ಚಾಮರಾಜನಗರ, ಅಕ್ಟೋಬರ್,25,2024 (www.justkannada.in): ರಾಜ್ಯದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 2 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಈ ಮೂಲಕ ಮಾದಪ್ಪ ಮತ್ತೆ ಕೋಟ್ಯಾಧೀಶನಾಗಿದ್ದಾನೆ.
ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ಮಲೇಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 2,00,80,844 ರೂ. ನಗದು, 30 ಗ್ರಾಂ ಚಿನ್ನ,1.850 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 28 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಈ ಆದಾಯ ಸಂಗ್ರಹವಾಗಿದೆ.
ಇಲ್ಲಿ ಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳಂದು ಜರುಗುವ ವಿಶೇಷ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಇದರ ಜೊತೆಗೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ ವಿಶೇಷಕ್ಕೂ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಅಲ್ಲದೆ ಶಕ್ತಿ ಯೋಜನೆ ಭರ್ಜರಿ ವರ್ಕೌಟ್ ಆಗಿದ್ದು ಶ್ರೀ ಕ್ಷೇತ್ರಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದರಿಂದಾಗಿ ಇತ್ತೀಚಿಗೆ ಹುಂಡಿ ಒಂದರಲ್ಲೇ ಪ್ರತಿ ತಿಂಗಳು 2 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗುತ್ತಿದೆ
ಮಲೇ ಮಹದೇಶ್ವರ ಕ್ಷೇತ್ರಕ್ಕೆ ಎಲ್ಲಾ ಮೂಲಗಳಿಂದ 70 ರಿಂದ 80 ಕೋಟಿ ವಾರ್ಷಿಕ ಆದಾಯ ಹರಿದು ಬರುತ್ತಿದೆ. ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ಬಿಟ್ಟರೆ ಅಧಿಕ ಆದಾಯ ಬರುವ ದೇವಾಲಯಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಎರಡನೇ ಸ್ಥಾನದಲ್ಲಿದೆ.
Key words: Male Mahadeshwara hills, Monthly, Hundi Count