ಮೈಸೂರು,ಸೆಪ್ಟಂಬರ್, 16,2020(www.justkannada.in): ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2 ರವರೆಗೆ ಬಿಜೆಪಿ ಪಕ್ಷದ ವತಿಯಿಂದ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ತಿಳಿಸಿದರು.
ನೂತನ ಬಿಜೆಪಿ ಜಿಲ್ಲಾಧ್ಯಕ್ಷೆಯಾದ ಬಳಿಕ ಮೊದಲ ಬಾರಿಗೆ ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಂಗಳಾ ಸೋಮಶೇಖರ್, ಪಕ್ಷದ ವತಿಯಿಂದ ಸೇವಾ ಸಪ್ತಾಹ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮ ಗಾಂಧಿ ಜಯಂತಿ ಕುರಿತಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2 ರವರೆಗೆ ಬಿಜೆಪಿ ಪಕ್ಷದ ವತಿಯಿಂದ ಹಲವು ಕಾರ್ಯಕ್ರಮಗಳ ಆಯೋಜಿಸಲಾಗಿದೆ ಎಂದರು.
ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಜನ್ಮದಿನ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೇವಾ ಸಪ್ತಾಹವನ್ನು ಕೇವಲ ವಾರ ಹಾಗೂ ತಿಂಗಳಿಗೆ ಸೀಮಿತಗೊಳಿಸದೇ ವರ್ಷ ಪೂರ್ತಿ ಸೇವಾಕಾರ್ಯಗಳು ನಡೆಯುವಂತಾಗಬೇಕೆಂದು ಬಿಜೆಪಿಯ ಹಲವು ಘಟಕಗಳ ವತಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ರೈತ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳು ನಡೆಯಲಿವೆ ಎಂದು ಮಂಗಳ ಸೋಮಶೇಖರ್ ತಿಳಿಸಿದರು.
ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತೀ ಮಂಡಲಗಳಲ್ಲಿ 70 ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡಲಾಗುವುದು. ಜೊತೆಗೆ ಪರಿಸರ ಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ಹಲವು ಸೇವಾಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಅಧ್ಯಕ್ಷ ಶ್ರೀವತ್ಸ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಭಾಗಿಯಾಗಿದ್ದರು.
Key words: Organizing- various -social programs – Mysore -BJP -district president -Mangala Somashekhar.