ಬೆಂಗಳೂರು,ನವೆಂಬರ್,18,2021(www.justkannada.in): ಗ್ರಾಮಗಳ ಸ್ತ್ರೀಶಕ್ತಿ ಸಂಘಗಳಿಂದ ಹಿಡಿದು ಬೃಹತ್ ಮಟ್ಟದ ಉದ್ಯಮಗಳಿಗಾಗಿಯೇ ಉತ್ತಮ ಆರ್ಥಿಕ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಆರ್ಥಿಕ ಸಂಸ್ಥೆಯನ್ನು ರಚಿಸುವ ಸಂಬಂಧ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಉಬುಂಟು – ಮಹಿಳಾ ಉದ್ಯಮಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ- ಒಗ್ಗಟ್ಟಾಗಿ ಬೆಳೆಯೋಣ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಮಹಿಳೆಯರು ಉದ್ಯಮದಲ್ಲಿ ತೊಡಗಿಕೊಳ್ಳಬೇಕು. ಆದರಿಂದ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಚಿಂತನೆ ಇದೆ ಎಂದು ಅವರು ಹೇಳಿದರು. ನಮ್ಮ ಸರ್ಕಾರಕ್ಕೆ ಸ್ತ್ರೀ ಶಕ್ತಿಯ ಬಗ್ಗೆ ವಿಶ್ವಾಸವಿದೆ. ಸ್ತ್ರೀ ಶಕ್ತಿಯನ್ನು ಬೆಂಬಲಿಸಿ, ಬೆಳೆಸಿ,ಪ್ರತಿಯೊಬ್ಬ ಕನ್ನಡದ ಮಹಿಳೆ ಆರ್ಥಿಕವಾಗಿ ಸಬಲವಾಗಿ , ಕುಟುಂಬ ಹಾಗೂ ಅದರೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಅವರೂ ಕೊಡುಗೆ ನೀಡಬೇಕೆಂಬ ಚಿಂತನೆ ಸರ್ಕಾರದ್ದು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನಿ ಸ್ತ್ರೀಶಕ್ತಿಯ ಪರವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಉದ್ಯಮಶೀಲತೆ ಎಂದರೆ ಮಹಿಳೆ ಎಂದಾಗಬೇಕು. ಮಹಿಳಾ ಉದ್ಯಮಿ ಎನ್ನುವುದರಿಂದ ಹೊರಗೆ ಬರಬೇಕು. ಮನೆ ನೋಡಿಕೊಳ್ಳುವುದು ವಿಶ್ವದಲ್ಲಿಯೇ ಅತಿ ದೊಡ್ಡ ಉದ್ಯಮ. ಅದರಲ್ಲಿಯೇ ವಿವಿಧ ಶಾಖೆಗಳಿವೆ. ಮನೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಕೂಡ ಉದ್ಯಮಗಳೇ. ಭಾರತೀಯ ಮಹಿಳೆಯರು ಬಹುರಾಷ್ಟ್ರೀಯ ಬ್ಯಾಂಕ್ ಗಳಿಗಿಂತಲೂ ಹೆಚ್ಚಿನ ಉಳಿತಾಯವನ್ನು ಮಾಡಿದ್ದಾರೆ ಎಂಬ ವರದಿ ಇದೆ. ಮನೆಗಳಲ್ಲಿ ದಿವಾಳಿತನ ಎಂದೂ ಘೋಷಣೆಯಾದ ಉದಾಹರಣೆಯಿಲ್ಲ. ಉಳಿತಾಯ ನಮ್ಮ ಸಂಸ್ಕೃತಿಯ ಭಾಗ. ಅಂಧ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮವನ್ನು ಒಂದು ವಾರದೊಳಗೆ ರೂಪಿಸಿ, ಅಂಧ ಮಹಿಳೆಯರು ಉದ್ಯೋಗ ಹೊಂದುವಂತೆ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.
ಈ ಘೋಷಣೆಯ ಹಿಂದಿನ ಕಾರಣವನ್ನು ವಿವರಿಸಿದ ಸಿಎಂ ಬೊಮ್ಮಾಯಿ, “ಕಡುಬಡವರಾದ ಮೂರು ಅಂಧ ಮಹಿಳೆಯರು ತಮ್ಮ ಹೆಣ್ಣುಮಕ್ಕಳೊಂದಿಗೆ ಇಂದು ನನ್ನನ್ನು ಭೇಟಿಯಾದರು. ನನ್ನಿಂದ ಸಹಾಯಬೇಕೆಂದು ಕೇಳಿದಾಗ “ನನಗೆ ಸಹಾಯ ಬೇಕಿಲ್ಲ, ಆದರೆ ನನಗೆ ನಾನೇ ಸಹಾಯ ಮಾಡಿಕೊಳ್ಳಲು ಕೆಲಸ ಬೇಕೆಂದು ಕೇಳಿದರು. ತಕ್ಷಣವೇ ಈ ತೀರ್ಮಾನವನ್ನು ಕೈಗೊಂಡೆ’ ಎಂದರು.
ಉಬುಂಟು ಸದಸ್ಯರೂ ಸಹ ತಮ್ಮ ಉದ್ಯಮ ಸಂಸ್ಥೆಗಳಲ್ಲಿ ಅಂಧರು ಹಾಗೂ ದಿವ್ಯಾಂಗರಿಗೆ ಕೆಲಸವನ್ನು ಒದಗಿಸಿ, ಅವರ ಸಹಾಯಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ಉಬುಂಟು ಸಂಸ್ಥೆಯಲ್ಲಿ ಮಾದರಿ ಮಹಿಳೆಯರಿದ್ದು, ಮತ್ತೊಬ್ಬರು ಬೆಳೆಯರು ಸಹಾಯ ಮಾಡಿದಾಗ ಯಶಸ್ಸು ಸಂಪೂರ್ಣವಾಗುತ್ತದೆ. 400 ಸದಸ್ಯರಿರುವ ಉಬುಂಟು ಸಂಸ್ಥೆಯ ಎಲ್ಲರೂ ಮುಂದಿನ ವರ್ಷದಲ್ಲಿ ಒಬ್ಬ ವ್ಯಕ್ತಿಯನ್ನು ಬೆಳೆಯಲು ಸಹಾಯ ಮಾಡಿದರೂ ಅದು ಸಮಾಜಕ್ಕೆ ನೀಡುವ ಬಹು ದೊಡ್ಡ ಕೊಡುಗೆಯಾಗಲಿದೆ ಎಂದರು.
ಕರ್ನಾಟಕ ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸುವ ನಾಡು…
ಕರ್ನಾಟಕದಲ್ಲಿ ದೊಡ್ಡ ನೈಸರ್ಗಿಕ ಸಂಪತ್ತಿದೆ. ಕರಾವಳಿ, ಪಶ್ಚಿಮ ಘಟ್ಟಗಳು, ನದಿಗಳು, ಅರಣ್ಯ , ಹತ್ತು ಅಗ್ರೋ ವಲಯಗಳ ಜೊತೆಗೆ ಒಳ್ಳೆಯದನ್ನು ಮಾಡುವ ಮನೋಗುಣವಿದೆ. ಬ್ರಿಟಿಷರ ವಿರುದ್ಧ ಝಾನ್ಸಿ ರಾಣಿಗೂ 40 ವರ್ಷಗಳ ಮುನ್ನವೇ ಹೋರಾಡಿದ್ದು ಕರ್ನಾಟಕದ ವೀರ ರಾಣಿ ಕಿತ್ತೂರು ಚೆನ್ನಮ್ಮ. ರಾಣಿ ಅಬ್ಬಕ್ಕ, ಕೆಳದಿ ಚನ್ನಮ್ಮ, ಒನಕೆ ಓಬವ್ವ ನಮ್ಮ ರಾಜ್ಯದವರು. ಈ ಮಣ್ಣಿನಲ್ಲಿ ಮಹಿಳೆಯರು ಉತ್ತಮ ಕಾರಣಗಳಿಗಾಗಿ ನಡೆದ ಹೋರಾಟಗಳಲ್ಲಿ ಯಾವಾಗಲೂ ಭಾಗಿಯಾಗಿದ್ದವರು. ನೀವೆಲ್ಲರೂ ಅಂಥ ವೀರ ಪರಂಪರೆಗೆ ಸೇರಿದವರು. ಇಂಥ ಶ್ರೀಮಂತ ಪರಂಪರೆಗೆ ಸೇರಿದವರು ಇಡೀ ಭಾರತದಲ್ಲಿ ಅತ್ಯುತ್ತಮ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದರು.
ಉಬುಂಟು ಎಂಬ ಛತ್ರಿಯಡಿ 30 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿವೆ. ಇದು ಇನ್ನೂ ಹೆಚ್ಚಬೇಕು. ಹಿಂದುಳಿದ , ಎಸ್.ಸಿ/ ಎಸ್.ಟಿ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಉಬುಂಟು ಕಾರ್ಯನಿರ್ವಹಿಸಬೇಕು. ಮಹಿಳಾ ಸಮುದಾಯ ಉದ್ಯಮ ಸಮುದಾಯವಾಗಿ ಪರಿವರ್ತನೆಗೊಳ್ಳಬೇಕು. ಮಹಿಳೆಯರು ಪುರುಷರಿಗಿಂತ ಹೆಚ್ಚು ಶ್ರಮಜೀವಿಗಳು, ಪ್ರಾಮಾಣಿಕರು ಹಾಗೂ ದಕ್ಷರಿದ್ದಾರೆ. ಇದು ಯಶಸ್ವಿ ಉದ್ಯಮಿಗಳಿಗಿರುವ ಗುಣಗಳು ಎಂದು ನುಡಿದರು.
2020-2025 ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಕಗಳು
2019 ರ ಕೈಗಾರಿಕಾ ನೀತಿ ಒಳಗೊಂಡಿದ್ದ ಮಹಿಳಾ ಉದ್ಯಮಿಗಳಿಗೆ ನೀಡುವ ಪ್ರೋತ್ಸಾಹಕಗಳ ಅಧ್ಯಾಯವನ್ನು 2020- 2025 ರ ನೀತಿಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು. ಮಹಿಳಾ ಉದ್ಯಮಿಗಳಿಗೆ ನೀಡುವ ಅನುದಾನದಲ್ಲಿ ರಿಯಾಯಿತಿ ಈಗಾಗಲೇ ನೀಡಲಾಗುತ್ತಿದ್ದು, ಜಮೀನು ಖರೀದಿಗೆ ರಿಯಾಯಿತಿ ಒದಗಿಸಲು ಚಿಂತನೆ ನಡೆಸಲಾಗುವುದು ಎಂದರು. ಐಟಿ ಬಿಟಿ ಗೆ ಇರುವ ರೀತಿಯಲ್ಲಿಯೇ ಕಾರ್ಯಕ್ರಮವನ್ನು ಮಹಿಳಾ ಉದ್ಯಮಿಗಳಿಗೆ ರೂಪಿಸಲಾಗುವುದು ಎಂದರು.
Key words: government – Thought – separate- financial- institution – women entrepreneurs-CM Basavaraja Bommai