ಮೈಸೂರು,ಅಕ್ಟೋಬರ್,17,2024 (www.justkannada.in): ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ತಲೆ ಎತ್ತುತ್ತಿರುವ ಬೃಹತ್ ವಸತಿ ಸಮುಚ್ಛಯ (ಅಪಾರ್ಟ್ಮೆಂಟ್) ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ಮೈಸೂರಿನ ಚಾಮುಂಡಿ ಬೆಟ್ಟ ನಾಡ ಅಧಿದೇವತೆ ಚಾಮುಂಡೇಶ್ವರಿಯ ನೆಲೆಯಾಗಿದ್ದು, ಇದು ಮೈಸೂರಿನ ಪರಂಪರೆಯ ಪ್ರತೀಕವಾಗಿದೆ. ಸುಂದರ ಕಾನನವನ್ನು ಸುತ್ತುವರೆದಿದೆ. ಇತ್ತೀಚಿನ ದಿನಗಳಲ್ಲಿ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿದ್ದು, ಈಗಾಗಲೇ ಅಲ್ಲಲ್ಲೇ ಕುಸಿಯುತ್ತಿರುವ ಬೆಟ್ಟವು ಮುಂದೊಂದು ದಿನ ಕೇರಳದ ವಯನಾಡು ಹಾಗೂ ಕೊಡುಗು ಜಿಲ್ಲೆಯ ಮಾದರಿಯಲ್ಲಿ ಭಾರೀ ಕುಸಿತ ಎದುರಿಸಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪಾರಂಪರಿಕ ಪ್ರಿಯರು ಹಾಗೂ ಬೆಟ್ಟದ ಭಕ್ತಾದಿಗಳು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಬೆಟ್ಟವನ್ನು ಕಾಪಾಡಿಕೊಳ್ಳಬೇಕು. ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರಗಳು ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದು ಬೆಟ್ಟದ ಸುತ್ತ ಖಾಸಗಿ ಬಡಾವಣೆ, ಬೃಹತ್ ವಸತಿ ಸಮುಚ್ಛಯಗಳು ತಲೆ ಎತ್ತಲು ಕಾರಣವಾಗುತ್ತಿದ್ದು, ಅತ್ಯಂತ ಆತಂಕದ ಸಂಗತಿಯೆಂದರೆ 1 ಅಥವಾ 2 ಅಂತಸ್ತಿನ ಕಟ್ಟಡ ತಲೆಯೆತ್ತುತ್ತಿದ್ದ ಸ್ಥಳದಲ್ಲಿ ಇದೀಗ ಹೆಸರಾಂತ ವಸತಿ ನಿರ್ಮಾಣ ಸಂಸ್ಥೆಯೊಂದು ಮಹಾರಾಣಾ ಪ್ರತಾಪ ರಸ್ತೆಯಲ್ಲಿ (ಗಾಲ್ಫ್ ಕ್ಲಬ್ ನಿಂದ 500 ಮೀಟರ್ ಅಂತರದಲ್ಲಿ) ಎಂಟು ಅಂತಸ್ತಿನ ಬೃಹತ್ ವಸತಿ ಸಮುಚ್ಛಯ (ಅಪಾರ್ಟ್ಮೆಂಟ್) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಇಡೀ ಬೆಟ್ಟದ ಸೌಂದರ್ಯವನ್ನೇ ಈ ಅಪಾರ್ಟ್ಮೆಂಟ್ ಆಕ್ರಮಿಸಿಕೊಳ್ಳುವುದಲ್ಲದೇ ಭವಿಷ್ಯತ್ತಿನಲ್ಲಿ ಇದರಿಂದ ಬೆಟ್ಟದ ಅಸ್ತಿತ್ವಕ್ಕೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಎಂದು ರಘು ಕೌಟಿಲ್ಯ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ವ್ಯವಸ್ಥಿತವಾಗಿ ಅನೇಕರು ಬೆಟ್ಟದ ಸುತ್ತ ಎಕರೆಗಟ್ಟಲೆ ಜಾಗವನ್ನು ತಮ್ಮದಾಗಿಸಿಕೊಂಡಿದ್ದು, ಖಾಸಗಿ ವಸತಿ ಸಮುಚ್ಚಯಗಳು ತಲೆ ಎತ್ತಲು ಸದ್ಯ ನಿರ್ಮಾಣ ಕಾರ್ಯ ಆರಂಭಿಸಿರುವ ಅಪಾರ್ಟ್ಮೆಂಟ್ ನಾಂದಿ ಹಾಡುತ್ತಿದೆ. ನಾವು ದಸರೆಯನ್ನು ಆಚರಿಸುತ್ತೇವೆ, ನಾಡದೇವತೆಯೆಂದು ಚಾಮುಂಡಿಯನ್ನು ಪೂಜಿಸುತ್ತೇವೆ, ಚಾಮುಂಡಿ ಬೆಟ್ಟವು ದಿನದಿಂದ ದಿನಕ್ಕೆ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿ ಒಂದು ಬಹುದೊಡ್ಡ ದೈವಶೃದ್ಧೆ ಹಾಗೂ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಇಡೀ ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಬೇಕೆಂದು ಸರ್ಕಾರ ಈಗಾಗಲೇ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದು ಕಾರ್ಯಾರಂಭ ಮಾಡಿದೆ. ಈ ಸಂಬಂಧ ತಕರಾರುಗಳು ಏನೇ ಇರಬಹುದು, ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಈ ಪ್ರಾಧಿಕಾರದ ಮೂಲಕ ಇಡೀ ಬೆಟ್ಟದ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ, ಇದರ ಸುತ್ತಮುತ್ತಲ ಕನಿಷ್ಠ 3 ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಕಟ್ಟಡಗಳು ತಲೆ ಎತ್ತದಂತೆ ತುರ್ತು ಕ್ರಮ ವಹಿಸಬೇಕೆಂದು ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.
ಸರ್ಕಾರ ಘೋಷಿಸಲ್ಪಟ್ಟಿರುವ ಪಾರಂಪರಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಸ್ತಿತ್ವದಲ್ಲಿರುವ ಪಾರಂಪರಿಕ ರಕ್ಷಣಾ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಚಾಮುಂಡಿ ಬೆಟ್ಟ ಹಾಗೂ ಸುತ್ತಲಿನ ಪ್ರದೇಶವನ್ನೂ ಸಹ ಪಾರಂಪರಿಕ ಸ್ಥಳವೆಂದು ಈಗಾಗಲೇ ಘೋಷಿಸಲ್ಪಟ್ಟಿದೆ. ಆದರೆ ನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳು ಈ ಸಂಬಂಧ ಪಾರಂಪರಿಕ ಸಮಿತಿಯ ಅನುಮತಿಯನ್ನು ಪಡೆಯದೇ ಕಟ್ಟಡಗಳು ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಿವೆ. ಈ ಹಿಂದಿನ ಜಿಲ್ಲಾಧಿಕಾರಿಗಳು ಸಹ ಈ ಬಗ್ಗೆ ನಿಗಾ ವಹಿಸುವಲ್ಲಿ ನಿರಾಸಕ್ತಿ ತೋರಿದ್ದಾರೆ. ಈಗಿನ ಜಿಲ್ಲಾಧಿಕಾರಿಗಳಾದರೂ ಈ ಕೂಡಲೇ ಮಧ್ಯ ಪ್ರವೇಶಿಸಿ, ಪಾರಂಪರಿಕ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೇ ನಿರ್ಮಾಣವಾಗುತ್ತಿರುವ ಹಾಗೂ ನಿರ್ಮಾಣವಾಗಿರುವ ಕಟ್ಟಡಗಳ ನಿರ್ಮಾಣದ ಅನುಮತಿಯನ್ನು ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಲಿ. ಅದರಲ್ಲೂ ಈ ಕೂಡಲೇ ಇಷ್ಟರಲ್ಲೇ ತಲೆಯೆತ್ತಲಿರುವ 8 ಅಂತಸ್ತಿನ ಬೃಹತ್ ವಸತಿ ಸಮುಚ್ಛಯದ ನಿರ್ಮಾಣ ಕಾರ್ಯವನ್ನು ತಡೆದು, ಅದಕ್ಕೆ ನೀಡಿರುವ ಪರವಾನಿಗೆಯನ್ನು ರದ್ದು ಪಡಿಸಲಿ ಎಂದು ರಘು ಕೌಟಿಲ್ಯ ಆಗ್ರಹಿಸಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡಗಳೀಗ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಕೇಂದ್ರ ಸರ್ಕಾರ ಹೊರತುಪಡಿಸಿದಂತೆ ಉಳಿದ ಪಾರಂಪರಿಕ ಕಟ್ಟಡಗಳು ಸರಿಯಾದ ನಿರ್ವಹಣೆಯಿಲ್ಲದೇ ಸೊರಗುತ್ತಿವೆ, ಸ್ವತಃ ಮೈಸೂರು ಅರಮನೆ ಸೂಕ್ತ ಸಂರಕ್ಷಣಾ ವ್ಯವಸ್ಥೆಯಿಲ್ಲದೇ ದಿನದಿಂದ ದಿನಕ್ಕೆ ಅಸ್ಥಿರತೆಯ ಹಾದಿಯನ್ನು ತುಳಿದಿದೆ. ಕೆಲವು ಶಕ್ತಿಗಳು ಸಾವಿರಾರು ಪಾರಿವಾಳಗಳಿಗೆ ಆಹಾರವನ್ನು ಚೆಲ್ಲುವ ಮೂಲಕ ಅರಮನೆಯ ಸೌಂದರ್ಯಕ್ಕೂ ಗಂಡಾಂತರ ತರುತ್ತಿದ್ದಾರೆ.
ಮೈಸೂರು ಎಂದರೆ ಪರಂಪರೆ-ಸಂಸ್ಕೃತಿ. ಈ ಪರಂಪರೆ-ಸಂಸ್ಕೃತಿಯನ್ನು ಪ್ರತಿಬಿಂಬಿಸುವುದು ಪಾರಂಪರಿಕ ಕಟ್ಟಡಗಳು ಹಾಗೂ ಅರಮನೆ. ಇದಕ್ಕೆ ತಿಲಕವಿಟ್ಟಂತೆ ಮೈಸೂರಿನ ಹೆಗ್ಗುರುತಾಗಿರುವುದು ತಾಯಿ ಚಾಮುಂಡಾಂಬಿಕೆಯ ಸನ್ನಿಧಿಯಿರುವ ಚಾಮುಂಡಿ ಬೆಟ್ಟ. ಆದರೆ ಈ ಚಾಮುಂಡಿ ಬೆಟ್ಟವನ್ನು ಕಳೆದ ಮೂರ್ನಾಲ್ಕು ದಶಕಗಳಿಂದಲೂ ನೆಲದಾಹಿ ಶಕ್ತಿಗಳು ಭೂ ಆಕ್ರಮಣ ಮಾಡುತ್ತಿವೆ. ಅದರ ಮುಂದುವರೆದ ಭಾಗವಾಗಿ ಈ ಭೂ ಆಕ್ರಮಣವಾಗಿರುವ ಜಾಗಗಳಲ್ಲಿ ಬಡಾವಣೆಗಳು ಹಾಗೂ ಬೃಹತ್ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ.
ಚಾಮುಂಡೇಶ್ವರಿ ಕ್ಷೇತ್ರವನ್ನೇ ಈ ಹಿಂದೆ ಪ್ರನಿಧಿಸುತ್ತಿದ್ದ ಮುಖ್ಯಮಂತ್ರಿಗಳು ಪಾರಂಪರಿಕ ಅಭಿವೃದ್ಧಿಗೆ ಯಾವ ಕೊಡುಗೆಯನ್ನು ನೀಡಿಲ್ಲ, ಈಗಲೂ ನೀಡುತ್ತಿಲ್ಲ. ಸದ್ಯ ಚಾಮುಂಡಿ ಬೆಟ್ಟ ಹಾಗೂ ಅದರ ಸುತ್ತ ಮುತ್ತಲ ಪರಿಸರವನ್ನಾದರೂ ಉಳಿಸಿ, ಚಾಮುಂಡಿ ಬೆಟ್ಟವನ್ನು ರಕ್ಷಿಸಲಿ ಎಂದು ಒತ್ತಾಯಿಸುತ್ತೇವೆ. ಸದ್ಯ ನಿರ್ಮಾಣವಾಗುತ್ತಿರುವ ಬೃಹತ್ ವಸತಿ ಸಮುಚ್ಛಯಕ್ಕೆ ನಿರಾಪೇಕ್ಷಣಾ ಪತ್ರ ನೀಡಿರಬಹುದಾದ ಅರಣ್ಯಾಧಿಕಾರಿಗಳು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ, ಪರಿಸರ ಇಲಾಖೆಯ ಅಧಿಕಾರಿಗಳು ಹಾಗೂ ಅನುಮತಿಸಿದ ಯೋಜನಾ ಪ್ರಾಧಿಕಾರ, ಮುಡಾ, ಚೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ ರಘು ಕೌಟಿಲ್ಯ.
ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ತಡೆಗಟ್ಟಬೇಕು. ಇದೇ ರೀತಿಯಲ್ಲಿ ಇತರ ಬಡಾವಣೆ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುತ್ತೇನೆ. ಚಾಮುಂಡಿ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ಬಂದರೆ ಇಡೀ ಮೈಸೂರು ನಗರ ಪ್ರಾಕೃತಿಕ ವಿಕೋಪಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಎದುರಿಸಿ, ತೊಂದರೆಗೆ ಸಿಲುಕಲಿದೆ. ಮೈಸೂರಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ಈ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟದ ಹಾಗೂ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸಲು ದನಿ ಎತ್ತುವಂತೆ ಈ ಸಂದರ್ಭದಲ್ಲಿ ವಿನಂತಿಸುವೆ ಎಂದಿದ್ದಾರೆ.
ಮೈಸೂರು ಜನತೆ, ಜನಪರ ಕಾಳಜಿಯ ಸಂಘ-ಸಂಸ್ಥೆಗಳಲ್ಲಿ ಹಾಗೂ ರಾಜಕೀಯ ಸಂಘಗಳಲ್ಲಿ ವಿನಮ್ರ ವಿನಂತಿಯೆಂದರೆ, ಅಭಿಪ್ರಾಯ ಭೇದಗಳನ್ನು ಬದಿಗೊತ್ತಿ, ಮೈಸೂರು ಪರಂಪರೆ, ಪಾರಂಪರಿಕ ಕಟ್ಟಡಗಳನ್ನು ಉಳಿಸಿ, ಮೈಸೂರು ನಗರವನ್ನು ಯೋಜಿತವಾಗಿ ಬೆಳೆಸುವ ಹಾಗೂ ಚಾಮುಂಡಿ ಬೆಟ್ಟವನ್ನು ಉಳಿಸುವ ಕಾರ್ಯಕ್ಕೆ ಒಟ್ಟಾಗಿ ನಿಂತು ಹೋರಾಡಬೇಕು ಎಂದು ರಘು ಕೌಟಿಲ್ಯ ಮನವಿ ಮಾಡಿದ್ದಾರೆ.
Key words: Raghu Kautilya, stop, construction, apartments, Chamundi Hill