ಮೈಸೂರು,ಡಿಸೆಂಬರ್,22,2023(www.justkannada.in): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕೋವಿಡ್ ಸಮರಕ್ಕೆ ವೈದ್ಯಾಧಿಕಾರಿಗಳು ಮತ್ತೆ ಸಜ್ಜಾಗುತ್ತಿದ್ದು, ಈ ನಡುವೆ ಜಿಲ್ಲೆಯಲ್ಲಿ ಮುಂದಿನ ವಾರದಿಂದ ಪ್ರತಿದಿನ 1000 ಕೋವಿಡ್ ಟೆಸ್ಟ್ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ.
ಇಂದು ಕೆ.ಆರ್.ಆಸ್ಪತ್ರೆ, ಜಿಲ್ಲಾಸ್ಪತ್ರೆ, ಡಿಎಚ್ ಒ ಅಧೀನ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಯಿತು. ಸಭೆಯಲ್ಲಿ ಕೊರೋನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಿಸಿ ರಾಜೇಂದ್ರ ಖಡಕ್ ಆದೇಶ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆಗಳು ಇರುವವರಿಗೆ ಮಾಸ್ಕ್ ಕಡ್ಡಾಯವಾಗಿದೆ. ಕೋವಿಡ್ ಲಕ್ಷಣ ಇರುವವರು ಕೋವಿಡ್ ಟೆಸ್ಟ್ ಮಾಡಿಸಬೇಕು. ಕೇರಳ ಮತ್ತು ತಮಿಳುನಾಡು ಚೆಕ್ ಪೋಸ್ಟ್ ಗಳಲ್ಲಿ ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ಕೋವಿಡ್ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.
ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ 5 ಬೆಡ್ ಗಳನ್ನು, 2 ಆಕ್ಸಿಜನ್ ವೆಂಟಿಲೇಟರ್ ರೆಡಿ ಇಟ್ಟುಕೊಳ್ಳಬೇಕು. ಮುಂದಿನ ಒಂದು ವಾರದ ನಂತರ ದಿನಕ್ಕೆ ಕನಿಷ್ಠ 1000 ಕೋವಿಡ್ ಟೆಸ್ಟ್ ಮಾಡುವ ಹಾಗೆ ಯೋಜನೆ ರೂಪಿಸಿಕೊಳ್ಳಿ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್, ಜಂಬೋ ಸಿಲಿಂಡರ್, ಅಗತ್ಯ ಮೆಡಿಷಿನ್ ರೆಡಿ ಇಟ್ಟುಕೊಳ್ಳುವಂತೆ ಡಿಸಿಎ ರಾಜೇಂದ್ರ ಸೂಚನೆ ನೀಡಿದರು.
Key words: Mysore- DC -Dr KV Rajendra -instructs – 1000 Covid tests- every day.