ಮೈಸೂರು, ಅ.24,2024: (www.justkannada.in news) ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮೈಸೂರು ಜಿಲ್ಲೆ ಹಾಗೂ ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ 77ನೇ ವರ್ಷದ ಮೈಸೂರು ಚಲೋ ಸಂಭ್ರಮಾಚರಣೆ.
ಸ್ವಾತಂತ್ರ್ಯ ನಂತರ ಮೈಸೂರು ಸಂಸ್ಥಾನವು ಭಾರತ ಒಕ್ಕೂಟದಲ್ಲಿ ಮಿಲನವಾಗಿದ್ದರಿಂದ ಸಾವಿರಾರು ಹೋರಾಟಗಾರರು ಮೈಸೂರು ಚಲೋ ಚಳುವಳಿ ನಡೆಸಿದ್ದರು, ಪರಿಣಾಮ 1947ರ ಅಕ್ಟೋಬರ್ 24ರಂದು ವಿಲೀನವಾಯಿತು. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆನಂತರ ರಾಷ್ಟ್ರಧ್ವಜಾರೋಹಣ ನಡೆಸಿ, ನಂತರ ರಾಮಸ್ವಾಮಿ ವೃತ್ತದಲ್ಲಿರುವ ಚಳುವಳಿಯಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರ ರಾಮಸ್ವಾಮಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೈ ಸಿ ರೇವಣ್ಣ ಮಾತನಾಡಿದ ಅವರು 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿನಲ್ಲಿ ರಾಜಮನೆತನದ ಆಡಳಿತವಿತ್ತು. ಆ ಬಳಿಕ ಹಳೇ ಮೈಸೂರು ರಾಜ್ಯದಲ್ಲಿಯೂ ಪ್ರಜಾಪ್ರಭುತ್ವ ಆಡಳಿತ ಜಾರಿಗೆ ತರಬೇಕೆಂದು ತೀವ್ರ ಹೋರಾಟ ಆರಂಭಗೊಂಡ ಹಿನ್ನೆಲೆಯಲ್ಲಿ, ಆ.24ರಂದು ಹಳೆ ಮೈಸೂರು ಪ್ರಾಂತ್ಯದಲ್ಲಿ ರಾಜರ ಆಳ್ವಿಕೆ ಕೊನೆಗೊಳಿಸಿ ತ್ರಿವರ್ಣ ಧ್ವಜ ಹಾರಿಸಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದಕ್ಕಾಗಿ ಸೆ.1 ರಿಂದ ಅ.14ರವರೆಗೆ ಮೈಸೂರು ಚಲೋ ಚಳವಳಿ ನಡೆದದ್ದು ಈಗ ಇತಿಹಾಸ. ರಾಜಾಳ್ವಿಕೆ ಕೊನೆಯಾಗಿ ಜನಪರ ಸರ್ಕಾರ ರಚನೆಯಾದದ್ದು 1947ರ ಅ.24ರಂದು. ಹಾಗಾಗಿ, ಆ ದಿನವನ್ನು ಮೈಸೂರು ಚಲೋ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು, ಸಂಘದ ಕಾರ್ಯದರ್ಶಿ ರವಿ ಡಿ, ಕಾರ್ಯಾಧ್ಯಕ್ಷ ಯೋಗಾನಂದ, ವೇದಂಬ, ನಾಗರತ್ನ, ಗಿರಿಜಾ, ಅಶ್ವಥ್ ನಾರಾಯಣ್, ಭಾಗ್ಯಲಕ್ಷ್ಮಿ, ಕಮಲಮ್ಮ, ವಿಘ್ನೇಶ್ವರ ಭಟ್, ನಾಗೇಶ್ ಯಾದವ್, ಪಾಪಣ್ಣ, ಚರಣ್, ಸುಕನ್ಯ, ಗೀತಾ, ಮಧು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ವರ್ಗದವರು ಹಾಜರಿದ್ದರು.
key words: Mysore Chalo, Celebration, Laying wreath, Martyr Ramaswamy Memorial.