ಬೆಂಗಳೂರು,ಜುಲೈ,13,2022(www.justkannada.in): ‘ಪತ್ರಕರ್ತರು, ನ್ಯಾಯಾಧೀಶರೆಂದರೆ ನಿಷ್ಪಕ್ಷಪಾತರು ಎಂದೇ ಬಿಂಬಿತವಾಗಬೇಕು, ನಮ್ಮನ್ನು ನಿಷ್ಪಕ್ಷಪಾತಿಗಳೆಂದು ಇನ್ನೊಬ್ಬರು ಗುರುತಿಸಿ ಕರೆಸಿಕೊಳ್ಳುವಂತಾಗಬಾರದು’ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಅಭಿಪ್ರಾಯಪಟ್ಟರು.
ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ‘ನ್ಯಾಯಾಂಗ ಮತ್ತು ಮಾಧ್ಯಮ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನ್ಯಾಯಾಂಗ ಮತ್ತು ಪತ್ರಿಕೋದ್ಯಮದ ಪಾತ್ರ ಹಿರಿದು. ಅದನ್ನು ಅರಿತು ನಾವು ಇಂದು ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು. ಸಂವಾದದಲ್ಲಿ ಮಾಧ್ಯಮ ಮತ್ತು ನ್ಯಾಯಾಂಗದ ಕುರಿತ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ವೇಳೆ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಪಾದಕತ್ವದಲ್ಲಿ ಹೊರತರುವ ಕಾಲೇಜಿನ ಪತ್ರಿಕೆ ‘ದಿ ಎನ್ ಸಿಜೆ ಟೈಮ್ಸ್’ ಹಾಗೂ ಚನ್ನಪಟ್ಟಣ ಗೊಂಬೆಗಳ ಕುರಿತ ‘ಡಾಕ್ಯುಮೆಂಟರಿ’ ಯನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ. ಎಸ್. ಎನ್. ನಾಗರಾಜ ರೆಡ್ಡಿ, ಪ್ರಾಂಶುಪಾಲರಾದ ಡಾ.ವೈ.ಸಿ.ಕಮಲ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಜಯಸಿಂಹ ಮತ್ತು ಡಾ. ವೈಶಾಲಿ ಹೆಚ್.ಬಿ ಉಪಸ್ಥಿತರಿದ್ದರು.
Key words: Journalists-impartial-Retired-Justice- Sudhindra Rao.