ಮೈಸೂರು,ಸೆಪ್ಟಂಬರ್,20,2021(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಪದವೀಧರ ಮತದಾರರನ್ನು ನೋಂದಣಿ ಮಾಡುವ ಕಾರ್ಯಕ್ಕೆ ಇನ್ನೊಂದು ವಾರದೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲೂ ಅಭ್ಯರ್ಥಿ ಆಯ್ಕೆಯಾಗದೆ ಇರುವ ಕಾರಣ ಯಾರಿಗೆ ಟಿಕೆಟ್ ದೊರೆಯಲಿದೆ ಎನ್ನುವ ಕುತೂಹಲ ಮೂಡಿಸಿದೆ.
ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ಮತದಾರರ ನೋಂದಣಿ ಪ್ರಕ್ರಿಯೆ ಶುರುವಾಗಬೇಕಿದ್ದು, ಆದರೆ, ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ತಯಾರಿ ಮಾಡಿಕೊಂಡಿದ್ದಾರೆ. 2020ರ ಜೂನ್ ೨೦ಕ್ಕೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಸದಸ್ಯರ ಅವಧಿ ಮುಗಿಯಲಿದ್ದು, ಅಲ್ಲಿಯವರೆಗೆ ಚುನಾವಣೆ ನಡೆಸಬೇಕಾಗಿದೆ. ಹೀಗಾಗಿ,ಕೇಂದ್ರ ಚುನಾವಣಾ ಆಯೋಗವು ಮೂರು ಹಂತಗಳಲ್ಲಿ ಪದವೀಧರ ಮತದಾರರ ನೋಂದಣಿ ಪ್ರಕ್ರಿಯೆಗೆ ಅವಕಾಶ ನೀಡಲಿದ್ದು, ಸೆಪ್ಟಂಬರ್ ಮೂರನೇ ಅಥವಾ ಕೊನೆಯ ವಾರದಲ್ಲಿ ಮೊದಲ ಅಧಿಸೂಚನೆ ಹೊರಡಿಸುವುದು ಖಚಿತವಾಗಿದೆ. ನಂತರ ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಮತ್ತೆ ಅವಕಾಶ ಕೊಡಲಾಗುತ್ತದೆ. ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು,ಚಾಮರಾಜನಗರ,ಮಂಡ್ಯ,ಹಾಸನ ಜಿಲ್ಲೆಗಳು ಬರಲಿದ್ದು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ತಹಸಿಲ್ದಾರ್ ಗಳು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಮತದಾರರ ನೋಂದಣಿ ಕಾರ್ಯವನ್ನು ಅಂತಿಮಗೊಳಿಸಲಿದ್ದಾರೆ.
ಆನ್ ಲೈನ್ ಮತ್ತು ಆಫ್‌ಲೈನ್ ನೋಂದಣಿ…
ಕೇಂದ್ರ ಚುನಾವಣಾ ಆಯೋಗವು ಮತದಾರರ ನೋಂದಣಿಗೆ ಈ ಬಾರಿ ಆನ್‌ಲೈನ್ ಮತ್ತು ಆಫ್‌ಲೈನ್ ನಲ್ಲಿ ಅವಕಾಶ ಕಲ್ಪಿಸುವುದಕ್ಕೆ ನಿರ್ಧರಿಸಿದ್ದು,ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವ ಕೆಲಸ ನಡೆದಿದೆ. ಆಯೋಗವು ನೀಡುವ ಮತದಾರರ ನೋಂದಣಿ ಫಾರಂನ್ನು ಆಕಾಂಕ್ಷಿಗಳು ಸೇರಿದಂತೆ ಯಾವುದೇ ವ್ಯಕ್ತಿಗಳು ಪಡೆದುಕೊಂಡು ಕ್ರಮವಾಗಿ ನೋಂದಣಿ ಮಾಡಿಸಬೇಕು. ಕಳೆದ ಬಾರಿಯ ಫಾರಂನ್ನು ಬದಲಿಸಿ ಹೊಸದಾಗಿ ಬಿಡುಗಡೆಯಾದ ಫಾರಂನಲ್ಲೇ ನೋಂದಣಿ ಮಾಡಿಸಬೇಕಿರುವ ಕಾರಣ ಅಧಿಸೂಚನೆ ಹೊರಡಿಸುವುದನ್ನು ಕಾದು ಕುಳಿತುಕೊಳ್ಳುವಂತಾಗಿದೆ. ಫಾರಂನ್ನು ಭರ್ತಿ ಮಾಡುವಾಗ ಒಂದು ಪದ ವ್ಯತ್ಯಾಸವಾದರೂ ತಿರಸ್ಕಾರವಾಗುವ ಕಾರಣ ಬಹಳ ಜಾಗ್ರತೆಯಿಂದ ಮಾಡಬೇಕಿದ್ದು,ಅದಕ್ಕಾಗಿಯೇ ಆಯಾಯ ಪಕ್ಷಗಳ ಅಭ್ಯರ್ಥಿಗಳು ಪ್ರಮುಖರಿಗೆ ಜವಾಬ್ದಾರಿ ನೀಡಿ ನೋಂದಣಿ ಕೆಲಸ ಮಾಡಿಸಬೇಕಾಗಿದೆ.
ಟಿಕೆಟ್ ಗಾಗಿ ಪೈಪೋಟಿ..
ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿರುವ ಪರಿಷತ್ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಪಡೆಯಲು ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ನಿಂದ ಮಂಡ್ಯ ಜಿಲ್ಲೆಯ ವಿಧಾನ ಪರಿಷತ್ ಮಾಜಿ ಸದಸ್ಯ ಮಧುಮಾದೇಗೌಡ, ಮೈಸೂರು ಜಿಲ್ಲೆಯ ಮಾಜಿ ಶಾಸಕ ಬನ್ನೂರು ಕೃಷ್ಣಪ್ಪ ಪುತ್ರ ಡಾ.ರವಿ, ವೈದ್ಯಕೀಯ ಸೆಲ್ ನ ಡಾ.ಭರತ್ ಆಕಾಂಕ್ಷಿಗಳಾಗಿದ್ದು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ನಾಯಕರು ತಮ್ಮ ತಮ್ಮ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಮಧುಮಾದೇಗೌಡ ಅವರಿಗೆ ಅಂತಿಮವಾಗಿದ್ದರೂ, ಡಾ.ರವಿ ಕೃಷ್ಣಪ್ಪ ಪರವಾಗಿ ಅನೇಕರು ಒತ್ತಡ ಹೇರುತ್ತಿರುವುದರಿಂದ ಘೋಷಣೆ ಮಾಡಿಲ್ಲ ಎನ್ನಲಾಗಿದೆ. ಬಿಜೆಪಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು,ಈಗಾಗಲೇ ಎರಡು ಪೂರ್ವಭಾವಿ ಸಭೆಗಳನ್ನು ನಡೆಸಿ ಚುನಾವಣೆ ಎದುರಿಸಲು ತಯಾರಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮೈ.ವಿ.ರವಿಶಂಕರ್ ಅವರು ಈ ಬಾರಿ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗೋ.ಮಧುಸೂದನ್ ಬದಲಿಗೆ ಟಿಕೆಟ್ ಪಡೆಯಲು ಸಫಲವಾಗಿದ್ದ ಮೈ.ವಿ.ರವಿಶಂಕರ್ ಗೆಲುವು ಕಾಣುವಲ್ಲಿ ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಕಾರಣ ಮತ್ತೊಮ್ಮೆ ಸ್ಪರ್ಧೆಗೆ ಅಣಿಯಾಗಿದ್ದಾರೆ.
ಮತ್ತೊಂದೆಡೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಆಕಾಂಕ್ಷಿಯಾಗಿದ್ದು, ಮತದಾರರ ನೋಂದಣಿಗೆ ಅಧಿಸೂಚನೆ ಹೊರಡಿಸಿದ ಬಳಿಕ ಅಖಾಡಕ್ಕೆ ಇಳಿಯಲು ಅಣಿಯಾಗಿದ್ದಾರೆ. ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದ ಗೋ.ಮಧುಸೂದನ ಅವರಿಗೆ ಕಳೆದ ಬಾರಿ ಟಿಕೆಟ್ ಕೈತಪ್ಪಿ ಮೈ.ವಿ.ರವಿಶಂಕರ್ ಗೆ ಟಿಕೆಟ್ ಕೊಟ್ಟಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಸೋತು ಜಾ.ದಳದ ಅಭ್ಯರ್ಥಿ ಕೆ.ಟಿ.ಶ್ರೀಕಂಠೇಗೌಡ ಜಯಗಳಿಸಿದ್ದರು. ಹೀಗಾಗಿ, ಈ ಬಾರಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಟಿಕೆಟ್ ಪಡೆಯುವ ಯತ್ನದಲ್ಲಿದ್ದಾರೆ. ಜಾ.ದಳದಲ್ಲಿ ಹಾಲಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಕಣದಿಂದ ಹಿಂದೆ ಸರಿದರೆ ಕೀಲಾರ ಜಯರಾಂ ಅವರಿಗೆ ಟಿಕೆಟ್ ಕೊಡುವಂತೆ ಒಂದು ಗುಂಪು ಒತ್ತಡ ಹೇರುತ್ತಿದ್ದರೆ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಗುಂಪು ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಎಚ್.ಕೆ.ರಾಮು ಅವರ ಪರವಾಗಿ ನಿಂತಿದೆ. ಕೆ.ಟಿ.ಶ್ರೀಕಂಠೇಗೌಡರು ಇದುವರೆಗೂ ಕಣದಿಂದ ಹಿಂದೆ ಸರಿಯುವ ಮಾತನ್ನು ಬಹಿರಂಗವಾಗಿ ಹೇಳದೆ ಇದ್ದರೂ, ಕೀಲಾರ ಜಯರಾಂ ಅವರ ಪರ ನಿಂತಿರುವುದನ್ನು ಗಮನಿಸಬಹುದಾಗಿದೆ.
ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಈ ಬಾರಿ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ವರ್ಷ ಇರುವ ಮುನ್ನವೇ ಪೂರ್ವಭಾವಿ ಸಭೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದೆ. ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚುನಾವಣೆಯನ್ನು ಗೆಲ್ಲುವ ಬಗ್ಗೆ ನಿರ್ಧರಿಸಿದ್ದು, ನಾಲ್ಕು ಜಿಲ್ಲೆಗಳಲ್ಲಿ ಪದವೀಧರರನ್ನು ಹೆಚ್ಚು ನೋಂದಣಿ ಮಾಡಿಸಲು ಗುರಿ ನೀಡಲಾಗಿದೆ.
Key words: Registration -graduates – election -Southern -Graduate -constituency.
ENGLISH SUMMARY…
Graduates Constituency elections: One each from BJP-JDS and three from Cong. fight for ticket
Mysuru, September 20, 2021 (www.justkannada.in): According to reliable sources, the notification for the registration of graduate voters for the South Graduates Constituency Election will be issued within a week. As candidates have not been finalized in all three parties, it has triggered curiosity.
The Central Election Commission is supposed to issue the orders for the Graduates Constituency Elections to be held in six states of the country, including Karnataka. Registration of graduate voters is supposed to begin soon after issuing the notification by the Election Commission. In the meantime, the ticket aspirants are involved in making preparations by conducting meetings.
The Election Commission is supposed to allow registration of graduate voters in three phases and will issue the notification in the third week of September or the last week probably. Registration will begin again in December this year and February next year. The Mysuru, Chamarajanagara, Mandya, Hassan Districts come under the South Graduates Constituency limits. The Deputy Commissioners of the respective Districts and Taluk Tahsildars will finalize the registration of voters by functioning as the Election Officers.
The Election Commission has allowed online and offline registration of the voters this year, and preparations are being made for the same. The aspirants and all other people concerned shall download the registration forms and perform the registration process as specified. As changes have been made to the old form as per notification, new forms are awaited.
Keywords: Elections/ South Graduates Constituency/ voter registration