ಮೈಸೂರು,ಜೂನ್,29,2023(www.justkannada.in): ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸರ್ವ ರೀತಿಯಲ್ಲಿಯೂ ವಿಫಲರಾಗಿರುವ ನಳಿನ್ ಕುಮಾರ್ ಕಟೀಲ್ ರವರು, ಸಿದ್ದರಾಮಯ್ಯನವರ ನೇತೃತ್ವದ ಜನಪರ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಕಿಡಿಕಾರಿದರು.
ಬಿಜೆಪಿಯ ಹೀನಾಯ ಸೋಲಿಗೆ ಅವರ ಪಕ್ಷದ ನಾಯಕರೇ ನಳಿನ್ ರವರ ರಾಜೀನಾಮೆಗಾಗಿ ದಿನ ನಿತ್ಯವೂ ಬೇಡಿಕೆ ಮುಂದಿಡುತ್ತಿದ್ದಾರೆ. ಇವರೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿ ಎಂದೆಲ್ಲಾ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಹೀಗಾಗಿ ನಳಿನ್ ತಮ್ಮ ಪಕ್ಷದೊಳಗಿನ ಜಗಳ ಬಗೆಹರಿಸಿಕೊಳ್ಳಲು, ಮತ್ತು ಪಕ್ಷದೊಳಗೆ ತಮ್ಮ ವ್ಯಕ್ತಿತ್ವದ ಘನತೆ ಉಳಿಸಿಕೊಳ್ಳಲು ಆದ್ಯತೆ ನೀಡಬೇಕಾದ ತುರ್ತು ಅಗತ್ಯವಿದೆ. ಬಿಜೆಪಿಯು ದುರಾಡಳಿತ, ಭ್ರಷ್ಟಾಚಾರ, ಕೋಮುವಾದಿ ನಿಲುವುಗಳಿಂದ ಬೇಸತ್ತು ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಿ, ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಎನ್ನುವುದನ್ನು ಅನಗತ್ಯವಾಗಿ ಟೀಕಿಸುತ್ತಿರುವ ನಳಿನ್ ಹಾಗೂ ಬಿಜೆಪಿಯ ಇನ್ನಿತರ ನಾಯಕರು ಮನಗಾಣಬೇಕಿದೆ ಎಂದು ಹೆಚ್.ಎ ವೆಂಕಟೇಶ್ ಕುಟುಕಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮೊದಲು ನೀಡಿದ್ದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುತ್ತಿದ್ದು ಜನಪರ ಆಡಳಿತ ನೀಡುತ್ತಿದೆ. ಸರ್ಕಾರದ ಯಶಸ್ಸು ಸಹಿಸಲಾಗದೇ ಬಿಜೆಪಿಯ ನಾಯಕರು ಸರ್ಕಾರ ಹಾಗೂ ಮುಖ್ಯಮಂತ್ರಿಯವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ಮುಂದಿಡುತ್ತಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ಕಮಿಷನ್ ದಂಧೆ ನಡೆಸುತ್ತಿದೆ, ವರ್ಗಾವಣೆಯಲ್ಲಿ ಅವ್ಯವಹಾರ ನಡೆಸುತ್ತಿದೆ ಎನ್ನುತ್ತಿರುವ ನಳಿನ್ ಕುಮಾರ್ ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಿರುವ ಇಂತಹ ಕೃತ್ಯಗಳನ್ನು ನೆನಪಿಸಿಕೊಂಡು ಇಲ್ಲಿಯೂ ಹಾಗೇ ಇರಬಹುದೆಂದು ಭಾವಿಸಿ ಕಣ್ಣುಮುಚ್ಚಿಕೊಂಡು ಆರೋಪಿಸುತ್ತಿರುವಂತಿದೆ. ಒಂದು ಪಕ್ಷದ ರಾಜ್ಯಾಧ್ಯಕ್ಷರಾದವರು ಇಷ್ಟೊಂದು ಹಗುರವಾಗಿ ನಡೆದುಕೊಳ್ಳುವುದು ಒಪ್ಪತಕ್ಕದ್ದಲ್ಲ ಎಂದು ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.a
ಮಾಜಿ ಸಚಿವ ಆರ್. ಅಶೋಕ್, ಸೋತು ಸುಣ್ಣವಾಗಿರುವ ಸಿ.ಟಿ. ರವಿ, ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ ಇತ್ಯಾದಿ ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನಾಲಿಗೆ ಹರಿಯ ಬಿಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಆಗಿರುವ ಬದಲಾವಣೆ, ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಆಳವಾಗಿ ಬೇರೂರುತ್ತಿರುವ ಬಗೆಯನ್ನು ಗಮನಿಸಿ ಇವರು ಮಾನಸಿಕವಾಗಿ ಅಸ್ಥಿರರಾಗಿರುವಂತಿದೆ. ಹೀಗಾಗಿಯೇ ಬಾಯಿಗೆ ಬಂದಂತೆ ಆರೋಪಗಳನ್ನು ಮುಂದಿಟ್ಟು ಜನರ ಗಮನ ಸೆಳೆಯಲು ವಿಫಲ ಯತ್ನಗಳನ್ನು ನಡೆಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ಟಾಂಗ್ ನೀಡಿದರು.
ಅಕ್ಕಿ ಬದಲು ಹಣ ನೀಡಿ ಎಂದು ಆಗ್ರಹಿಸಿದ್ದ ಬಿಜೆಪಿಯ ನಾಯಕರು, ಈಗ ಸರ್ಕಾರ ಹಣ ನೀಡಲು ನಿರ್ಧರಿಸಿದಾಗ ಇದನ್ನೂ ಟೀಕಿಸುತ್ತಿದ್ದಾರೆ. ಇದು ಬಿಜೆಪಿ ನಾಯಕರಿಗೆ ಯಾವುದೇ ಖಚಿತ ನಿಲುವು, ನೈತಿಕ ಹೊಣೆಗಾರಿಕೆ, ವಿಶ್ಲೇಷಣಾತ್ಮಕ ಮತ್ತು ತುಲನಾತ್ಮಕ ನೋಟ ಹಾಗೂ ಅಭಿರುಚಿ ಇದಾವುದೂ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಿದೆ ಸೋತು ಮನೆ ಸೇರಿದ್ದರೂ ಸದಾ ಸುದ್ದಿಯಲ್ಲಿರುವ ಹಪಹಪಿಯ ಕಾರಣದಿಂದ ಇವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಹೀಗಾಗಿ ಬಿಜೆಪಿ ನಾಯಕರು ತಮ್ಮ ಹೇಳಿಕೆಗಳ ಮೇಲೆ ಸ್ವ ನಿಯಂತ್ರಣ ಸಾಧಿಸಿಕೊಳ್ಳಬೇಕು. ಇಲ್ಲದಿದ್ದರೆ ಇವರು ಮುಂದಿನ ಚುನಾವಣೆಯಲ್ಲಿ ಇನ್ನೂ ಆಳಕ್ಕೆ ನೂಕಲ್ಪಡುತ್ತಾರೆ, ಜನತೆ ತಾವೇ ಮುಂದಾಗಿ ಪಾಠ ಕಲಿಸುವುದರಲ್ಲಿ ಅನುಮಾನವಿಲ್ಲ ಎಂದು ಹೆಚ್.ಎ ವೆಂಕಟೇಶ್ ಎಚ್ಚರಿಕೆ ನೀಡಿದರು.
Key words: KPCC- spokesperson -HA Venkatesh-against-bjp-leaders