ಮೈಸೂರು, ಆಗಸ್ಟ್ 22, 2021 (www.justkannada.in): ನಾಳೆಯಿಂದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಪುನಾರಂಭವಾಗಲಿವೆ. ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳ ಬಾಗಿಲು ಮತ್ತೆ ತೆರೆಯಲಿದೆ.
ನಾಳೆಯಿಂದ 9, 10 ರಿಂದ 12 ನೇ ತರಗತಿಗಳು ಆರಂಭವಾಗಲಿದ್ದು, ಇದಕ್ಕೆ ಮೈಸೂರಿನಲ್ಲೂ ಸಕಲ ಸಿದ್ದತೆ ನಡೆದಿದೆ. ಜಿಲ್ಲೆಯಲ್ಲಿ 9ರಿಂದ 10ನೇ ತರಗತಿಗಳ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧಗೊಂಡಿದೆ.
232 ಸರ್ಕಾರಿ ಶಾಲೆಗಳು, 45 ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು, 134 ಅನುದಾನ ಸಹಿತ ಖಾಸಗಿ ಶಾಲೆಗಳು , 349 ಅನುದಾನ ರಹಿತ ಖಾಸಗಿ ಶಾಲೆಗಳು, ಕೇಂದ್ರ ವಿದ್ಯಾಲಯಗಳು 6 ಸೇರಿ ಮೈಸೂರಿನ ಒಟ್ಟು 766 ಶಾಲೆಗಳು ಓಪನ್ ಆಗಲಿವೆ.
ಜಿಲ್ಲೆಯಲ್ಲಿ 3 ವಸತಿ ಕಾಲೇಜು, 74 ಕಾಲೇಜು ಸೇರಿ ಒಟ್ಟು 77 ಸರ್ಕಾರಿ ಕಾಲೇಜುಗಳಲ್ಲೂ ಸಿದ್ಧತೆ ನಡೆದಿದೆ. 31 ಅನುದಾನಿತ, 149 ಅನುದಾನರಹಿತ ಕಾಲೇಜುಗಳಿವೆ. ಎಲ್ಲಾ ಶಾಲಾ ಕಾಲೇಜುಗಳಿಗೂ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತರಗತಿಗೆ ಹಾಜರಾಗಲು ಶಾಲೆಗಳು ಸಿದ್ದವಾಗಿವೆ. ಶಾಲೆಗಳ ಪ್ರಸ್ತತ ಸ್ಥಿತಿ ಪರಿಶೀಲನೆಗಾಗಿ ಒಂಬತ್ತು ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಮಕ್ಕಳ ಹಾಜರಾತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜತೆಗೆ ಶಾಲೆಗಳ ಸ್ವಚ್ಛತಾ ಕಾರ್ಯನಡೆಸಿ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೆ, ಶಾಲೆಗೆ ಬರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಸಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದ್ದು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು. ಈಗಾಗಲೇ ವ್ಯಾಕ್ಸಿನ್ ಪಡೆದಿರುವ ಜಿಲ್ಲೆಯ ಶಿಕ್ಷಕ, ಶಾಲಾ ಸಿಬ್ಬಂದಿ. ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ. ಶಾಲೆ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ. ಆನ್ಲೈನ್ ಹಾಗೂ ಆಫ್ಲೈನ್ ಎರಡಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.