ನವದೆಹಲಿ:ಜೂ-6:(www.justkannada.in) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರದ 8 ಸಂಪುಟ ಸಮಿತಿಗಳನ್ನು ಪುನರ್ ರಚಿಸಲಾಗಿದ್ದು, ಅದರಲ್ಲಿ ಮೊದಲ ಬಾರಿಗೆ ಮಂತ್ರಿಯಾಗಿರುವ ಅಮಿತ್ ಶಾ ಅವರಿಗೆ ಎಲ್ಲಾ 8 ಸಮಿತಿಯಲ್ಲೂ ಸ್ಥಾನ ನೀಡಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಅವರನ್ನು ಪ್ರಮುಖ ಸಮಿತಿಯಿಂದಲೇ ದೂರವಿಡಲಾಗಿದೆ.
8 ಸಂಪುಟ ಸಮಿತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 6 ಸಂಪುಟ ಸಮಿತಿಗಳಲ್ಲಿದ್ದ ಇದ್ದರೆ, ಗೃಹ ಸಚಿವ ಅಮಿತ್ ಷಾ ಎಲ್ಲ 8 ಸಮಿತಿಗಳಲ್ಲೂ ಇದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಸಂಪುಟ ಸಮಿತಿಗಳಲ್ಲಿದ್ದರೆ, ರೈಲ್ವೆ ಸಚಿವ ಪಿಯೂಶ್ ಗೋಯೆಲ್ 5 ಸಮಿತಿಗಳಲ್ಲಿ ಇದ್ದಾರೆ. ಆದರೆ ಎನ್ಡಿಎ 1ರಲ್ಲಿ ಗೃಹ ಸಚಿವರಾಗಿದ್ದು, ಎನ್ಡಿಎ 2ನಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಅವರಿಗೆ ಕೇವಲ ಎರಡು ಸಂಪುಟ ಸಮಿತಿಗಳಲ್ಲಿ ಮಾತ್ರ ಸ್ಥಾನ ನೀಡಲಾಗಿದೆ. ವಿಶೇಷವಾಗಿ ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯಲ್ಲಿ ರಾಜನಾಥ್ ಅವರಿಗೆ ಸ್ಥಾನ ನೀಡದೇ ಇರುವುದು ಕುತೂಹಲಗಳಿಗೆ ಕಾರಣವಾಗಿದೆ.
ಸರ್ಕಾರದ ನೀತಿಯ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಾಗಿ ಈ ಸಮಿತಿಯಲ್ಲಿ ರಕ್ಷಣಾ ಸಚಿವರ ಉಪಸ್ಥಿತಿ ಪ್ರಮುಖವಾಗಿರುತ್ತದೆ. ಆದರೆ, ಈ ಸಮಿತಿಯಲ್ಲಿ ರಾಜನಾಥ್ ಸಿಂಗ್ ಹೊರತುಪಡಿಸಿ ಗೃಹ ಸಚಿವ ಅಮಿತ್ ಷಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರ ಎಲ್ಲ ಸಚಿವರಿಗೂ ಸ್ಥಾನ ನೀಡಲಾಗಿದೆ. ಮೋದಿ ಸರ್ಕಾರದ ಈ ನಡೆ ಹಲವು ಅಚ್ಚರಿಗೆ ಎಡೆಮಾಡಿಕೊಟ್ಟಿದೆ.