ಹಿರಿಯ ಐಎಫ್‌ಎಸ್‌ ಅಧಿಕಾರಿ  ಡಾ.ಪಿ.ರಮೇಶ್‌ ಕುಮಾರ್‌ ಗೆ ‘ಎಕೋ ವಾರಿಯರ್‌ ಪ್ರಶಸ್ತಿ’

ಬೆಂಗಳೂರು,ಸೆಪ್ಟಂಬರ್,13,2024 (www.justkannada.in): ಕರ್ನಾಟಕ ಹುಲಿ ಯೋಜನೆ ನಿರ್ದೇಶಕ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹಿರಿಯ ಐಎಫ್‌ಎಸ್‌ ಅಧಿಕಾರಿ  ಡಾ.ಪಿ.ರಮೇಶ್‌ ಕುಮಾರ್‌ ಅವರಿಗೆ  2024ನೇ ಸಾಲಿನ ಎಕೋ ವಾರಿಯರ್‌ ಪ್ರಶಸ್ತಿ ಲಭಿಸಿದೆ.

ದೆಹಲಿಯ ಜನಪತ್‌ ನಲ್ಲಿರುವ ಡಾ.ಅಂಬೇಡ್ಕರ್‌ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಡಾ.ರಮೇಶ್‌ ಕುಮಾರ್‌ ಅವರಿಗೆ ಕೇಂದ್ರ ಸರ್ಕಾರವು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರತಿ ವರ್ಷ ಅರಣ್ಯದ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ರಕ್ಷಣೆ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಂತ್ರಜ್ಞಾನ ಬಳಕೆ ಹಾಗೂ ಸಮುದಾಯದ ಸಂಪರ್ಕ ಸೇರಿ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಭಾರತದ ಐಎಫ್‌ಎಸ್‌ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ವನ್ಯಜೀವಿ ಸಂಕ್ಷರಣೆ(Wildlife Conservation) ಅಡಿ ಡಾ.ರಮೇಶ್‌ ಕುಮಾರ್‌ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ನಾಗರಹೊಳೆ, ಕುದುರೆಮುಖ, ಕಾವೇರಿ ವನ್ಯಜೀವಿಧಾಮ, ಬಳ್ಳಾರಿ ವಿಭಾಗದಲ್ಲಿ ಕೆಲಸ ಮಾಡಿರುವ ಡಾ.ರಮೇಶ್‌ ಕುಮಾರ್‌ ಅವರು ಎರಡು ವರ್ಷಗಳ ಕಾಲ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆ ನಿರ್ದೇಶಕರಾಗಿದ್ದರು. ಈ ವೇಳೆ ಅವರು ಕೈಗೊಂಡ ವನ್ಯಜೀವಿಗಳ ಸಂರಕ್ಷಣೆ ವಿಭಾಗದಲ್ಲಿನ ಕಾರ್ಯಕ್ಷಮತೆ ಹಾಗೂ ಕಾರ್ಯಚಟುವಟಿಕೆ ಪರಿಗಣಿಸಿ ಈ ವಾರಿಯರ್‌ ಪ್ರಶಸ್ತಿ ಕೊಡ ಮಾಡಲಾಗಿದೆ.

ಎರಡು ವರ್ಷದ ಅವಧಿಯಲ್ಲಿ ಆನೆ, ಹುಲಿ ಸೇರಿದಂತೆ ಹಲವಾರು ಪ್ರಾಣಿಗಳ ರಕ್ಷಣೆಗೆ ಡಾ.ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಬಂಡೀಪುರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕೆಲಸ ಮಾಡಿತ್ತು. ರಮೇಶ್‌ ಕುಮಾರ್‌ ಅವರು ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದರು.  ಅಲ್ಲದೇ ಇವರ ಅವಧಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಬಂಡೀಪುರಕ್ಕೆ ಭೇಟಿ ನೀಡಿದ್ದರು. ಕೇಂದ್ರ ಸಚಿವ ಭೂಪೇಂದರ್‌ ಯಾದವ್‌ ಕೂಡ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು.

ಕೇಂದ್ರ ಸಚಿವ ಭೂಪೇಂದರ್‌ ಯಾದವ್‌ ಅನುಪಸ್ಥಿತಿಯಲ್ಲಿ ಇಂಟರ್‌ ನ್ಯಾಷನಲ್‌ ಬಿಗ್‌ ಕ್ಯಾಟ್‌ ಅಲೈಯನ್ಸ್‌ ಮಹಾನಿರ್ದೇಶಕ ಎಸ್‌.ಪಿ.ಯಾದವ್‌, ಸುಪ್ರೀಂಕೋರ್ಟಿನ ಕೇಂದ್ರ ಉನ್ನತ ಸಮಿತಿ ಸದಸ್ಯ ಸಿ.ಪಿ.ಗೋಯಲ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಅವಸ್ತಿ ಹಾಗೂ ನಟ ರಣದೀಪ್‌ ಹೂಡಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದಲ್ಲದೇ ಇತರೆ ವಿಭಾಗಗಳಲ್ಲಿ ಮಧ್ಯಪ್ರದೇಶ ರೇವಾ ಡಿಎಫ್‌ ಇ ಅನುಪಮ್‌ ಶರ್ಮ, ಮಧ್ಯಪ್ರದೇಶ ಶಿವಪುರಿ ಮಾಧವ್‌ ರಾಷ್ಟ್ರೀಯ ಉದ್ಯಾನವನದ ಡಿಎಫ್‌ಒ ಪ್ರತಿಭಾ ಅಹಿವಾರ್‌,  ಛತ್ತೀಸಘಡ ಉದಾಂತಿ ಸೀತಾನದಿ ಹುಲಿ ಮೀಸಲು ಪ್ರದೇಶದ ಉಪ ನಿರ್ದೇಶಕ ವರುಣ್‌ ಜೈನ್‌, ಪಶ್ಚಿಮ ಬಂಗಾಲ ಸುಂದರ್‌ ಬನ್‌ ಉಪನಿರ್ದೇಶಕ ಜೋನ್ಸ್‌ ಜಸ್ಟಿನ್‌ ಅವರಿಗೂ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಕೇಡರ್‌ ನ ನಿವೃತ್ತ ಪಿಸಿಸಿಎಫ್‌  ದೀಪಕ್‌ ಸರ್ಮ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹದಿನಾರು ವರ್ಷಗಳಿಂದ ಕರ್ನಾಟಕದಲ್ಲಿ ಐಎಫ್‌ ಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವೆ. ಹಲವು ಜಿಲ್ಲೆಗಳ ನಾನಾ ಅರಣ್ಯ ವಿಭಾಗದಲ್ಲಿ ಕೆಲಸ ಮಾಡಿರುವೆ. ವನ್ಯಜೀವಿ, ರಾಷ್ಟ್ರೀಯ ಯೋಜನೆ. ಹುಲಿ ಯೋಜನೆಗಳಲ್ಲೂ ಕೆಲಸ ಮಾಡಿ ಸದ್ಯ ಕರ್ನಾಟಕ ಹುಲಿ ಯೋಜನೆ ನಿರ್ದೇಶಕರಾಗಿದ್ದೇನೆ. ದೇಶದ  28 ಐಎಫ್‌ಎಸ್‌ ಅಧಿಕಾರಿಗಳನ್ನು ಈ ಪ್ರಶಸ್ತಿಯ ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಸಮಿತಿಯನ್ನು ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ ಎಂದು ರಮೇಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

Key words: Senior IFS officer, Dr. P. Ramesh Kumar, receives, Eco Warrior Award