ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಮೂರೇ ದಿನಕ್ಕೆ ಸರ್ಕಾರ ಪತನ : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೇವೇಂದ್ರ ಫಡ್ನಾವೀಸ್ ಘೋಷಣೆ….

ಮುಂಬೈ,ನ,26,2019(www.justkannada.in):  ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್ ಸಿಪಿ ಅಧಿಕಾರಕ್ಕೆ ಬಂದ ಮೂರದಿನಕ್ಕೆ ಸರ್ಕಾರ ಪತನವಾಗಿದ್ದು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ದೇವೆಂದ್ರ ಫಡ್ನಾವೀಸ್ ಘೋಷಣೆ ಮಾಡಿದ್ದಾರೆ.

ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿವುದಾಗಿ ದೇವೇಂದ್ರ ಫಡ್ನಾವೀಸ್ ಘೋಷಣೆ ಮಾಡಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಂದ್ರ ಫಡ್ನಾವೀಸ್,  ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು  ಬಿಜೆಪಿ –ಶೀವಸೇನೆ ಮೈತ್ರಿಗೆ ಬೆಂಬಲ ನೀಡಿದ್ದರು. ಇನ್ನು ಫಲಿತಾಂಶದಲ್ಲಿ ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಶಿವಸೇನೆ ಮಾತು ತಪ್ಪಿತು. ಚುನಾವಣೆಯಲ್ಲಿ ಗೆಲುವಿನ ಬಳಿಕ ಶಿವಸೇನಾ ನಾಯಕರು ಅಸಹಕಾರ ತೋರಿದರು. ನಾವು ಶಿವಸೇನೆಗೆ ಸಿಎಂ ಹುದ್ದೆಯ ಭರವಸೆ ನೀಡಿರಲಿಲ್ಲ. 50:50  ಭರವಸೆಯನ್ನೂ ನೀಡಿರಲಿಲ್ಲ  ಶಿವಸೇನೆ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಫಲಿತಾಂಶದ ಬಳಿಕ ಶಿವಸೇನೆ ಬೇರೆ ಪಕ್ಷಗಳೊಂದಿಗೆ ಸೇರಿಕೊಂಡಿತು. ಬಳಿಕ ಶಿವಸೇನೆ ಚೌಕಾಸಿ ಮಾಡಲು ಶುರು ಮಾಡಿತು. ಚುನಾವಣೆಗೂ ಮುನ್ನ ಶಿವಸೇನೆಗೆ ಸಿಎಂ ಹುದ್ದೆಯ ಭರವಸೆ ಕೊಟ್ಟಿರಲಿಲ್ಲ. ಆದರೆ, ಶಿವಸೇವೆ ಸುಳ್ಳು ಹೇಳಿ ಮಾತು ತಪ್ಪಿದೆ. ನಾವು ಶಿವಸೇನೆಗಾಗಿ ಬಹಳ ಸಮಯದವರೆಗೆ ಕಾದಿದ್ದೆವು. ಮಾತು ತಪ್ಪಿದ ಶಿವಸೇನೆ ಪಕ್ಷಗಳ ಜತೆ ಸೇರಿದೆ ಎಂದು ದೇವೇಂದ್ರ ಫಡ್ನಾವೀಸ್ ಕಿಡಿಕಾರಿದರು.

ಹಾಗೆಯೇ ನಮಗೆ ಸರ್ಕಾರ ರಚಿಸಲು ಅಗತ್ಯ ಬಹುಮತ ಇಲ್ಲ ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಫಡ್ನಾವೀಸ್ ಘೋಷಣೆ ಮಾಡಿದರು. ಸುದ್ದಿಗೋಷ್ಠಿ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

 

 

Key words: maharastra-Devendra Fadnavis –announces- resignation – CM-position