ಬೆಂಗಳೂರು,ಅಕ್ಟೋಬರ್,25,2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ವಿರುದ್ದ ಹಣ ದುರುಪಯೋಗವಾಗಿರುವ ಆರೋಪ ಕೇಳಿ ಬಂದಿದ್ದು, ಬ್ಯಾಂಕ್ ನವರು ಸಹ ಶಾಮೀಲಾಗಿ ಅಕ್ರಮ ಪಾವತಿಗೆ ನೆರವಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಈ ಸಂಬಂಧ ದಾಖಲೆ ಮತ್ತು ಮಾಹಿತಿ ಒದಗಿಸಲು ಮುಕ್ತ ವಿವಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪತ್ರ ಬರೆದಿದೆ
ಕೆಎಸ್ ಒಯುನಲ್ಲಿ ಅವ್ಯವಹಾರ ಆರೋಪ ಕುರಿತು ಹೂಟಗಳ್ಳಿ ನಿವಾಸಿ KSCPCR ಮಾಜಿ ಸದಸ್ಯರಾದ ಪರಶುರಾಮ ಎಮ್.ಎಲ್ ಅವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕ ದೀಪಕ್ ದೊರೆಯವರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಆಕ್ಸಿಸ್ ಬ್ಯಾಂಕ್ ಕುವೆಂಪುನಗರ ಶಾಖೆಯ CO-Ordinator, External Examinations KSOU ಬ್ಯಾಂಕ್ ಖಾತೆ ಸಂಖ್ಯೆ 92101003895267 (IFSC: UITB40000579) .ಇದನ್ನು ಸಹಾಯಕ ಪ್ರಾಧ್ಯಾಪಕಿ ಡಾ. ಸುಮತಿ ಆ ಗೌಡ ಅವರು ಸಂಯೋಜಕರಾಗಿ ಈ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ದಿನಾಂಕ 28.09.2021 ರಿಂದ 07.05.2022 ರ ನಡುವೆ ಈ ಖಾತೆಗೆ ಒಟ್ಟು ಕ್ರೆಡಿಟ್ ಮಾಡಿದ ರೂ.9438253 ಮತ್ತು ಡೆಬಿಟ್ ಮಾಡಿದ ರೂ.8586629 ಮತ್ತು ದಿನಾಂಕ 07.05.2022ಕ್ಕೆ ಬ್ಯಾಲೆನ್ಸ್ ರೂ.851624 ಇರುತ್ತದೆ. ಈ ಖಾತೆಯಿಂದ ಸಹಕಾರ ಸಂಘಗಳು, ಹಾಲು ಒಕ್ಕೂಟಗಳು, ವ್ಯಕ್ತಿಗಳು ಇತ್ಯಾದಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಮೊತ್ತವನ್ನು ಠೇವಣಿ ಮಾಡಿದ್ದಾರೆ ಮತ್ತು ವಿತರಿಸಿದ್ದಾರೆ.
18.12.2021 ರಿಂದ 07.05.2022 ರವರೆಗೆ ರೂ.2100000 ರ ಪ್ರಮುಖ ಮೊತ್ತವನ್ನು ಖಾತೆದಾರರು ರೂ.100000 ರಿಂದ ರೂ.500000 ವರೆಗೆ ವಿವಿಧ ಚೆಕ್ ಗಳ ಮೂಲಕ ಮೊತ್ತವನ್ನು ಸ್ವಯಂ ಡ್ರಾ ಮಾಡಿಕೊಂಡಿದ್ದಾರೆ. KSOU ನ ಕೆಲವು ಖಾತೆಗಳಿಗೆ ಕೆಲವು ನಿರ್ದಿಷ್ಟ ವ್ಯಕ್ತಿಗಳ ಹೆಸರಿನಲ್ಲಿ ಕೆಲವು ಮೊತ್ತಗಳನ್ನು ವಿತರಿಸಲಾಗಿದೆ. ಕೆಎಸ್ ಒಯು ಮತ್ತು ಅವರ ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಕೆಎಸ್ಒಯು ಬ್ಯಾಂಕ್ ಖಾತೆಯ ವಿಶೇಷ ಲೆಕ್ಕಪರಿಶೋಧನೆ ಕೈಗೊಳ್ಳುವಂತೆ ದೂರುದಾರರು ಕೋರಿದ್ದರು.
ಪತ್ರದಲ್ಲಿ ದೂರುದಾರ ಪರಶುರಾಮ ಅವರು ತಿಳಿಸಿರುವ ದೂರಿನ ಅಂಶಗಳನ್ನು ಲೆಕ್ಕಪರಿಶೋಧನಾ ಸಮಯದಲ್ಲಿ ಪರಿಶೀಲಿಸಿ ವರದಿಯಲ್ಲಿ ಕಂಡಿಕೆಯನ್ನು ಅಳವಡಿಸುವಂತೆ ಅಪರ ನಿರ್ದೇಶಕರು, ಪ್ರಾಂತೀಯ ಕಚೇರಿ, ಮೈಸೂರು ಇವರಿಗೆ ತಿಳಿಸಲಾಗಿತ್ತು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆಯೊಂದರಲ್ಲಿ (ಆಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ 92101003895267) ದಿನಾಂಕ 18.12.2021 ರಿಂದ 07.05.2022 ರವರೆಗೆ ರೂ.21,00,000 ಮೊತ್ತವನ್ನು ಹಾಗೂ ಸ್ವಂತಕ್ಕೆ ಎಂದು ರೂ.1,00,000 ದಿಂದ ರೂ.5,00,000 ದಂತೆ ಹಲವು ಸಲ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿರುವರೆಂದು ಪರಶುರಾಮ ಎಂ.ಎಲ್, ಮೈಸೂರುರವರು ನೀಡಿದ್ದ ದೂರಿನ ಬಗ್ಗೆ 2021-22ನೇ ಸಾಲಿನ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಈ ಬಗ್ಗೆ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ” ನೀಡಿದಾಗ ವಿಶ್ವವಿದ್ಯಾಲಯದವರು ಈ ಸಂಬಂಧ ಯಾವುದೇ ಮಾಹಿತಿಯನ್ನಾಗಲೀ ಅಥವಾ ದಾಖಲೆಗಳನ್ನಾಗಲೀ ನೀಡಿಲ್ಲ. ಹಾಗೂ ಸರ್ಕಾರದ ಆದೇಶ ಸಂ. ಎಫ್.ಡಿ 05 ಟಿಎಆರ್ 2017, ದಿನಾಂಕ: 30.01.2017ರ ನಿರ್ದೇಶನದಂತೆ ನಿಗಧಿಪಡಿಸಿರುವ ಅನುಬಂಧ-ಇ ನಲ್ಲಿ ಸದರಿ ವರ್ಷ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ದೃಢೀಕರಿಸಿ ಲೆಕ್ಕಪರಿಶೋಧನೆಗೆ ನೀಡಿಲ್ಲ. ಇದರಿಂದಾಗಿ ವಿಶ್ವವಿದ್ಯಾನಿಲಯದವರು ಎಷ್ಟು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದಾರೆ ಎಂಬ ವಿವರಗಳು ಲೆಕ್ಕಪರಿಶೋಧನೆಗೆ ದೊರೆತಿಲ್ಲ. ವಿಶ್ವವಿದ್ಯಾನಿಲಯದವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಕ್ತ ವಿಶ್ವವಿದ್ಯಾನಿಲಯದ ವಿ.ವಿ. ಶಾಖೆ ಇಲ್ಲಿ ನಿರ್ವಹಿಸುತ್ತಿರುವ ಬ್ಯಾಂಕ್ ಖಾತೆ (ಖಾತೆ ಸಂ. 39732252222) ಯ ಅಂಕಿ ಅಂಶಗಳನ್ನು ವಾರ್ಷಿಕ ಲೆಕ್ಕಪತ್ರಗಳಿಂದ ಹೊರಗಿಡಲಾಗಿದೆ.
ಲೆಕ್ಕಪರಿಶೋಧನಾ ವಿಚಾರಣಾ ಪತ್ರಗಳಿಗೆ ಉತ್ತರಿಸದಿರುವ ಬಗ್ಗೆ ವಿಶ್ವವಿದ್ಯಾನಿಲಯದ ಕುಲಸಚಿವರ ಗಮನವನ್ನು ಸೆಳೆಯಲಾಗಿದ್ದರೂ, ಕ್ರಮವಹಿಸದಿರುವುದು ಕಂಡುಬಂದಿದೆ. ದೂರುದಾರರು ಸಲ್ಲಿಸಿರುವ ಆಕ್ಸಿಸ್ ಬ್ಯಾಂಕ್ ನದ್ದೆನ್ನಲಾದ ಪಾಸ್ ಶೀಟ್ ಅನ್ನು ಪರಿಶೀಲಿಸಿದಾಗ ಅವರು ತಿಳಿಸಿರುವಂತೆಯೇ ದಿನಾಂಕ: 1812.2021 ರಿಂದ 07.05.2022 ರವರೆಗೆ ರೂ.21,00,000/- ಗಳ ಮೊತ್ತವನ್ನು ಹಾಗೂ ಸ್ವಂತಕ್ಕೆ ಎಂದು ರೂ.1,00,000/- ದಿಂದ ರೂ.5,00,000/- ದಂತೆ ಹಲವು ಸಲ ಡ್ರಾ ಮಾಡಿಕೊಂಡಿರುವುದು ಕಂಡುಬಂದಿದೆ.
ಹೀಗಾಗಿ ಈ ಬಗ್ಗೆ ಪರಿಶೀಲಿಸಲು ವಿಶ್ವವಿದ್ಯಾನಿಲಯದವರು ಯಾವುದೇ ದಾಖಲಾತಿಗಳನ್ನು ನೀಡದಿರುವುದರಿಂದ, ಬ್ಯಾಂಕ್ ಖಾತೆಯ ಸ್ವೀಕೃತಿ ಮತ್ತು ಪಾವತಿ ವಿವರಗಳನ್ನು ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಪತ್ರ ನೀಡಲಾಗಿತ್ತು. ಆದರೆ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ಆದರೆ ಇದುವರೆವಿಗೂ ಬ್ಯಾಂಕಿನಿಂದ ಯಾವುದೇ ಉತ್ತರ ಕೂಡ ಬಂದಿಲ್ಲ.
ಆದ್ದರಿಂದ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬ್ಯಾಂಕಿನವರು ಕೂಡ ವಿಶ್ವವಿದ್ಯಾನಿಲಯದವರ ಜೊತೆ ಶಾಮೀಲಾಗಿ ಅಕ್ರಮ ಪಾವತಿಗೆ ನೆರವಾಗಿರುವ ಸಂಶಯ ಉಂಟಾಗುತ್ತದೆ. ಪ್ರಯುಕ್ತ ಸಂಬಂಧಪಟ್ಟ ದಾಖಲೆ ಮಾಹಿತಿಗಳನ್ನು ಒದಗಿಸಲು ಮುಕ್ತ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
Key words: KSOU- misappropriation –funds-Letter -higher education- department -documents,