೊಂಡಿಲ್ಲ. ಪೋರ್ಟಲ್ ಹ್ಯಾಕ್ ಆದಾಗ ಮಾತ್ರ, ಒಂದು ಸಾರ್ವಜನಿಕ ಪ್ರಕಟಣೆ ಕೊಟ್ಟು ಸದ್ಯಕ್ಕೆ ಇ-ಪೋರ್ಟಲ್ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿ ಸುಮ್ಮನಾಗಿದೆಯೇ ಹೊರತು, ಆನಂತರ ಆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.
ಪೋರ್ಟಲ್ ಕಣ್ಣಾಮುಚ್ಚಾಲೆ:
ಆಗಸ್ಟ್ ತಿಂಗಳವರೆಗೆ ಪೋರ್ಟಲ್ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಆದರೆ ಹ್ಯಾಕ್ ಆದ ನಂತರ ಅದೇನಾಯಿತೋ ಏನೂ ಇಲ್ಲಿಯವರೆಗೆ ಪೋರ್ಟಲ್ ನಿಜಕ್ಕೂ ದಿನವೂ ಕಣ್ಣಾಮುಚ್ಚಾಲೆ ಆಡುತ್ತಿದೆ.ಇದ್ದಕ್ಕಿದ್ದಂತೆ ಸರ್ವರ್ ಡೌನ್ ಆಗುತ್ತಿದೆ, ಆನಂತರ ಎಷ್ಟು ಪ್ರಯತ್ನಿಸಿದರೂ ಸರಿ ಹೋಗುವುದಿಲ್ಲ ,ಸಂಪರ್ಕವೇ ಸಿಗುವುದಿಲ್ಲ.
ಅಲ್ಲದೆ, ಇ-ಟಂಡರ್ಗಳ ಕೊನೆಯ ದಿನಾಂಕ ಇದ್ದಕ್ಕಿದ್ದಂತೆ ಮುಂದೆ ಹೋಗುತ್ತದೆ. ಉದಾಹರಣೆಗೆ ನ.23 ಟೆಂಡರ್ಗೆ ಕೊನೆಯ ದಿನವಾದರೆ, ಇದಕ್ಕಿದ್ದಂತೆ ಆ ದಿನ ಸಂಜೆಯ ವೇಳೆಗೆ ಟೆಂಡರ್ ದಿನಕ್ಕೆ ಒಂದು ವಾರ-ಹತ್ತು ದಿನ ಮುಂದಕ್ಕೆ ಹೋಗುತ್ತದೆ ಎನ್ನುತ್ತಾರೆ ಇ-ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಸಹಕರಿಸುವ ತುಮಕೂರಿನ ಬ್ರೈಟ್ ಪ್ಯೂಚರ್ಸ್ನ ನಿಶಾಂತ್
ಅಷ್ಟೇ ಅಲ್ಲದೆ, ಸಾಮಾನ್ಯವಾಗಿ ಮೊದಲೆಲ್ಲಾ ಸರಕಾರಿ ರಜಾದಿನಗಳಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕ ನೀಡುತ್ತಿರಲಿಲ್ಲ. ಆದರೆ ಇದೀಗ ಸರಕಾರಿ ರಜಾ ದಿನಗಳಿದ್ದರೂ ಸಹ ಟೆಂಡರ್ಗೆ ಕೊನೆಯ ದಿನಾಂಕ ನೀಡಲಾಗುತ್ತಿದೆ ಮತ್ತು ಅಂದೂ ಸಹ ಪೋರ್ಟಲ್ ಕಾರ್ಯನಿರ್ವಹಿಸುತ್ತದೆ. ಜತೆಗೆ ಪೋರ್ಟಲ್ ನಲ್ಲಿ ಇದ್ದಕ್ಕಿದ್ದಂತೆ ಟೆಂಡರ್ ಮುಂದೂಡಿಕೆಯ ಪ್ರಕಟಣೆಗಳು ಬರುತ್ತವೆ ಎನ್ನುತ್ತಾರೆ ಅವರು.
ಸೈಬರ್ ಕ್ರಿಮಿನಲ್ಗಳು ಕಳೆದ ಆಗಸ್ಟ್ನಲ್ಲಿ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದರಿಂದ ಆರು ದಿನ ಪೋರ್ಟಲ್ ಕಾರ್ಯನಿರ್ವಹಿಸಿರಲಿಲ್ಲ. ಆನಂತರ ತಾಂತ್ರಿಕ ಸಮಸ್ಯೆ ಮಾಮೂಲಿಯಾಗಿದೆ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.
ಈ ಬಗ್ಗೆ ಇ-ಆಡಳಿತ ಇಲಾಖೆಯ ಅಕಾರಿಗಳನ್ನು ಪ್ರಶ್ನಿಸಿದಾಗ ತಾಂತ್ರಿಕ ಸಮಸ್ಯೆ ಎಂದೇಳಿ ಸುಮ್ಮನಾಗುತ್ತಾರೆಯೇ ಹೊರತು ನಿಜವಾಗಿಯೂ ಏನು ಸಮಸ್ಯೆ ಎಂದು ವಿವರ ನೀಡುವುದಿಲ್ಲ.
ಸಮಸ್ಯೆ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಾಸ್ಕರ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಸಹ ಅವರು ಕರೆ ಸ್ವೀಕರಿಸಲಿಲ್ಲ.
ಇಎಂಡಿ ಮೊತ್ತವೂ ವಾಪಸ್ ಇಲ್ಲ :
ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ಇಎಂಡಿ ಮೊತ್ತವೂ ಸಕಾಲದಲ್ಲಿ ಮರುಪಾವತಿ ಆಗುತ್ತಿರಲಿಲ್ಲ. ಮುಂಚೆ ಟೆಂಡರ್ನಲ್ಲಿ ವಿಫಲವಾದರೆ ಒಂದು ವಾರ ಅಥವಾ ಹದಿನೈದು ದಿನಗಳಲ್ಲಿ ಇಎಂಡಿ ಮೊತ್ತ ವಾಪಸ್ ಆಗುತ್ತಿತ್ತು. ಆದರೆ ಇದೀಗ ಇಎಂಡಿ ಮೊತ್ತ ವಾಪಸ್ ಬರುತ್ತಿಲ್ಲ.ಹಾಗಾಗಿ ಸಾವಿರಾರು ಗುತ್ತಿಗೆದಾರರ ಕೋಟ್ಯಂತರ ರೂ. ಹಣ ಇ-ಪ್ರಕ್ಯೂರ್ಮಂಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕಾರಣ ಏನೆಂದು ಗೊತ್ತಿಲ್ಲ. ಇ-ಆಡಳಿತ ಇಲಾಖೆ ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದೆ. ಆದರೆ ಸರಕಾರದ ಬಳಿ ಹಣ ಇಲ್ಲ, ಅದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಾಗುತ್ತಿದೆ.
ತನಿಖೆ ಏನಾಗಿದೆಯೋ ತಿಳಿದಿಲ್ಲ
ಕಳೆದ ಜುಲೈ ಅಂತ್ಯದಲ್ಲಿ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಅನ್ನು ಸೈಬರ್ ಕ್ರಿಮಿನಲ್ಗಳು ಹ್ಯಾಕ್ ಮಾಡಿ, 1 ಕೋಟಿಗೂ ಅಕ ಹಣವನ್ನು ಲಪಾಟಿಯಿಸಿ ವಂಚನೆ ಎಸಗಿದ್ದರು. ಆ ಬಗ್ಗೆ ಇ-ಆಡಳಿತ ಇಲಾಖೆ ಸಿಐಡಿಯ ಸೈಬರ್ ವಿಭಾಗದ ಪೊಲೀಸರಲ್ಲಿ ದೂರು ನೀಡಿದ್ದರು. ಆ ಬಗ್ಗೆ ಸೈಬರ್ ಅಪರಾಧ ಪೊಲೀಸರು ತನಿಖೆ ನಡೆಸಿದ್ದಾರೆ, ಆದರೆ ಆನಂತರ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ ಎನ್ನುತ್ತಾರೆ ಇ-ಟೆಂಡರಿಂಗ್ ಪ್ರಕ್ರಿಯೆಯಲ್ಲಿ ನಿತ್ಯವೂ ಭಾಗಿಯಾಗುವ ಗುತ್ತಿಗೆದಾರರೊಬ್ಬರು.
ಕೃಪೆ : ವಿಜಯಕರ್ನಾಟಕ
key words : e procurement karnataka-webportal-hack-not-working-deny-of-service