ಮೈಸೂರು ಅಕ್ಟೊಬರ್,20,2023(wwww.justkannada.in): ಇತ್ತೀಚಿನ ಕಾರಾಗೃಹಗಳು ಅಪರಾಧಿಗಳಿಗೆ ದಂಡನೆ ಶಿಕ್ಷೆ ಬಂಧನಗಳನ್ನು ನೀಡುತ್ತಿಲ್ಲ ಬದಲಾಗಿ ಮನಃಪರಿವರ್ತನೆಗೆ ಅವಕಾಶ ಮಾಡಿಕೊಟ್ಟು ಸಮಾಜದಲ್ಲಿ ಶಾಂತಿಯನ್ನು ನಡೆಸುವಂತಹ ಕೆಲಸಗಳನ್ನು ಕಾರಾಗೃಹಗಳು ಮಾಡುತ್ತಿವೆ ಎಂದು ಮೈಸೂರು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀಕ್ಷಕರಾದ ಬಿ.ಎಸ್ ರಮೇಶ್ ಅವರು ತಿಳಿಸಿದರು.
ಇಂದು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ಯೋಗದಸರ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರಾಗೃಹ ವಾಸಿಗಳಿಗೆ ವಿಶಿಷ್ಟ ಯೋಗಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ತನ್ನಿಂದ ತಾನೇ ಬರುವಂತಹ ವಸ್ತುವಲ್ಲ ಅದಕ್ಕೆ ನಿರ್ವಹಣೆಯ ಅವಶ್ಯಕತೆ ಇದೆ. ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಅತಿ ಅವಶ್ಯಕ. ನಾಡ ಹಬ್ಬ ಮೈಸೂರು ದಸರಾ ಸವಿ ನೆನಪು ಕಟ್ಟಿಕೊಳ್ಳಲು ಇಂದು ನಮ್ಮ ಕಾರಾಗೃಹದಲ್ಲಿ ವಿಶಿಷ್ಟ ಯೋಗ ಅಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಂದು ವಿನೂತನ ಪ್ರಯತ್ನ ಎಂದರು.
ದಸರಾ ಉತ್ಸವದ ಜೊತೆಗೆ ಯೋಗದ ಉಪ ಸಮಿತಿ ಈ ಬಾರಿ ಯೋಗ ಉತ್ಸವವನ್ನು ಮಾಡುತ್ತಿದೆ. ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂದು ಯೋಗಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರಾಗೃಹದಲ್ಲಿ ವಾಸಿಸುವ ನೀವುಗಳು ಅಲ್ಪ ಕಾಲಕ್ಕೆ ಮಾತ್ರ ಇಲ್ಲಿ ವಾಸಿಸುತ್ತೀರಾ. ಹಾಗಾಗಿ ಯಾವುದು ಕ್ಷಣಾರ್ಧದಲ್ಲಿ ಮಾಡಿದ ತಪ್ಪಿಗೆ ಸೆರೆಮನೆಯ ವಾಸವನ್ನು ಅನುಭವಿಸುತ್ತಿದ್ದೀರಿ. ಇಲ್ಲಿಂದ ಹೊರಡುವ ಮುನ್ನ ಮನಃಪರಿವರ್ತನೆ ಮಾಡಿಕೊಂಡು ಪ್ರತಿಯೊಬ್ಬರು ಸಮಾಜಕ್ಕೆ ಒಳ್ಳೆಯದನ್ನು ಬಯಸುವಂತಹ ಮನಸ್ಸನ್ನು ಇಟ್ಟು ಹೊರಡಬೇಕು. ವಿವಿಧ ಸಂಘ ಸಂಸ್ಥೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಪೋಷಣೆ ಮಾಡಿ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಮಾಡುವ ಪ್ರಯತ್ನವನ್ನು ಇಂದಿನ ಕಾರಾಗೃಹಗಳು ಮಾಡುತ್ತಿವೆ ಎಂದರು.
ಧಾರ್ಮಿಕ ಉಪನ್ಯಾಸಗಳು, ಕ್ರೀಡೆ ಕುರಿತಾದ ಕಾರ್ಯಕ್ರಮಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಏರ್ಪಡಿಸುವ ಮೂಲಕ ನಿಮ್ಮನ್ನು ಕೂಡ ಸಮಾಜಕ್ಕೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯದ ಭಾಗವಾಗಿ ಯೋಗವನ್ನು ನಿರ್ವಹಿಸಿ ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸಬೇಕು. ಪ್ರತಿನಿತ್ಯವೂ ಕೂಡ ಕಾರಾಗೃಹದಲ್ಲಿ ಯೋಗವನ್ನು ಮಾಡುವುದರ ಮೂಲಕ ಧನಾತ್ಮಕ ಪರಿವರ್ತನೆಯಾಗಿ ಕಾರಾಗೃಹದಿಂದ ಮುಕ್ತಿ ಹೊಂದಿರಿ ಎಂದು ತಿಳಿಸಿದರು.
ಯೋಗದಸರದ ಉಪ ಸಮಿತಿಯ ಅಧ್ಯಕ್ಷರಾದ ದೇವರಾಜ ರವರು ಮಾತನಾಡಿ, ನಿಮ್ಮ ಜೀವನದ ಯಾವುದೋ ಒಂದು ಕಹಿ ಘಟನೆಯಿಂದ ನೀವೆಲ್ಲರೂ ಸೆರೆಮನೆ ವಾಸವನ್ನು ಅನುಭವಿಸುತ್ತಿದ್ದೀರಾ. ಮನುಷ್ಯನಾದವನು ಕಹಿ ಘಟನೆ ಮತ್ತು ಕಹಿ ಕ್ಷಣಗಳನ್ನು ಮರೆತು ಮುಂದೆ ಸಾಗಬೇಕು. ಅದೇ ರೀತಿಯಾಗಿ ನೀವು ಕೂಡ ಇಲ್ಲಿಂದ ಹೊರಡುವಾಗ ಉತ್ತಮ ನಾಗರಿಕರಾಗಿ ಹೊರಡಬೇಕು. ಯೋಗವು ಮನುಷ್ಯನನ್ನು ಹೇಗೆ ಬದಲಾಯಿಸುತ್ತದೆ ಎಂಬುವುದರ ಬಗ್ಗೆ ತಿಳಿಯಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಒಂದು ತಿಂಗಳಿಂದ ನೀವೆಲ್ಲರೂ ಯೋಗಭ್ಯಾಸವನ್ನು ಮಾಡಿದ್ದೀರಿ ನಿಮ್ಮಲ್ಲಿ ಸ್ವಲ್ಪಮಟ್ಟಿಗಾದರೂ ಬದಲಾವಣೆ ಆಗಿದೆ ಎಂದು ಭಾವಿಸಿದ್ದೇನೆ. ಪ್ರತಿನಿತ್ಯವೂ ಯೋಗ ಮಾಡುವುದರ ಮೂಲಕ ಋಣಾತ್ಮಕ ಚಿಂತನೆಯನ್ನು ತೊಳಗಿಸಿ ಧನಾತ್ಮಕ ಚಿಂತನೆಯತ್ತ ಮುಖ ಮಾಡಿ ಎಂದರು.
ಯೋಗಭ್ಯಾಸದ ಕುರಿತು ಅಭಿಪ್ರಾಯ ಹಂಚಿಕೊಂಡ ಕಾರಾಗೃಹದ ವಾಸಿಗಳು ಯೋಗದಿಂದ ನಮ್ಮ ಮನಸ್ಸು ದೇಹ ಸಮ ಸ್ಥಿತಿಯಲ್ಲಿರುತ್ತದೆ. ಧ್ಯಾನದ ಮೂಲಕ ನಮ್ಮ ಮಾನಸಿಕ ಚಿಂತೆಯನ್ನು ದೂರ ಮಾಡಬಹುದು. ಯೋಗವು ಸಕಲ ರೋಗಗಳಿಂದ ಸಂರಕ್ಷಣೆಯ ಮಂತ್ರವಾಗಿದೆ. ಮುಂದಿನ ದಿನಗಳಲ್ಲಿ ಯೋಗವನ್ನು ಚಿಕ್ಕ ವಯಸ್ಸಿನಿಂದ ಅಭ್ಯಾಸ ಮಾಡುವುದು ಉತ್ತಮ. ಹೀಗೆ ಮಾಡಿದರೆ ದೀರ್ಘಾಯುಷಿಯಾಗಿ ಬದುಕಬಹುದು. ಪೂಜೆಗೆ ಒಂದು ದೇವಾಲಯ, ಓದಿಗೊಂದು ಗ್ರಂಥಾಲಯ, ಅದೇ ರೀತಿಯಾಗಿ ಉತ್ತಮ ಆರೋಗ್ಯಕ್ಕಾಗಿ ಒಂದು ಯೋಗಾಲಯವಿರಬೇಕು ಎಂದು ತಿಳಿಸಿದರು.
ಕಳೆದ ಒಂದು ತಿಂಗಳಿಂದ ಕಾರಾಗೃಹದಲ್ಲಿ ಯೋಗ ತರಬೇತಿಯನ್ನು SPYSS ಸಂಸ್ಥೆಯಿಂದ ನೀಡಲಾಗಿತ್ತು. ಸುಮಾರು 300 ಸೆರೆಮನೆ ವಾಸಿಗರು ಎರಡು ಗಂಟೆಗಳ ಕಾಲ ಯೋಗವನ್ನು ಅಭ್ಯಾಸ ಮಾಡಿದರು. ಚಾಮರಾಜನಗರ ಜಿಲ್ಲಾ ಆಡಳಿತ, ಆಯುಷ್ ಸಂಸ್ಥೆಯ ಸದಸ್ಯರು, ದಸರಾ ಯೋಗ ಉಪಸಮಿತಿಯ ಸದಸ್ಯರು ಎಲ್ಲರೂ ಕೂಡ ಯೋಗ ಮಾಡಿ ಸಿಹಿ ಹಂಚಿ ಯೋಗ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಕಾರಾಗೃಹದ ಕಾರ್ಯನಿರ್ವಾಹದ ದಾಮೋದರ್ ,ಯೋಗ ದಸರಾ ಉಪ ಸಮಿತಿಯ ಉಪಾಧ್ಯಕ್ಷ ಮಹೇಶ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಕೆ ರಮ್ಯಾ, ಯೋಗ ದಸರಾ ಉಪ ಸಮಿತಿಯ ಕಾರ್ಯಧ್ಯಕ್ಷರಾದ ಡಿ.ಎಮ್ ರಾಣಿ, ಹಾಗೂ ಕಾರ್ಯದರ್ಶಿ ಡಾ.ಪುಷ್ಪಾ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು, ಯೋಗ ಶಿಕ್ಷಣ ಮತ್ತು ಸಂಶೋಧನೆಯ ಸದಸ್ಯರು, ಮತ್ತು ಯೋಗ ದಸರಾ ಉಪ ಸಮಿತಿಯ ಸದಸ್ಯರು ಹಾಜರಿದ್ದರು.
Key words: Prisons -places – transformation-yoga-mysore-jail-BS Ramesh