ಬೆಂಗಳೂರು,ಸೆಪ್ಟಂಬರ್,16,2021(www.justkannada.in): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿ ರಾಜ್ಯದಲ್ಲಿರುವ 55 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿಸಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಯಡಿಯೂರಪ್ಪ ಅವರೊಂದಿಗೆ ನಾನು 20 ತಿಂಗಳ ಕಾಲ ಸರ್ಕಾರ ನಡೆಸಿದ್ದೇನೆ. ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನೂ ಗಮನಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿ, ಬಡವರಿಗೆ ಪ್ಯಾಕೇಜ್ ಕೊಡಿಸಿ. ಅಧಿವೇಶದಲ್ಲಿಯೇ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ನಿರ್ಧಾರಮಾಡಿ ಎಂದು ಹೆಚ್.ಡಿಕೆ ಒತ್ತಾಯಿಸಿದರು.
ಸರ್ಕಾರಿ ಅಧಿಕಾರಿಗಳು ಶಾಸಕರ ವಿರುದ್ಧವಾಗಿ ಹೋಗುತ್ತಾರೆ. ಇವರಿಗೆ ಇಂಥ ಅಧಿಕಾರ ಕೊಟ್ಟವರು ಯಾರು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಹೆಸರು ಹೇಳದೆ ಪರೋಕ್ಷವಾಗಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರಿ ಅಧಿಕಾರಿಗಳು ಶಾಸಕರ ವಿರುದ್ಧವಾಗಿ ಹೋಗುತ್ತಾರೆ. ಇವರಿಗೆ ಇಂಥ ಅಧಿಕಾರ ಕೊಟ್ಟವರು ಯಾರು. ಅವರು ಐಎಎಸ್ ಇರಲಿ ಅಥವಾ ಬೇರೆ ಯಾರಾದರೂ ಇರಲಿ ಇಂಥ ನಡವಳಿಕೆಗಳಿಗೆ ಅವಕಾಶ ಕೊಡುವುದು ಏಕೆ? ವಿವಾದಿತ ಅಧಿಕಾರಿಗಳ ಭೇಟಿಗಾಗಿ ಮುಖ್ಯಕಾರ್ಯದರ್ಶಿ ಮೈಸೂರಿಗೆ ಹೋಗಿದ್ದು ಏಕೆ? ಅಧೀನ ಅಧಿಕಾರಿಯನ್ನು ತಮ್ಮಲ್ಲಿಗೆ ಕರೆಸಿಕೊಳ್ಳಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು…
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಆಗುತ್ತಿದೆ ಎಂದು ಜಿಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
ಅಲ್ಲದೆ; ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇಂಧನ ಬೆಲೆ ಏರಿಕೆ ಹಾಗೂ ಕೋವಿಡ್ನಿಂದ ತತ್ತರಿಸಿರುವ ಜನರ ಬದುಕು ಕಟ್ಟಲು ಒಂದು ಬಾರಿಗೆ ಅನ್ವಯವಾಗುವಂತೆ 55 ಲಕ್ಷ ಕುಟುಂಬಗಳಿಗೆ ತಲಾ 25,000 ರೂ. ಪರಿಹಾರ ನೀಡುವಂತೆ ಅವರು ಆಗ್ರಹಪಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ನಿಯಮ-69ರ ಅಡಿಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು; ನೆರೆ, ಕೋವಿಡ್ʼನಿಂದ ಸಾಮಾನ್ಯ ಜನ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರಂತರ ಬೆಲೆ ಏರಿಕೆಯಿಂದ ರೈತರು, ಬಡವರು ಮತ್ತು ಶ್ರಮಿಕರ ಮನೆಗಳಲ್ಲಿ ಬೆಂಕಿ ಬಿದ್ದಿದೆ. ಆ ಬೆಂಕಿ ಬಿದ್ದಿರುವ ಮನೆಗಳಲ್ಲಿ ಎಷ್ಟು ಗಳ ಹಿರಿಯಬಹುದು ಎಂಬ ಉದ್ದೇಶದಿಂದ ಇಷ್ಟು ತೆರಿಗೆ ಹಾಕಿದಂತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸವಿವರವಾಗಿ ಹೇಳಿದ್ದಿಷ್ಟು;
ಈ ಬಿಕ್ಕಟ್ಟನ್ನು ಸರಕಾರ ಉಪೇಕ್ಷೆ ಮಾಡಬಾರದು. ಈ ವರ್ಷವನ್ನು ʼಕೋವಿಡ್ ವರ್ಷʼ ಎಂದು ಘೋಷಣೆ ಮಾಡಿ. ಕಷ್ಟದಲ್ಲಿರುವ 55 ಲಕ್ಷ ಬಡ ಕುಟುಂಬಗಳಿಗೆ ನೆರವಾಗಿ. ಕೊನೆಯ ಪಕ್ಷ ಪ್ರತಿ ಕುಟುಂಬಕ್ಕೆ 25,000 ರೂ. ಧನ ಸಹಾಯ ಮಾಡಿ. ಅಗತ್ಯಬಿದ್ದರೆ ಈ ವರ್ಷ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ.
ಈ ಬೆಲೆ ಏರಿಕೆಯನ್ನೂ ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಇದು ಅತ್ಯಂತ ನಿರ್ದಯವಾದ ಕೆಲಸ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವುದು ಸರಕಾರದ ಕೆಲಸ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕು.
ಸರಕಾರಕ್ಕೆ ಆದಾಯವೂ ಮುಖ್ಯ, ನಿಜ. ಅದೇ ರೀತಿ ಜನರ ಕಲ್ಯಾಣವೂ ಮುಖ್ಯ. ಹಾಗಂತ ಮನಸೋ ಇಚ್ಛೆ ತೆರಿಗೆ ಹಾಕುವುದಲ್ಲ. ಜನರಿಗೆ ಬದುಕೇ ದುಸ್ಥರವಾಗಿದೆ. ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ. ಇಂಥ ತೀವ್ರ ಸಂಕಷ್ಟದ ಸಮಯದಲ್ಲಿ ಜನರ ಮೇಲೆ ಬೆಲೆ ಏರಿಕೆ ಪ್ರಹಾರ ಮತ್ತು ತರಿಗೆ ಪ್ರಹಾರ ನಡೆಸುವುದು ಎಷ್ಟು ಸರಿ?
ಅತಿಯಾದ ಭಾರವನ್ನು ಹೊರಲಾಗದ ಎತ್ತಿನ ಗಾಡಿಯ ಅಸಹಾಯಕ ಎತ್ತಿನಂತಿದೆ ಜನ ಸಾಮಾನ್ಯನ ಬದುಕು. ಭಾರದ ಹೊರಲಾಗದಿದ್ದರೆ ಎತ್ತಿಗೆ ಛಡಿಯೇಟು ತಪ್ಪಿಲ್ಲ. ಹಾಗೆಯೇ, ಭಾರದಿಂದ ಗಾಡಿ ಚಕ್ರ ನೆಲದಲ್ಲಿ ಹೂತರೆ ಅದನ್ನು ಎಳೆಯಲಗದಿದ್ದರೆ ಪುನಾ ಆ ಎತ್ತಿಗೇ ಛಡಿಯೇಟು. ಜನ ಸಾಮಾನ್ಯನ ಪರಿಸ್ಥಿತಿಯೂ ಇದೇ ಆಗಿದೆ. ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾನೆ ಅವನು. ಇಂಥ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ರಾಜಕೀಯ ಮಾಡುವ ಬದಲು ಎಲ್ಲರೂ ಪಕ್ಷಾತೀತವಾಗಿ ವರ್ತಿಸಬೇಕು. ಸರಕಾರ ಕೂಡ ಅತ್ಯಂತ ಮಾನವೀಯತೆಯಿಂದ ಜನರ ನೆರವಿಗೆ ಧಾವಿಸಬೇಕಿದೆ.
ಬೆಲೆ ಏರಿಕೆ ಮಾಡುವುದು ಎಂದರೆ ನಿರಂತರವಾಗಿ ಹತೋಟಿ ಇಲ್ಲದೆ ಮಾಡುವುದಲ್ಲ. ಅದಕ್ಕೆ ಒಂದು ವೈಜ್ಞಾನಿಕ ಮಾನದಂಡದ ಜತೆಗೆ ಜನರ ಪರಿಸ್ಥಿತಿಯನ್ನೂ ನೋಡಿ ನಿರ್ಧಾರ ಕೈಗೊಳ್ಳುವ ವಿವೇಚನೆ ಇರಬೇಕು. ಅದು ಬಿಟ್ಟು ಇಷ್ಟಬಂದ ಹಾಗೆ ಬೆಲೆ ಏರಿಕೆ ಮಾಡುತ್ತಾ ಹೋದರೆ ಸಾಮಾನ್ಯ ಜನರ ಪಾಡೇನು?
ಪತ್ರಿಕೆಯೊಂದು ಸಮೀಕ್ಷೆ ನಡೆಸಿರುವ ಪ್ರಕಾರ ಒಬ್ಬ ಸಾಮಾನ್ಯ ವ್ಯಕ್ತಿ ವರ್ಷಕ್ಕೆ ಸರಾಸರಿ ಒಂದು ಲಕ್ಷ ರೂಪಾಯಿ ತೆರಿಗೆಯನ್ನು ಸರಕಾರಕ್ಕೆ ಕಟ್ಟುತ್ತಿದ್ದಾನೆ. ಅಷ್ಟು ತೆರಿಗೆ ಕಟ್ಟುವ ಸಾಮಾನ್ಯನ ಬದುಕು ಈಗ ಅಯೋಮಯವಾಗಿದೆ. ಅವನ ಬದುಕನ್ನು ಸರಿ ಮಾಡುವ ಜವಾಬ್ದಾರಿ ಸರಕಾರದ ಮೇಲಿದೆ ಎಂಬ ಸಂಗತಿಯನ್ನು ಸರಕಾರ ಮರೆಯುವಂತಿಲ್ಲ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಸರಕಾರ ಕೆಲ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಬೆಲೆ ಏರಿಯಿಂದ ಬಸವಳಿದಿರುವ ಜನರ ನೆರವಿಗೆ ಧಾವಿಸಲು ಆ ಹಣ ಮೀಸಲಿಟ್ಟು ಆ ಎಲ್ಲ ಯೋಜನೆಗಳನ್ನು ಒಂದು ವರ್ಷ ಮುಂದಕ್ಕೆ ಹಾಕಿ. ಈ ವರ್ಷವನ್ನು ʼಕೋವಿಡ್ ವರ್ಷʼವೆಂದು ಘೋಷಣೆ ಮಾಡಲಿ. ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ ಜನರ ನೆರವಿಗೆ ಧಾವಿಸಲಿ.
ಕಾವೇರಮ್ಮ ಎಂಬ ಬೆಂಗಳೂರು ದಕ್ಷಿಣ ಭಾಗದ ಮಹಿಳೆ ಒಂದು ಪತ್ರಿಕೆಯಲ್ಲಿ ಹೀಗೆ ಹೇಳಿಕೊಂಡಿದ್ದಾಳೆ. “ನನ್ನ ಮನೆಯಲ್ಲಿ ಅಡುಗೆ ಅನಿಲದ ಸ್ಟೌವ್ ಹಚ್ಚಲೂ ಆಗುತ್ತಿಲ್ಲ. ಬದುಕು ನಡೆಸುವುದೇ ದುಸ್ಥರವಾಗಿದೆ” ಎಂದು ಕಣ್ಣೀರು ಹಾಕಿದ್ದಾರೆ. ಆ ಮನೆಯಲ್ಲಿ ಆರು ಜನ ಬದುಕುತ್ತಿದ್ದಾರೆ, ಅವರ ಹಸಿವು ನೀಗಬೇಕು. ಆ ಮಹಿಳೆಯ ಕಷ್ಟ ಯಾವ ರೀತಿಯಲ್ಲಿದೆ? ಆ ತಾಯಿಯ ಸಂಕಟವೇನು? ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರಕಾರ ಆಲೋಚನೆ ಮಾಡಬೇಕಿದೆ. ಇಂತಹ ಲಕ್ಷಾಂತರ ಕಾವೇರಮ್ಮನ ಕಥೆಗಳು ನಮ್ಮ ರಾಜ್ಯದಲ್ಲಿವೆ.
ನಾವೆಲ್ಲ ರಾಜಕೀಯವಾಗಿ ಒಬ್ಬರ ಮೇಲೊಬ್ಬರು ಟೀಕೆಟಿಪ್ಪಣಿ ಮಾಡಿಕೊಂಡು ಕೂರುವುದಲ್ಲ. ಎಲ್ಲರೂ ಕಾವೇರಮ್ಮನವರಂಥ ಜನರ ಕಷ್ಟಕ್ಕೆ ಧಾವಿಸಬೇಕು. ಅವರ ಜೀವನ ಸರಿ ಮಾಡಲು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಈ ಬಗ್ಗೆ ರಾಜಕೀಯ ಸಂಕುಚಿತ ಮನೋಭಾವ ತೋರಿಸುವುದು ಬೇಡ. ರಾಜಕೀಯ ಲಾಭದ ಬಗ್ಗೆ ಲೆಕ್ಕಾಚಾರ ಹಾಕುವುದೂ ಸರಿಯಲ್ಲ.
ಪಕ್ಷ ರಾಜಕಾರಣವನ್ನು ಬದಿಗೊತ್ತಿ ಸಂಕಷ್ಟದಲ್ಲಿರುವ ಜನ ಸಾಮಾನ್ಯನಿಗೆ ಏನು ಮಾಡಬೇಕೋ, ಅದರ ಬಗ್ಗೆ ಈ ವೇದಿಕೆಯಲ್ಲಿ ಯೋಚನೆ ಮಾಡಿ ಪರಿಹಾರ ಹುಡುಕಬೇಕಿದೆ. ಸರಕಾರ ತತ್ಕ್ಷಣವೇ ಅವನ ನೆರವಿಗೆ ಧಾವಿಸಬೇಕು ಎಂಬುದು ನನ್ನ ಒತ್ತಾಯವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಅಕ್ಕಿಭಾಗ್ಯದ ಅಸಲಿಯೆತ್ತು ಬಿಚ್ಚಿಟ್ಟ ಎಚ್ಡಿಕೆ
ತಮ್ಮ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ನಡೆದ ಅಕ್ಕಿಭಾಗ್ಯದ ಅಸಲಿ ಕಥೆಯನ್ನು ಸದನದಲ್ಲಿ ಬಿಚ್ಚಿಟ್ಟರು ಹೆಚ್.ಡಿ.ಕುಮಾರಸ್ವಾಮಿ.
“ನನ್ನ ಸರಕಾರ ಬಂದಾಗ ಜನರಿಗೆ ಐದು ಕೆಜಿ ಅಕ್ಕಿಯನ್ನು ನೀಡಲಾಯಿತು. ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರು ದೊಡ್ಡ ಹುಯಿಲೆಬ್ಬಿಸಿದರು. ಐದು ಕೆಜಿ ಬದಲು ಏಳು ಕೆಜಿಯನ್ನೇ ಕೊಡಬೇಕು ಎಂದು ಹಠಕ್ಕೆ ಬಿದ್ದರು. ಆದರೆ, ಹಣಕಾಸು ಲಭ್ಯತೆ ನೋಡಿದರೆ ಕೇವಲ ಐದು ಕೆಜಿ ಅಕ್ಕಿಗೆ ಮಾತ್ರ ಹಣ ತೆಗೆದಿರಿಸಲಾಗಿತ್ತು.”
“ಉಳಿದ ಎರಡು ಕೆಜಿ ಅಕ್ಕಿಗೆ ಹಣ ತರುವುದು ಎಲ್ಲಿಂದ? ಚುನಾವಣೆಗೆ ಹೋಗುವ ಮುನ್ನ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಐದು ಕೆಜಿ ಅಕ್ಕಿಗಷ್ಟೇ ಹಣ ಮೀಸಲಿಟ್ಟು ಹೋಗಿದ್ದರು. ಸಮ್ಮಿಶ್ರ ಸರಕಾರ ಬಂದಾಗ ಇದೇ ಜನ ಏಳು ಕೆಜಿ ಅಕ್ಕಿ ಕೊಡಬೇಕು ಎಂದು ಬೊಬ್ಬೆ ಹೊಡೆದರು. ಕೇವಲ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಮಾಡಿದ ಕೆಲಸಕ್ಕೆ ಜನ ನಮ್ಮನ್ನು ಟೀಕೆ ಮಾಡುವಂತಾಯಿತು” ಎಂದು ಎಚ್ಡಿಕೆ ಹೇಳಿದರು.
“ಆಗ ನನಗೆ ಎಂಥ ಸಂದಿಗ್ಧತೆ ಎಂದರೆ, ಏಳು ಕೆಜಿ ಅಕ್ಕಿ ಕೊಡಲೇಬೇಕು, ಕೊಡೋಕೆ ದುಡ್ಡಿಲ್ಲ. ನಾವು ಘೋಷಣೆ ಮಾಡಿದ್ದೇವೆ, ನಿಲ್ಸಂಗಿಲ್ಲ ಎನ್ನುವ ಒತ್ತಡ ತಂತ್ರ ಬೇರೆ. ರಾಜ್ಯದ ಜನರಿಗೆ ಈ ಸತ್ಯಸಂಗತಿ ಗೊತ್ತಿಲ್ಲ. ಈಗ ಹೇಳುತ್ತಿದ್ದೇನೆ” ಎಂದು ಅವರು ಅಕ್ಕಿಭಾಗ್ಯದ ಅಸಲಿಯೆತ್ತನ್ನು ಬಯಲು ಮಾಡಿದರು.
ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಈ ಸತ್ಯ ರಾಜ್ಯದ ಜನರಿಗೆ ಗೊತ್ತಾಗಲಿ. ಇದುವರೆಗೂ ಈ ವಿಷಯ ನಮಗೂ ಗೊತ್ತಿರಲಿಲ್ಲ ಎಂದು ಹೇಳಿದರು.
Key words: Government officer-against-MLA- Former CM-HD kumaraswamy