ಬಡವರ ಬಂಧುಗೆ ಗುರುತಿನ ಚೀಟಿಯೇ ಅಡ್ಡಿ

ಬೆಂಗಳೂರು:ಆ-25: ರಾಜ್ಯದ ನಗರ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಜಾರಿಗೆ ತಂದಿರುವ ‘ಬಡವರ ಬಂಧು ಯೋಜನೆ’ಯ ನೆರವು ಪಡೆಯಲು ಲಕ್ಷಾಂತರ ಬೀದಿ ವ್ಯಾಪಾರಿಗಳಿಗೆ ‘ಗುರುತಿನ ಚೀಟಿ’ಯೇ ಅಡ್ಡಿಯಾಗಿದೆ.

ಬೀದಿ ಬದಿ ವ್ಯಾಪಾರಿಗಳ ಬಳಿ ‘ಗುರುತಿನ ಚೀಟಿ’ ಇಲ್ಲದಿರುವುದರಿಂದ ಸಾಲ ಪಡೆಯಲು ಅರ್ಹತೆ ಹೊಂದಿದ್ದರೂ ಸಾಲ ಸಿಗದಂತಾಗಿದೆ. ಇದಕ್ಕೆ ರಾಜ್ಯದ ಕೆಲವು ನಗರ ಸ್ಥಳೀಯ ಸಂಸ್ಥೆಗಳು ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ)- 2014 ಕಾಯ್ದೆಗೆ ನಿಯಮಾವಳಿ ರೂಪಿಸದಿರುವುದು ಕಾರಣವಾಗಿದೆ.

ಇನ್ನೂ ಕೆಲವು ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ರೂಪಿಸಿಕೊಂಡಿವೆಯಾದರೂ, ಸಣ್ಣ ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿಲ್ಲ. ನಿಯಮ ರೂಪಿಸಿಕೊಂಡರೆ ಮಾತ್ರ ಗುರುತಿನ ಚೀಟಿ ನೀಡಬಹುದು. ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಇದ್ದರೆ ಮಾತ್ರ ಸಾಲ ಸಿಗಲಿದೆ.

ರಾಜ್ಯದಲ್ಲಿ ಅಂದಾಜು 4.50 ಲಕ್ಷ ಜನ ಬೀದಿ ವ್ಯಾಪಾರಿಗಳಿದ್ದಾರೆ. ಇವರಿಗೆ ಆರ್ಥಿಕವಾಗಿ ಸಹಾಯವಾಗುವ ಉದ್ದೇಶದಿಂದ 2018ರ ನವೆಂಬರ್‌ನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ಅವರು ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದರು.

ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳಿಗೆ ಎರಡು ಸಾವಿರದಿಂದ ಹತ್ತು ಸಾವಿರದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಆದರೆ, ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಗುರುತಿನಚೀಟಿ ನೀಡದೆ ಇರುವುದರಿಂದ ಈ ಯೋಜನೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‘ಬಡವರ ಬಂಧು ಯೋಜನೆಯನ್ನು ಮುಖ್ಯವಾಗಿ ಬೀದಿಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಹಣ ನೀಡಬೇಕಾದರೆ ಅವರ ಬಳಿ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದರೆ ಸಾಲ ನೀಡಲು ಸಾಧ್ಯವಿಲ್ಲ’ ಎಂದು ಡಿಸಿಸಿ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಗುರುತಿನ ಚೀಟಿಯೊಂದಿಗೆ ಅರ್ಜಿದಾರರು ಬಿಪಿಎಲ್ ಕಾರ್ಡ್‌, ಆಧಾರ್‌ ಕಾರ್ಡ್‌ ಮತ್ತು ಶೂನ್ಯ ಬ್ಯಾಂಕ್‌ ಬ್ಯಾಲೆನ್ಸ್‌ ಉಳಿತಾಯ ಖಾತೆ ತೆರೆಯಬೇಕು. ಸಾಲ ಮರು ಪಾವತಿಗೆ ಮೂರು ತಿಂಗಳ ಕಾಲಾವಕಾಶವಿದ್ದು, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ ಮತ್ತೆ ಶೇ.10ರಷ್ಟು ಹೆಚ್ಚು ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ.

9.12 ಕೋಟಿ ರೂ ಸಾಲ
ಬಡವರ ಬಂಧು ಯೋಜನೆಯ ಅನ್ವಯ ಸಹಕಾರಿ ಬ್ಯಾಂಕ್‌ನ ಮೂಲಕ ಮಾತ್ರ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9.12 ಕೋಟಿ ರೂ. ಸಾಲ ನೀಡಲಾಗಿದ್ದು, 15,200 ಜನ ಬೀದಿ ವ್ಯಾಪಾರಿಗಳು ಇದರ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಯೋಜನೆಯ ಮೂಲಕ ಹಣ ಪಡೆಯಲು ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಗುರುತಿನ ಚೀಟಿ ಸಮಸ್ಯೆಯಿಂದ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಸಣ್ಣ ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಕೃಪೆ:ಉದಯವಾಣಿ

ಬಡವರ ಬಂಧುಗೆ ಗುರುತಿನ ಚೀಟಿಯೇ ಅಡ್ಡಿ
identity-card-for-the-poor-relative