ಔಷಧ ದುರುಪಯೋಗ ಆರೋಪ: ಡಾ.ಕುಮಾರಸ್ವಾಮಿ, ಡಾ.ಸಿ.ಎನ್‌ ಮಂಜುನಾಥ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು, ಫೆಬ್ರವರಿ .18, 2020 (www.justkannada.in): ಔಷಧ ದುರುಪಯೋಗ ಆರೋಪದ ಮೇಲೆ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯ ಡಾ.ಕುಮಾರಸ್ವಾಮಿ ಜಿ.ಕಲ್ಲೂರ ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಮೂಲದ ಸಾಮಾಜಿಕ ಹೋರಾಟಗಾರ ಸ್ನೇಹಮಣಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ, ಇಬ್ಬರ ವಿರುದ್ಧ ತನಿಖೆ ನಡೆಸಿ 2020ರ ಮೇ 21ರ ಒಳಗೆ ವರದಿ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲ ಇದೀಗ ತಿಲಕ್ ನಗರ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಜಯದೇವ ಆಸ್ಪತ್ರೆಗೆ ಬರುವ ಕೆಲವು ರೋಗಿಗಳ ಪರೀಕ್ಷೆಗೆ ಉಪಯೋಗಿಸುವ ನ್ಯೂಕ್ಲಿಯರ್‌ ಕಾಂಪೋನೆಂಟ್‌ (ಐಸೋಟಾಪ್‌) ಎಂಬ ಔಷಧಗಳು ವಿದೇಶದಿಂದ ವಿಮಾನದಲ್ಲಿ ಪ್ರತಿ ಸೋಮವಾರ ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತವೆ.

ಈ ಔಷಧಗಳನ್ನು ನಿಲ್ದಾಣದಿಂದ ಜಯದೇವ ಆಸ್ಪತ್ರೆಯವರು ಪಡೆದುಕೊಳ್ಳುವ ಬದಲು ಸಂಸ್ಥೆಯ ನ್ಯೂಕ್ಲಿಯರ್‌ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್‌ ಆಗಿ ಕೆಲಸ ನಿರ್ವಹಿಸುತ್ತಾರೆನ್ನಲಾದ ಡಾ.ಕುಮಾರಸ್ವಾಮಿ ಗಂಗಾಧರಯ್ಯ ಕಲ್ಲೂರ ಎಂಬುವರ ಖಾಸಗಿ ಕಾರಿನ ಚಾಲಕ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರುದಾರ ಸ್ನೇಹಮಣಿ ಕೃಷ್ಣ ಆರೋಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ನ್ಯಾಯಾಲಯ ಮೆಟ್ಟಲೇರಿದ್ದರು.