ಹುಬ್ಬಳ್ಳಿ,ಫೆಬ್ರವರಿ,11,2022(www.justkannada.in): ಹಿಜಾಬ್ ವಿವಾದ ಕಾವೇರುತ್ತಿದ್ದಂತೆ ರಾಜ್ಯದಲ್ಲಿ ಸರ್ಕಾರ ಶಾಲಾ-ಕಾಲೇಜಿಗೆ ರಜೆ ಘೋಷಿಸಿತ್ತು. ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಲಾ-ಕಾಲೇಜಿಗೆ ರಜೆ ನೀಡಿದ್ದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಈ ವಿಷಯದಲ್ಲಿ ಬದ್ಧತೆಯೇ ಇಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಸವರಾಜ ಹೊರಟ್ಟಿ, ರಾಮನ ಭಕ್ತನೇ ಇರಲಿ, ಹನುಮಂತನ ಭಕ್ತನೇ ಇರಲಿ. ಹಿಜಾಬ್ ವಿಚಾರದಲ್ಲಿ ರಾಜಕೀಯ ಸಲ್ಲದು ವಿದ್ಯಾರ್ಥಿಗಳ ಭವಿಷ್ತದಲ್ಲಿ ಆಟವಾಡಬಾರದು. ಶಿಕ್ಷಣ ಸಚಿವರು ಸುಮ್ಮನೇ ಆರಾಮವಾಗಿದ್ದರೇ ಹೇಗೆ ಎಂದು ಪ್ರಶ್ನಿಸಿದರು.
ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಸಂಬಂಧ ನಡೆದಿರುವ ವಿವಾದವನ್ನು ಪರಿಹರಿಸಲು ರಾಜ್ಯ ಸರ್ಕಾರ ಸಭೆ ನಡೆಸಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ. ಈಗಿನ ಅಹಿತಕರ ವಾತಾವರಣ ತಿಳಿಗೊಳಿಸಲು ಸರ್ಕಾರ ಪೋಷಕರು, ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳು, ಮುಖ್ಯಮಂತ್ರಿ, ಗೃಹಸಚಿವ ಹಾಗೂ ಶಿಕ್ಷಣ ಸಚಿವರ ಸೌಹಾರ್ದ ಸಭೆ ನಡೆಸಬೇಕು. ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎನಿಸುತ್ತಿರುವ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಸಾಕಷ್ಟು ಅಹಿತಕರ ಘಟನೆ ನಡೆದರೂ ಸರ್ಕಾರ ಕೈಕಟ್ಟಿಕೊಂಡು ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Key words: Government – school-college-Basavaraja horatti